ಕರ್ನಾಟಕ

ಅಯೋಧ್ಯೆ ವಿವಾದ ಶೀಘ್ರ ಸಂಧಾನ ಮಾತುಕತೆ ನಡೆದು ಸಫಲವಾಗಲಿ: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ

Pinterest LinkedIn Tumblr


ಹುಬ್ಬಳ್ಳಿ: ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹೇಳಿದಂತೆ ಆದಷ್ಟು ಶೀಘ್ರ ಸಂಧಾನ ಮಾತುಕತೆ ನಡೆದು ಸಫಲವಾದರೆ ಅದು ಸಂತೋಷದ ವಿಚಾರ, ಅದನ್ನು ನಾವು ಆಶಿಸುತ್ತೇವೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ತಿಳಿಸಿದರು.

ಸಮೀಪದ ಬುಡರಸಿಂಗಿಯಲ್ಲಿ ಕರ್ನಾಟಕ ಶಿಕ್ಷಣ ಸೇವಾ ಸಮಿತಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಯೋಧ್ಯೆಯಲ್ಲಿ ನಿಗದಿಪಡಿಸಲಾದ ಜಾಗದಲ್ಲೇ ರಾಮ ಮಂದಿರ ನಿರ್ಮಾಣ ಆಗಬೇಕು. ಮಸೀದಿಯನ್ನೂ ಕಟ್ಟಲಿ. ಆದರೆ, ಸ್ವಲ್ಪ ದೂರದಲ್ಲಿ ಮಸೀದಿ ಕಟ್ಟಬೇಕು. ಎರಡೂ ಪಕ್ಕಪಕ್ಕದಲ್ಲಿ ಇದ್ದರೆ ಯಾವಾಗಲೂ ಘರ್ಷಣೆಗೆ ಕಾರಣವಾಗುತ್ತದೆ. ಪೂಜೆ, ಪ್ರಾರ್ಥನೆ ನಡೆಯುವ ಸ್ಥಳ ಸ್ವಲ್ಪ ದೂರ ಇದ್ದರೆ ಒಳಿತು ಎಂದರು.

ಚುನಾವಣೆ ಬಂದಾಗಲೇ ರಾಜಕೀಯ ಪಕ್ಷಗಳು ರಾಮ ಮಂದಿರ ವಿಚಾರ ಪ್ರಸ್ತಾಪಿಸುವುದು ಸಹಜ. ನಾನು ಆ ವಿಚಾರದಲ್ಲಿ ಪ್ರತಿಕ್ರಿಯಿಸುವುದಿಲ್ಲ. ಈಗಾಗಲೇ ಬಹಳಷ್ಟು ಬಾರಿ ಪ್ರತಿಕ್ರಿಯಿಸಿದ್ದೇನೆ. ವಿಎಚ್​ಪಿ ಕೂಡ ಚುನಾವಣೆ ಸಂದರ್ಭದಲ್ಲಿ ರಾಮ ಮಂದಿರದ ಕುರಿತು ಮಾತನಾಡುವುದಿಲ್ಲ ಎಂದು ಹೇಳಿದೆ ಎಂದರು.

ವಿಎಚ್​ಪಿಗಿಂತ ಬಿಜೆಪಿಯೇ ಹೆಚ್ಚಾಗಿ ರಾಮ ಮಂದಿರ ವಿಷಯ ಬಳಸಿಕೊಳ್ಳುತ್ತಿ ರಬಹುದು. ಅದು ಈಗಿನ ಚುನಾವಣೆಯಲ್ಲ, ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಬಳಸಿ ಕೊಂಡಿದೆ. ಅದು ಸಹಜ. ರಾಜಕೀಯ ಪಕ್ಷಗಳು ಬಳಸಿಕೊಂಡರೆ ನಮಗೆ ನೋವಾಗುವುದಿಲ್ಲ. ಅದು ಅವರ ಸ್ವಾತಂತ್ರ್ಯ ರಾಜಕೀಯ ಪಕ್ಷಗಳ ಮೇಲೆ ನಮಗೆ ನಿಯಂತ್ರಣವಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್ ಹೀಗೆ ಎಲ್ಲ ಪಕ್ಷಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ. ಅದು ಅವರಿಗೆ ಬಿಟ್ಟ ವಿಚಾರ. ಒಟ್ಟಾರೆ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಹಿತ ಮುಖ್ಯವಾಗಬೇಕು. ಹಿಂದು ಧರ್ಮಕ್ಕೆ ಅನ್ಯಾಯವಾಗಬಾರದು ಎಂದು ಪ್ರತಿಪಾದಿಸಿದರು. ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಶಿಕ್ಷಣ ಸಮಿತಿ ಪದಾಧಿಕಾರಿಗಳು ಇದ್ದರು.

