ಕರ್ನಾಟಕ

ದೇವೇಗೌಡರು ನೀಡಿದ ರಹಸ್ಯ ವರದಿಗೆ ಬೆಚ್ಚಿಬಿದ್ದ ರಾಹುಲ್; ಚುನಾವಣೆಗೆ ಮುನ್ನ ಮೈತ್ರಿಪಾಳಯಕ್ಕೆ ಶಾಕ್..!

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗೆ ಹಾಗೂಹೀಗೂ ಟಿಕೆಟ್ ಹಂಚಿಕೆ ಮಾಡಿಕೊಂಡು ಪ್ರಚಾರದತ್ತ ಗಮನ ಹರಿಸುತ್ತಿರುವ ಮೈತ್ರಿಪಕ್ಷಗಳಿಗೆ, ಅದರಲ್ಲೂ ಕಾಂಗ್ರೆಸ್ಸಿಗೆ ಚಿಂತೆಯಾಗುವಂಥ ಬೆಳವಣಿಗೆಯಾಗಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರನ್ನ ದೆಹಲಿಯಲ್ಲಿ ಭೇಟಿ ಮಾಡಿ ಸೀಕ್ರೆಟ್ ವರದಿಯೊಂದನ್ನು ನೀಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಎದ್ದುಕಾಣುತ್ತಿದೆ. ಗೌಡರು ನೀಡಿದ ಫೈಲ್ ನೋಡಿ ರಾಹುಲ್ ಗಾಂಧಿ ಅಕ್ಷರಶಃ ಚಿಂತಾಕ್ರಾಂತರಾಗಿದ್ದಾರೆನ್ನಲಾಗಿದೆ. ಕೂಡಲೇ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಕರೆಸಿ ಈ ಫೈಲ್​ನಲ್ಲಿನ ಅಂಶಗಳನ್ನು ಉಲ್ಲೇಖಿಸಿ ವಿವರ ಕೋರಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಗೌಡರ ವರದಿ ಕಂಗಾಲು ಮಾಡಿದೆಯಂತೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗಂತೂ ಈ ಸೀಕ್ರೆಟ್ ವರದಿಯ ಬಗ್ಗೆ ತಿಳಿದು ಮಂದಹಾಸ ಮೂಡಿದೆ.

ಏನಿದು ಸೀಕ್ರೆಟ್ ರಿಪೋರ್ಟ್?

ಕೆಲ ಕಾಲದ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುಪ್ತಚರ ಇಲಾಖೆಯ ಸಹಾಯದಿಂದ ರಾಜ್ಯದ ಜನರ ಅಭಿಪ್ರಾಯ ಸಂಗ್ರಹಣೆ ನಡೆಸಿದ್ದರು. ಅದರ ವರದಿಯು ಕುಮಾರಸ್ವಾಮಿ ಅವರಿಗೆ ತಲುಪಿದೆ. ಕಾಂಗ್ರೆಸ್ ಕೂಡ ಆಂತರಿಕ ಸಮೀಕ್ಷೆ ನಡೆಸಿತ್ತು. ಅದರ ವರದಿಯು ಸಿದ್ದರಾಮಯ್ಯ ಬಳಿ ಸಲ್ಲಿಕೆಯಾಗಿದೆ. ಈಗ ಈ ಎರಡೂ ಸಮೀಕ್ಷೆಗಳು ರಾಹುಲ್ ಗಾಂಧಿ ಮುಂದಿವೆ. ಕಾಂಗ್ರೆಸ್ ಪ್ರತಿನಿಧಿಸುವ 9 ಕ್ಷೇತ್ರಗಳು ಕೈತಪ್ಪುವ ಸುಳಿವನ್ನು ಈ ಎರಡೂ ಸಮೀಕ್ಷೆಗಳು ನೀಡಿವೆ. ಒಂಬತ್ತುಕಾಂಗ್ರೆಸ್ ಸಂಸದರು ಮತ್ತೊಮ್ಮೆ ಆರಿಸುವುದು ಕಷ್ಟ ಎನ್ನುವಂಥ ಸ್ಥಿತಿ ಇದೆ ಎಂದು ಈ ಸಮೀಕ್ಷೆಗಳು ಹೇಳುತ್ತಿವೆಯಂತೆ.

