ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಭೇಟಿ ನೀಡಿದರು. ಈ ವೇಳೆ ತುರ್ತು ಸಭೆ ನಡೆಸಿದ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ತುರ್ತು ಸಭೆ ಕರೆಯಲಾಗಿತ್ತು. ಕೆಂಪೇಗೌಡ ಏರ್ಪೋರ್ಟ್ನ ಅತಿಥಿ ಗೃಹದಲ್ಲಿ ನಡೆದ ಈ ಸಭೆಯಲ್ಲಿ ಚುನಾವಣಾ ಪೂರ್ವ ತಯಾರಿ ಬಗ್ಗೆ ಪ್ರಸ್ತಾಪಿಸಿ ರಾಹುಲ್ ಗಾಂಧಿ, ರಾಜ್ಯ ನಾಯಕರಾದ ವಿರುದ್ಧ ಫುಲ್ ಗರಂ ಆದರು.
ಗುಪ್ತಚರ ಇಲಾಖೆಯ ವರದಿಯು, ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಕಾಂಗ್ರೆಸ್ ಪಕ್ಷ 12 ಕ್ಷೇತ್ರಕ್ಕಿಂತ ಹೆಚ್ಚಿನ ಸ್ಥಾನಗಳಿಸುವುದು ಸಂಶಯ ಎನ್ನುತ್ತಿದೆ. ನಿವೇನು ಮಾಡುತ್ತಿದ್ದೀರಾ? ಎಂದು ರಾಜ್ಯ ನಾಯಕರ ನಡೆಯ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ನಾವು ಹೀಗೆ ಮಾಡಿದರೆ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದೇ ರೀತಿ ಮಾಡುತ್ತಾರೆ. ಸ್ಥಳೀಯ ನಾಯಕರ ಮನವೊಲಿಸಲು ನಿಮ್ಮಿಂದ ಇನ್ನೂ ಆಗಿಲ್ವಾ? ಗುಪ್ತಚರ ವರದಿಯು 13 ಸೀಟುಗಳಿಸುವುದು ಪ್ರಯಾಸ ಅನ್ನುತ್ತಿದೆ. ನೀವ್ಯಾರೂ ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಚುನಾವಣೆ ಎದುರಿಸಲು ಇನ್ನು ಒಂದು ಪ್ಲ್ಯಾನ್ ಕೂಡ ಮಾಡಿಲ್ಲ. ನನಗೆ ಇಂತಹ ತಾತ್ಸರ ಮನೋಭಾವ ಇಷ್ಟವಾಗುವುದಿಲ್ಲ. ಈ ಬಾರಿ ನಮ್ಮ ಪಕ್ಷವು ಕನಿಷ್ಠ 18 ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದೀನಿ. ಎಲ್ಲರೂ ಕ್ಷೇತ್ರದಲ್ಲಿ ತಳಮಟ್ಟದಿಂದ ಚುನಾವಣೆ ಪ್ರಚಾರಕ್ಕೆ ಇಳಿಯಿರಿ ಎಂದು ತಾಕೀತು ಮಾಡಿದರು. ಹಾಗೆಯೇ ಇದೇ ತಿಂಗಳ 22ರಂದು ನಡೆಯುವ ಸಭೆಗೆ ಎಲ್ಲರೂ ಹೊಸ ಉತ್ಸಾಹದಿಂದ ಬನ್ನಿ ಎಂದರು. ಈ ಸಭೆಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಪ್ರಮುಖ ನಾಯಕರು ರಾಹುಲ್ ಗಾಂಧಿ ಪ್ರಶ್ನೆಯಿಂದ ಕಂಗಾಲಾದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರವನ್ನು ಬರೆದು ಕೋರಿದ್ದರು. ರಾಹುಲ್ ಗಾಂಧಿ ಅವರು ಕೇವಲ ಉತ್ತರ ಭಾರತದಿಂದ ಸ್ಪರ್ಧೆ ಮಾಡುವುದಲ್ಲ. ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ ಅದರಲ್ಲೂ ಕರ್ನಾಟಕದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡಲಿ ರಾಜ್ಯ ಕಾಂಗ್ರೆಸ್ ನಾಯಕರು ಆಹ್ವಾನ ನೀಡಿದ್ದರು. ಇದೀಗ ರಾಜ್ಯ ನಾಯಕರ ಕಾರ್ಯ ವೈಖರಿ ಬಗ್ಗೆ ಸ್ವತಃ ಎಐಸಿಸಿ ಅಧ್ಯಕ್ಷ ಸಿಟ್ಟುಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕರ್ನಾಟಕದಿಂದ ಚುನಾವಣೆ ಎದುರಿಸಲಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ.
Comments are closed.