ವೀರಶೈವ ಲಿಂಗಾಯತ ಒಂದೇ : ವೀರಶೈವರು ಹಾಗೂ ಲಿಂಗಾಯತರು ಇಬ್ಬರೂ ಒಂದೇ. ಅವರು ಹಿಂದು ಸಮಾಜದ ಭಾಗ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಪುನರುಚ್ಛರಿಸಿದರು.

ಅಖಿಲ ಭಾರತ ಮಾಧ್ವ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ಡ್ರಾವಿಡ ಬ್ರಾಹ್ಮಣ ಸಮಾಜದಿಂದ ಇಲ್ಲಿನ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಭಾಗವತ ರಾಮಾಯಣ ಪ್ರವಚನ ಮಾಲಿಕೆಯ ದಶಮಾನೋತ್ಸವ ಹಾಗೂ ಸಮಾರೋಪ ಸಮಾರಂಭದ 5ನೇ ದಿನದ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ಮಾಧ್ವ, ಬ್ರಾಹ್ಮಣ, ಹಿಂದು ಸಮಾಜ ಸಂಘಟನೆಗೆ ನಾನು ಸದಾ ಬದ್ಧ. ಜೀವನದುದ್ದಕ್ಕೂ ಹಿಂದು ಧರ್ಮ ಸಂಘಟನೆಗೆ ಶ್ರಮಿಸುತ್ತೇವೆ. ಸಿಕ್ಕ ಅವಕಾಶಗಳನ್ನು ಧರ್ಮ ಸಂಘಟನೆಗೆ ಬಳಸಿಕೊಳ್ಳುವೆ ಎಂದರು.

ಮಧ್ವಾಚಾರ್ಯರ ತಾತ್ಪರ್ಯ ನಿರ್ಣಯ ಗ್ರಂಥವನ್ನಿಟ್ಟುಕೊಂಡು ವಾಲ್ಮೀಕಿ ರಾಮಾಯಣ ಅಧ್ಯಯನ ಮಾಡಿದರೆ ಮಾತ್ರ ರಾಮಾಯಣದ ಒಳಾರ್ಥ ತಿಳಿಯಲಿದೆ. ರಾಮಾಯಣವನ್ನು ಸರಿಯಾಗಿ ತಿಳಿದುಕೊಳ್ಳದ ಕೆಲವರು ರಾಮನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮಾನವ ರೂಪದಲ್ಲಿದ್ದ ಶ್ರೀರಾಮ, ಅಯೋಧ್ಯೆಯ ಸರಯೂ ನದಿಯಲ್ಲಿ ಶವವಾಗಿ ತೇಲುತ್ತಿದ್ದ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದು ತಪ್ಪು. ವೈಕುಂಠ ಯಾತ್ರೆಗೆ ಶ್ರೀರಾಮ ತನ್ನ ಮೂಲರೂಪದಲ್ಲಿಯೇ ಹೋಗಿದ್ದಾನೆ ಎಂದು ವಿವರಿಸಿದರು.

ಲೋಕಲ್ಯಾಣಕ್ಕಾಗಿ ಶ್ರೀರಾಮ ಸೀತಾ ಪರಿತ್ಯಾಗ ಹಾಗೂ ರಾಜ್ಯ ಪರಿತ್ಯಾಗ ಮಾಡಿದ್ದಾನೆ. ತಂದೆ ದಶರಥನ ಮಾತು ಪಾಲಿಸಲು ರಾಜ್ಯ ಪರಿತ್ಯಾಗ ಮಾಡಿದ್ದಾನೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಸೀತಾ ಪರಿತ್ಯಾಗ ಮಾಡಿದ್ದಾನೆ. ಸೀತೆ ಸದಾ ರಾಮನ ಅಂತರಂಗದಲ್ಲಿದ್ದಳು. ಲೋಕಕ್ಕೆ ಮಾತ್ರ ರಾಮ ಸೀತೆಯನ್ನು ತ್ಯಾಗ ಮಾಡಿದಂತೆ ಕಂಡು ಬಂದರೂ ಸೀತೆ ರಾಮನಲ್ಲಿಯೇ ಇದ್ದಳು ಎಂದರು.

ಇದಕ್ಕೂ ಮೊದಲು ಪಂ. ಸಮೀರಾಚಾರ್ಯ ಕಂಠಪಲ್ಲಿ ಹಾಗೂ ಶ್ರೀಕರಾಚಾರ್ಯ ಅಡವಿ ಅವರಿಂದ ಶ್ರೀ ಕೃಷ್ಣ ಮಾನವನೋ? ಭಗವಂತನೋ? ಎಂಬುದರ ಕುರಿತು ಸಂವಾದ ನಡೆಯಿತು. ಶ್ರೀಕೃಷ್ಣ ದೇವರು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಅಂತಿಮ ಮುದ್ರೆ ಒತ್ತಿದರು. ಪೇಜಾವರ ಮಠದ ಕಿರಿಯಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರಿಂದ ಪ್ರವಚನ ನಡೆಯಿತು.

Comments are closed.