1) ಬಳ್ಳಾರಿ: ವಿ.ಎಸ್. ಉಗ್ರಪ್ಪ ಅವರು ಕಳೆದ ವರ್ಷದ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿಯಿಂದ ಕ್ಷೇತ್ರವನ್ನು ಕಸಿದುಕೊಂಡಿದ್ದರು. ಆದರೆ, ಆ ಸಂದರ್ಭದಲ್ಲಿ ಇಡೀ ಸಮ್ಮಿಶ್ರ ಸರಕಾರವೇ ಉಗ್ರಪ್ಪ ಜೊತೆಗೆ ಒಗ್ಗಟ್ಟಿನಿಂದಿತ್ತು. ಈಗ ಬಳ್ಳಾರಿಯಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಆನಂದ್ ಸಿಂಗ್-ಕಂಪ್ಲಿ ಗಣೇಶ್ ಗಲಾಟೆ ಪ್ರಕರಣ ಕೆಟ್ಟ ಹೆಸರು ತಂದಿದೆ. ಬಿ. ನಾಗೇಂದ್ರ ಮುನಿಸಿಕೊಂಡಿದ್ದಾರೆ. ಭೀಮಾ ನಾಯ್ಕ್ ಮತ್ತು ಸಚಿವ ಪರಮೇಶ್ವರ್ ನಾಯ್ಕ್ ಅವರು ಬಹಿರಂಗವಾಗಿಯೇ ಕಚ್ಚಾಡುತ್ತಿದ್ದಾರೆ. ಬಳ್ಳಾರಿಯ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಿಲ್ಲ. ಇವೆಲ್ಲವೂ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಷ್ಟವಾಗಬಹುದು ಎಂದು ಗುಪ್ತಚರ ವರದಿಯಲ್ಲಿ ತಿಳಿಸಲಾಗಿದೆ.

2) ರಾಯಚೂರು: ಹಾಲಿ ಕಾಂಗ್ರೆಸ್ ಸಂಸದ ಬಿ.ವಿ. ನಾಯಕ್ ಅವರು ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿಲ್ಲವೆಂದು ಅವರ ವರ್ಚಸ್ಸು ಕಡಿಮೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿಯಾಗಿದ್ದ ರಮೇಶ್ ಜಾರಕಿಹೊಳಿ ಅವರು ಈ ಬಾರಿ ಜೊತೆಗಿಲ್ಲ. ಬಿಜೆಪಿ ನಾಯಕ ಶಿವನಗೌಡ ನಾಯಕ್ ಅವರು ಪ್ರಬಲರಾಗಿ ಬೆಳೆದಿದ್ದಾರೆ. ಇವೆಲ್ಲವೂ ಕಾಂಗ್ರೆಸ್​ಗೆ ಆತಂಕ ಮೂಡಿಸಲು ಕಾರಣವಾಗಿವೆ.

3) ಚಿತ್ರದುರ್ಗ: ಹಾಲಿ ಸಂಸದ ಬಿ.ಎನ್. ಚಂದ್ರಪ್ಪ ಅವರಿಗೆ ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದಲೇ ಭಾರೀ ವಿರೋಧ ಇದೆ. ವಿಧಾನಪರಿಷತ್ ಸದಸ್ಯ ರಘು ಆಚಾರ್ ಹಾಗೂ ಸ್ಥಳೀಯ ನಾಯಕರು ಚಂದ್ರಪ್ಪ ಅವರಿಗೆ ಸಹಕಾರ ನೀಡುವುದು ಅನುಮಾನವಾಗಿದೆ. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಅಲೆ ಕಾಣುತ್ತಿದೆ. ಕಳೆದ ಬಾರಿ ಸಾಕಷ್ಟು ಹಣ ಖರ್ಚು ಮಾಡಿ ಕಾಂಗ್ರೆಸ್​ಗೆ ಶಕ್ತಿಯಾಗಿದ್ದ ಹೆಚ್. ಆಂಜನೇಯ ಅವರು ಈ ಬಾರಿ ಕೈಕೊಡುವ ಸಾಧ್ಯತೆ ಇದೆ. ಹಾಗೆಯೇ, ಆಂಜನೇಯ ಅವರ ವರ್ಚಸ್ಸೂ ಕೂಡ ಮೊದಲಿನಂತಿಲ್ಲ.

