ಕರ್ನಾಟಕ

ಬೆಂಗಳೂರು ದಕ್ಷಿಣದಿಂದ ರಾಹುಲ್ ಗಾಂಧಿ ಸ್ಪರ್ಧೆ?

Pinterest LinkedIn Tumblr


ಬೆಂಗಳೂರು: ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧಿಸಬೇಕೆಂದು ರಾಜ್ಯದ ಹಲವು ಕಾಂಗ್ರೆಸ್ ನಾಯಕರು ಕೆಲ ದಿನಗಳಿಂದಲೂ ಮನವಿ ಮಾಡುತ್ತಾ ಬರುತ್ತಿದ್ಧಾರೆ. ರಾಹುಲ್ ಅವರು ಕಣಕ್ಕಿಳಿಯಲು ಸೂಕ್ತವಿರುವ ಕೆಲ ಕ್ಷೇತ್ರಗಳನ್ನೂ ಕಾಂಗ್ರೆಸ್ ಗಮನದಲ್ಲಿಟ್ಟುಕೊಂಡಿದೆ. ಅಂಥ ಕ್ಷೇತ್ರದಲ್ಲಿ ಪ್ರಮುಖವಾದುದು ಬೆಂಗಳೂರು ಸೆಂಟ್ರಲ್. ಇದು ಕಾಂಗ್ರೆಸ್ ಭದ್ರಕೋಟೆಯಾದರೂ ಪ್ರಬಲ ಅಭ್ಯರ್ಥಿ ಇಲ್ಲದೇ ಕೈ ಪಕ್ಷ ಸತತ 2 ಬಾರಿ ಸೋತಿದೆ. ಈಗ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಅಂತೆಯೇ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸಲು ನಿರ್ಧರಿಸಿದರೆ ಬೆಂಗಳೂರು ಸೆಂಟ್ರಲ್​ನಿಂದಲೇ ಎಂಬುದು ಬಹುತೇಕ ನಿಶ್ಚಿತವಾಗಿದೆ.

ಬಿಜೆಪಿ ಕೂಡ ರಾಹುಲ್ ಸ್ಪರ್ಧಾ ಸಾಧ್ಯತೆಗೆ ತಯಾರಿ ಮಾಡಿಕೊಂಡಿದೆ. ಒಂದು ವೇಳೆ ರಾಹುಲ್ ಅವರು ಬೆಂಗಳೂರು ಸೆಂಟ್ರಲ್​ನಿಂದ ಸ್ಪರ್ಧಿಸಿದರೆ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಲು ಯೋಜಿಸಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮೂಲಗಳಿಂದ ನ್ಯೂಸ್18ಗೆ ಮಾಹಿತಿ ದೊರಕಿದೆ.

ರಾಹುಲ್ ಗಾಂಧಿ ಎಲ್ಲೇ ಸ್ಪರ್ಧಿಸಿದರೂ, ಅಥವಾ ಎರಡು ಕ್ಷೇತ್ರದಲ್ಲಿ ಕಣಕ್ಕಿಳಿದರೂ ಅಲ್ಲೆಲ್ಲಾ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಅಮೇಥಿ ಕ್ಷೇತ್ರದಲ್ಲಿ ಕಳೆದ ಬಾರಿ ರಾಹುಲ್ ಗಾಂಧಿ ಎದುರು ತೀವ್ರ ಪೈಪೋಟಿ ನೀಡಿದ್ದ ಸ್ಮೃತಿ ಇರಾನಿ ಅವರೇ ಅಮೇಥಿಯಲ್ಲಿ ಮತ್ತೊಮ್ಮೆ ಇದಿರಾಗಲಿದ್ದಾರೆ. ರಾಹುಲ್ ಅವರು ಬೆಂಗಳೂರು ಸೆಂಟ್ರಲ್​ನಿಂದ ಸ್ಪರ್ಧಿಸಿದರೆ ಹಾಲಿ ಸಂಸದ ಪಿ.ಸಿ. ಮೋಹನ್ ಬದಲು ಬೇರೆಯವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಗುಪ್ತಚರ ಇಲಾಖೆ ಮೂಲಗಳು ನೀಡಿರುವ ಮಾಹಿತಿಯಂತೆ ಮಾಳವಿಕಾ ಅವಿನಾಶ್ ಅವರನ್ನು ರಾಹುಲ್ ಗಾಂಧಿ ಎದುರಾಗಿ ಕಣಕ್ಕಿಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆನ್ನಲಾಗಿದೆ.

ರಾಹುಲ್ ಗಾಂಧಿ ಎದುರು ಪಿ.ಸಿ. ಮೋಹನ್ ಪ್ರಬಲ ಅಭ್ಯರ್ಥಿಯಲ್ಲ. ಮಹಿಳಾ ಅಭ್ಯರ್ಥಿ ಹಾಕಿದರೆ ಲಾಭ ಆಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಹೀಗಾಗಿ, ಮಾಳವಿಕಾ ಕಡೆ ಬಿಜೆಪಿಯ ಚಿತ್ತ ನೆಟ್ಟಿರಬಹುದೆಂದು ವಿಶ್ಲೇಷಿಸಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್​ನ ಪಟ್ಟಿ ನೋಡಿಕೊಂಡು ಬಿಜೆಪಿ ಅಸ್ತ್ರ ಹೂಡಲಿದೆ.

ಈ ಹಿಂದೆ, ಸೋನಿಯಾ ಗಾಂಧಿ ಅವರು ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿ ಸುಷ್ಮಾ ಸ್ವರಾಜ್ ಅವರನ್ನು ಕಣಕ್ಕಿಳಿಸಿತ್ತು. ಸೋನಿಯಾ ಅವರು ಗೆದ್ದರಾದರೂ ಸುಷ್ಮಾ ಸೋಲೊಪ್ಪುವ ಮುನ್ನ ಪ್ರಬಲ ಪೈಪೋಟಿ ನೀಡಲು ಯಶಸ್ವಿಯಾಗಿದ್ದರು.

ಒಂದು ವೇಳೆ, ಬೆಂಗಳೂರು ಸೆಂಟ್ರಲ್​ಗೆ ರಾಹುಲ್ ಗಾಂಧಿ ಬಂದರೆ ಪ್ರಕಾಶ್ ರೈ ಅವರ ಮುಂದಿನ ನಡೆ ಏನಿರಬಹುದೆಂಬ ಕುತೂಹಲವಿದೆ. ಸೆಂಟ್ರಲ್​ನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಪ್ರಕಾಶ್ ರೈ ಅವರು ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕಾಂಗ್ರೆಸ್​ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಪ್ರಕಾಶ್ ರೈ ಅವರು ತಮ್ಮ ಟೀಕೆಗಳಲ್ಲಿ ಕಾಂಗ್ರೆಸ್​ಗೂ ವಿನಾಯಿತಿ ನೀಡಿಲ್ಲ. ಅಲ್ಲದೇ, ಜನಪ್ರತಿನಿಧಿಗಳು ಕ್ಷೇತ್ರ ಬದಲಿಸುವುದನ್ನು ಅಥವಾ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ಬಲವಾಗಿ ವಿರೋಧಿಸಿದ್ದಾರೆ.

Comments are closed.