ರಾಷ್ಟ್ರೀಯ

ಭ್ರಷ್ಟಾಚಾರ ಗ್ಯಾಲರಿಯಲ್ಲಿ ತಮ್ಮ ಪೋಟೋ: ರಮ್ಯಾ ವಿರುದ್ಧ ಸುಧೀಂದ್ರ ಕುಲಕರ್ಣಿ ಆಕ್ರೋಶ

Pinterest LinkedIn Tumblr


ಮೋದಿ ಸರ್ಕಾರದಲ್ಲಿನ ಭ್ರಷ್ಟಚಾರವನ್ನು ಟೀಕಿಸುವ ಸಲುವಾಗಿ ಕಾಂಗ್ರೆಸ್ ಮಾಜಿ ಸಂಸದೆ ಮತ್ತು ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಮಾಡಿದ ಟ್ವೀಟ್​ ಈಗ ವಿವಾದಕ್ಕೀಡಾಗಿದೆ. ಟ್ವೀಟ್​ನಲ್ಲಿ ಕನ್ನಡಿಗ ಸುಧೀಂದ್ರ ಕುಲಕರ್ಣಿ ಅವರ ಹೆಸರನ್ನು ಪ್ರಸ್ತಾಪಿಸಿ, ಹಗರಣದ ಪಾಲುದಾರ ಎಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮ್ಯಾ ಅವರು ತಮ್ಮ ಹೆಸರನ್ನು ತಪ್ಪಾಗಿ ಸೇರಿಸಿದ್ದಲ್ಲದೇ, ಫೋಟೋವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕುಲಕರ್ಣಿ ಟ್ವೀಟರ್​ನಲ್ಲಿ ತಿಳಿಸಿದ್ದಾರೆ.

ಮೋದಿ ಸರ್ಕಾರದ ಭ್ರಷ್ಟಚಾರವನ್ನು ಇಂಗ್ಲಿಷ್ ಅಕ್ಷರಮಾಲೆ ರೂಪದಲ್ಲಿ ತಿಳಿಸಲು ಆಯಾ ಹೆಸರಿನ ಉದ್ಯಮಿ ಹಾಗೂ ರಾಜಕಾರಣಿಗಳ ಫೋಟೊಗಳನ್ನು ರಮ್ಯಾ ಬಳಸಿದ್ದರು. ಅಲ್ಲದೆ ಅವರ ಮೇಲಿರುವ ಹಗರಣಗಳ ಆರೋಪಗಳನ್ನು ಪ್ರಸ್ತಾಪಿಸಿದ್ದರು. ಇದರಲ್ಲಿ ಕ್ಯೂ ಅಕ್ಷರದ ಭಾಗದಲ್ಲಿ ಸುಧೀಂದ್ರ ಕುಲಕರ್ಣಿ ಅವರ ಫೋಟೋವನ್ನು ಬಳಸಿ ಕ್ವೈರಿ ಹಗರಣ ಮಾಡಿದ್ದಾರೆ ಎಂದು ತಿಳಿಸಲಾಗಿತ್ತು.

ಇದರ ವಿರುದ್ಧ ಕೆಂಡಾಮಂಡಲರಾಗಿರುವ ಸುಧೀಂದ್ರ ಅವರು, ನೀವು ಫೋಟೋವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ನನ್ನ ಚಿತ್ರವನ್ನು ತೆಗೆದು ಹಾಕದಿದ್ದರೆ ನಿಮ್ಮ ಖಾತೆಯನ್ನು ನಿರ್ಬಂಧಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕಾಗುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಇದು ಸಚ್ ಇಂಡಿಯಾದ (ಸತ್ಯ ಭಾರತ) ಧ್ಯೇಯವೇ ಎಂಬುದನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಳಬೇಕೆಂದು ಸುಧೀಂದ್ರ ಕುಲಕರ್ಣಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ಮತ್ತು ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯ ಎಲ್​.ಕೆ ಆಡ್ವಾಣಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಸುಧೀಂದ್ರ ಕುಲಕರ್ಣಿಯವರು ಇತ್ತೀಚಿನ ದಿನಗಳಲ್ಲಿ ಸಕ್ರೀಯ ರಾಜಕೀಯದಿಂದ ದೂರ ಸರಿದಿದ್ದರು. ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮಹಮ್ಮದ್ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭ ರದ್ದು ಮಾಡಲು ಸುಧೀಂದ್ರ ಅವರು ನಿರಾಕರಿಸಿದ್ದಕ್ಕೆ ಶಿವಸೇನೆ ಕಾರ್ಯಕರ್ತರು ಅವರ ಮುಖಕ್ಕೆ ಮಸಿ ಬಳಿದಿದ್ದರು.

ಭಾರತಕ್ಕೆ ಅಗತ್ಯವಿರುವುದು ಕಾಶ್ಮೀರದಂಥ ಸಮಸ್ಯೆಗಳನ್ನು ಬಗೆಹರಿಸಬಲ್ಲ ನಾಯಕರು. ಹೀಗಾಗಿ ನಾನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ನೋಡಲು ಬಯಸುತ್ತೇನೆ ಎಂದು ಬಿಜೆಪಿ ಮಾಜಿ ನಾಯಕ, ಅಂಕಣಕಾರ ಸುಧೀಂದ್ರ ಕುಲಕರ್ಣಿ ಹೇಳಿದ್ದರು. ಈ ಹೇಳಿಕೆ ಭಾರೀ ಚರ್ಚೆಗೂ ಕೂಡ ಕಾರಣವಾಗಿತ್ತು.

Comments are closed.