4) ಕಲಬುರ್ಗಿ: ಕಾಂಗ್ರೆಸ್​ನ ಘಟಾನುಘಟಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಪತ್ತು ತಪ್ಪಿದ್ದಲ್ಲ ಎನ್ನುತ್ತದೆ ಆಂತರಿಕ ಸಮೀಕ್ಷೆ. ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಖರ್ಗೆ ಫ್ಯಾಮಿಲಿ ವಿರುದ್ಧ ತೊಡೆತಟ್ಟಿದ್ಧಾರೆ. ಕಳೆದ ವರ್ಷದಂದು ಮಾಲೀಕಯ್ಯ ಗುತ್ತೇದಾರ್ ಮತ್ತು ಬಾಬುರಾವ್ ಚಿಂಚನಸೂರ ಅವರೂ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ಖುದ್ದಾಗಿ ಕಲಬುರ್ಗಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವುದು ಬಿಜೆಪಿಗೆ ಆನೆಬಲ ಬಂದಂತಾಗಿದೆ.

5) ತುಮಕೂರು: ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ಸಿಗರಲ್ಲೇ ವಿರೋಧವಿದೆ. ಕ್ಷೇತ್ರದಲ್ಲಿ ಇವರು ಕೆಲಸ ಮಾಡಿಲ್ಲವಾಗಿದ್ದು ಕಾಂಗ್ರೆಸ್ ವಿರೋಧಿ ಅಲೆ ಇದೆ. ಜಿ. ಪರಮೇಶ್ವರ್ ಬಿಟ್ಟರೆ ಬೇರೆ ಕಾಂಗ್ರೆಸ್ಸಿಗರು ಮುದ್ದಹನುಮೇಗೌಡರ ಪರ ನಿಲ್ಲಲಿಲ್ಲ. ಇದೇ ಕಾರಣಕ್ಕೆ ಪ್ರಾಯಶಃ ತುಮಕೂರು ಸೀಟನ್ನು ಕಾಂಗ್ರೆಸ್ಸಿಗರು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಹಾದಿಯೂ ಸುಲಭದ್ದಾಗಿರುವುದಿಲ್ಲ.

6) ಚಾಮರಾಜನಗರ: ಹಾಲಿ ಸಂಸದ ಧೃವನಾರಾಯಣ ಅವರಿಗೆ ಪೂರಕವಾದ ವಾತಾವರಣ ಸದ್ಯಕ್ಕಿಲ್ಲ. ಸ್ವಪಕ್ಷದವರಾದ ಹೆಚ್.ಸಿ. ಮಹದೇವಪ್ಪ ಅವರೇ ಧ್ರುವನಾರಾಯಣರ ಸೋಲಿಗೆ ಖೆಡ್ಡಾ ತೋಡಿದರೂ ಅಚ್ಚರಿ ಇಲ್ಲ. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಸುನೀಲ್ ಬೋಸ್ ಬದಲು ಕಳಲೆ ಕೇಶವಮೂರ್ತಿ ಅವರಿಗೆ ಟಿಕೆಟ್ ಕೊಡಿಸಿದ್ದು ಮಹದೇವಪ್ಪ ಅವರಿಗೆ ಕೋಪ ತರಿಸಿದೆ. ಹೀಗಾಗಿ, ಅವರು ಈ ಚುನಾವಣೆಯಲ್ಲಿ ಸಹಕಾರ ನೀಡದೇ ಇರುವ ಸಾಧ್ಯತೆ ಇದೆ. ಇದೇ ವೇಳೆ, ಜಿಲ್ಲೆಯಲ್ಲಿ ಬಿಜೆಪಿಯ ಶಕ್ತಿ ವೃದ್ಧಿಯಾಗಿದೆ. ಒಂದು ವೇಳೆ ಹಳೆಯ ಹುಲಿ ವಿ. ಶ್ರೀನಿವಾಸ ಪ್ರಸಾದ್ ಅವರ ಮನವೊಲಿಸಿ ಟಿಕೆಟ್ ನೀಡಿದರೆ ಬಿಜೆಪಿಗೆ ಗೆಲುವು ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ.

