ಕರ್ನಾಟಕ

ಹಾಸನ: ಜೆಡಿಎಸ್​ ಪಾಲಾದ ಬಿಜೆಪಿ ನಾಯಕರು

Pinterest LinkedIn Tumblr


ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹಾಸನದಲ್ಲಿ ರಾಜಕೀಯ ಗರಿಗೆದರಿದೆ. ಒಂದು ಕಡೆ ಮಾಜಿ ಸಚಿವ ಎ.ಮಂಜು ಮತ್ತು ಬಿಜೆಪಿ ಶಾಸಕ ಪ್ರೀತಮ್ ಗೌಡ ಭೇಟಿ ಮಾಡಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇದರ ಬೆನ್ನಲ್ಲೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಸನದ ಬಿಜೆಪಿ ನಗರಸಭಾ ಸದಸ್ಯರನ್ನ ಜೆಡಿಎಸ್​ಗೆ ಸೆಳೆದಿದ್ದು, ಪಕ್ಷಾಂತರ ಪರ್ವ ಆರಂಭವಾಗಿದೆ.

ಜಿದ್ದಾಜಿದ್ದಿಯ ಕಣವಾದ ಹಾಸನ ಕ್ಷೇತ್ರ

ಹಾಸನ ಜಿಲ್ಲೆಯು ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದಿದ್ದು, ಈಗಿನ ಚುನಾವಣೆ ಭಾರೀ ಮಹತ್ವ ಪಡೆದಿದೆ. ಬಿಜೆಪಿಯಿಂದ ಮಾಜಿ ಸಚಿವ ಎ. ಮಂಜು ಸ್ಪರ್ಧಿಸಲಿದ್ದು ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ಜೆಡಿಎಸ್ ನಿಂದ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗಿರುವ ಕಾರಣಕ್ಕೆ ಭಾರೀ ಜಿದ್ದಾಜಿದ್ದಿ ಪಡೆದಿದೆ.

ಇಂದು ಮಾಜಿ ಸಚಿವ ಎ. ಮಂಜು ಶಾಸಕ ಪ್ರೀತಮ್ ಗೌಡ ಮನೆಗೆ ಭೇಟಿ ನೀಡಿ ಉಪಹಾರ ಕೂಟದಲ್ಲಿ ಭಾಗಿಯಾಗಿ ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಸಿದ್ದರು. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಎರಡು ದಿನಗಳಲ್ಲಿ ನಿರ್ಧಾರ ಮಾಡಿ ಸೋಮವಾರ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಮಾರ್ಚ್​​ 22 ರಂದು ಪ್ರಜ್ವಲ್ ನಾಮಪತ್ರ ಸಲ್ಲಿಕೆ

ಮಾಜಿ ಸಚಿವ ಎ. ಮಂಜು ಬಿಜೆಪಿ ಶಾಸಕನ ಮನೆಗೆ ಭೇಟಿ ನೀಡಿದ ಬಳಿಕ ಮಧ್ಯಾಹ್ನ ಪ್ರಜ್ವಲ್ ರೇವಣ್ಣ ಬಿಜೆಪಿಯ 13 ನೇ ವಾರ್ಡ್​ನ ನಗರಸಭಾ ಸದಸ್ಯ ಮಂಜುರನ್ನ ಬಿಜೆಪಿಗೆ ಸೆಳೆದರು. ಹಾಸನದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಕೆಲವು ಬಿಜೆಪಿ ಮತ್ತು ಕಾಂಗ್ರೆಸ್​ನ ಘಟಾನುಘಟಿ ನಾಯಕರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಪಜ್ವಲ್ ರೇವಣ್ಣ ಹೇಳಿದ್ದಾರೆ. ಮಾಜಿ ಶಾಸಕ ದಿವಂಗತ ಹೆಚ್​​. ಎಸ್​​. ಪ್ರಕಾಶ್​ರ ಮನೆಗೆ ಭೇಟಿ ನೀಡಿದ ಪ್ರಜ್ವಲ್​, ಪ್ರಕಾಶ್​ರ ಪುತ್ರ ಸ್ವರೂಪ್ ಜೊತೆ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪ್ರಜ್ವಲ್ ರೇವಣ್ಣ ಮಾರ್ಚ್ 22 ರಂದು ಬೆಳಿಗ್ಗೆ 9 ಗಂಟೆಯ ನಂತರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಯಾರು ಯಾವ ಪಕ್ಷ ಸೇರುತ್ತಾರೆ ಯಾರು ಯಾವ ಅಭ್ಯರ್ಥಿ ಪರ ಇದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಒಂದು ಕಡೆ ಮಾಜಿ ಸಚಿವ ಎ. ಮಂಜು ಸ್ಪರ್ಧಿಸುವ ಸಾಧ್ಯತೆಯಿದೆ ಇದ್ದು ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ಅಧಿಕೃತವಾಗಿ ಅಖಾಡಕ್ಕೆ ಇಳಿದಿದ್ದಾರೆ. ಮತದಾರ ಯಾವ ಅಭ್ಯರ್ಥಿಗೆ ಮಣೆ ಹಾಕುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.