ಕರ್ನಾಟಕ

ಬಳ್ಳಾರಿ: ಕಾಂಗ್ರೆಸ್ ನಿಂದ ಉಗ್ರಪ್ಪ ಸ್ಪರ್ಧೆ, ಬಿಜೆಪಿಯಿಂದ ಹೈಕಮಾಂಡ್ ತೀರ್ಮಾನ ಇನ್ನೂ ಆಗಿಲ್ಲ…

Pinterest LinkedIn Tumblr


ಬಳ್ಳಾರಿ: ಪ್ರತಿ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದೇ ದೊಡ್ಡ ಪ್ರಶ್ನೆಯಾಗಿರುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರೆಂಬುದು ಅತಿ ದೊಡ್ಡ ಕ್ಯೂರಿಯಾಸಿಟಿ ಸೃಷ್ಟಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಎಂಬುದು ಫಿಕ್ಸ್ ಆಗಿದೆ. ಆದರೆ ಬಿಜೆಪಿ ಅಭ್ಯರ್ಥಿ ಫೈನಲ್ ಮಾಡಲು ಹೈಕಮಾಂಡ್ ತೀರ್ಮಾನ ಮಾಡಬೇಕಿದೆ.

ಗಣಿನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ವಿರುದ್ಧ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆಂಬುದುಎಂಬುದೇ ಸದ್ಯದ ದೊಡ್ಡ ಸಸ್ಪೆನ್ಸ್. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಳ್ಳಾರಿಯಲ್ಲಿ ಅಭ್ಯರ್ಥಿ ಯಾರಾಗಬೇಕೆಂಬುದು ಗಣಿಧಣಿ ಜನಾರ್ದನ ರೆಡ್ಡಿ, ಇಲ್ಲವೇ ಅವರ ಆಪ್ತಸ್ನೇಹಿತ ಶ್ರೀರಾಮುಲು ಡಿಸೈಡ್ ಮಾಡ್ತಿದ್ದರು. ಆದರೆ ಇದೀಗ ಬಿಜೆಪಿ ಹೈಕಮಾಂಡ್ ಕೈಯಲ್ಲೇ ನಿರ್ಧಾರವಾಗಲಿದೆ. ಮೇಲಾಗಿ ಈ ಬಾರಿ ಶ್ರೀರಾಮುಲು ಬದಲು ಬಳ್ಳಾರಿ ಉಸ್ತುವಾರಿ ಪಟ್ಟವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೀಡಿದೆ.

ಸದ್ಯ ಬಳ್ಳಾರಿ ಲೋಕಸಭಾ ಚುನಾವಣೆಗೆ ಜಾರಕಿಹೊಳಿ ಸಹೋದರ ವೈ. ದೇವೇಂದ್ರಪ್ಪ ಮತ್ತು ಕಾಂಗ್ರೆಸ್ ಶಾಸಕ ನಾಗೇಂದ್ರ ಸೋದರ ವೆಂಕಟೇಶ್ ಪ್ರಸಾದ್ ಅವರ ಹೆಸರುಗಳು ಕೇಳಿಬರುತ್ತಿವೆ. ವೆಂಕಟೇಶ್ ಪ್ರಸಾದ್ ಅವರ ಹೆಸರು ಬಿಜೆಪಿ ರಾಜ್ಯ ಕಮಿಟಿಯಿಂದ ಹೈಕಮಾಂಡ್​ಗೆ ಹೋಗಿದೆ. ಈ ಬಗ್ಗೆ ಶ್ರೀರಾಮುಲು ಅವರು ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಸಂಪರ್ಕಿಸಿದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಉಪ ಚುನಾವಣೆಯಲ್ಲಿ ಹೊರಗಡೆಯಿಂದ ಬಂದ ಅಭ್ಯರ್ಥಿ ಉಗ್ರಪ್ಪ ಎಂದು ಬಿಜೆಪಿ ಪ್ರಚಾರ ಮಾಡಿ ಹೀಗಳೆದಿತ್ತು. ಆದರೆ ಈ ಬಾರಿ ಬಳ್ಳಾರಿ ಜಿಲ್ಲೆಯವರೇ ಆದರೂ ಇಲ್ಲಿಯವರೆಗೆ ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿಯ ಲಿಕ್ಕರ್ ಮಾಲಿಕ, ಕಾಂಗ್ರೆಸ್ ಮುಖಂಡನಾಗಿದ್ದ ದೇವೇಂದ್ರಪ್ಪ ಬಿಜೆಪಿ ಬಾಗಿಲು ಬಡಿದು ಪಕ್ಷದ ಬಾವುಟವನ್ನು ತೊಟ್ಟು ಕಮಲ ನಾಯಕರ ಮನೆ ಮನೆಗೆ ತೆರಳಿ ಭೇಟಿ ಮಾಡಿ ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡದೆ, ಹೊರಗಡೆಯಿಂದ ಬಂದವರಿಗೆ ಬಿಜೆಪಿ ಮಣೆ ಹಾಕುತ್ತಿದ್ದಕ್ಕೆ ಸ್ಥಳೀಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೊಸಪೇಟೆಯ ಕಟಗಿ ರಾಮಕೃಷ್ಣ ಅವರು ಸ್ಥಳೀಯರಿಗೆ ಟಿಕೆಟ್ ನೀಡಬೇಕು. ದೇವೇಂದ್ರಪ್ಪನಿಗೆ ಟಿಕೆಟ್ ನೀಡಿದರೆ ಬಂಡಾಯವೇಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದೇವೇಂದ್ರಪ್ಪ ಇಲ್ಲವೇ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಬದಲಿಗೆ ಬಿಜೆಪಿ ಡಾರ್ಕ್ ಹಾರ್ಸ್ ರೀತಿ ಮತ್ತೊಬ್ಬ ಅಭ್ಯರ್ಥಿಯನ್ನು ಕೊನೆ ಗಳಿಗೆಯಲ್ಲಿ ಪ್ರಕಟಿಸುವ ಸಾಧ್ಯತೆಯೂ ಇದೆ. ಶ್ರೀರಾಮುಲು ಮನಸಿನಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪ ಅವರನ್ನು ಬಳ್ಳಾರಿ ರಣಕಣಕ್ಕಿಳಿಸುವ ಇರಾದೆಯಿದೆ. ಆದರೆ ಕಳೆದ ಉಪ ಚುನಾವಣೆಯಲ್ಲಿ ತಂಗಿ ಜೆ. ಶಾಂತ ಭಾರೀ ಅಂತರದಲ್ಲಿ ಸೋತಿದ್ದರಿಂದ ಅವರ ಮಾತನ್ನು ಹೈಕಮಾಂಡ್ ಎಷ್ಟು ನಂಬುತ್ತೆ ಅನ್ನೋದು ಸ್ಪಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಕಮಲದ ಹೂ ಪಡೆಯೋರು ಯಾರು ಎಂಬುದು ಸದ್ಯದ ಕುತೂಹಲ!

Comments are closed.