7) ಚಿಕ್ಕೋಡಿ: ಕಳೆದ ಚುನಾವಣೆಯಲ್ಲಿ ಪ್ರಕಾಶ್ ಹುಕ್ಕೇರಿ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದವರು ರಮೇಶ್ ಜಾರಕಿಹೊಳಿ. ಈ ಬಾರಿ ಜಾರಕಿಹೊಳಿ ಅವರು ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಅಲ್ಲದೇ, ಚಿಕ್ಕೋಡಿಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ ಎನ್ನಲಾಗುತ್ತಿದೆ. ಜೊತೆಗೆ ಮೋದಿ ಅವರ ಪ್ರಭಾವವೂ ಇಲ್ಲಿ ಜೋರಾಗಿದೆ. ಇದು ಪ್ರಕಾಶ್ ಹುಕ್ಕೇರಿ ಗೆಲುವಿಗೆ ತಡೆಯಾಗಬಲ್ಲುದು.

8) ಚಿಕ್ಕಬಳ್ಳಾಪುರ: ವೀರಪ್ಪ ಮೊಯಿಲಿ ಅವರ ಹ್ಯಾಟ್ರಿಕ್ ಗೆಲುವಿನ ಆಸಗೆ ಈ ಬಾರಿ ತಣ್ಣೀರು ಬೀಳುವ ಸಾಧ್ಯತೆ ಇದೆ. ಕಳೆದ ಬಾರಿ ಮೊಯ್ಲಿ ಅವರು ಕೇವಲ 9 ಸಾವಿರ ಮತಗಳ ಅಲ್ಪ ಅಂತರದಿಂದ ಗೆಲುವು ಪಡೆದು ಬಚಾವಾಗಿದ್ದರು. ಆಗ ಮೊಯಿಲಿ ಗೆಲುವಿಗೆ ಕುಮಾರಸ್ವಾಮಿ ಪರೋಕ್ಷವಾಗಿ ಸಹಾಯವಾಗಿದ್ದರು. ಈ ಬಾರಿ ಬಿಜೆಪಿಯ ಬಚ್ಚೇಗೌಡರು ಮೊಯಲಿ ಅವರಿಗೆ ಪ್ರಬಲ ಪೈಪೋಟಿ ನೀಡಲಿದ್ಧಾರೆ. ಹಿಂದುಳಿದ ವರ್ಗಗಳ ಹೋರಾಟಗಾರ ಸಿ.ಎಸ್. ದ್ವಾರಕಾನಾಥ್ ಅವರು ಈ ಸಲ ಸ್ಪರ್ಧಿಸಿದ್ದು ಬಲಿಜ ಮತಗಳನ್ನು ಪಡೆದು ಮೊಯಿಲಿಗೆ ತಲೆನೋವು ತರಲಿದ್ಧಾರೆ. ಮೊಯಿಲಿ ಗೆಲುವಿಗೆ ಕಾರಣವಾಗಿದ್ದು ಇದೇ ಬಲಿಜ ಮತಗಳೇ. ಹಾಗೆಯೇ ಕುಮಾರಸ್ವಾಮಿ ಅವರು ಬಚ್ಚೇಗೌಡರಿಗೆ ಹೋಗಬೇಕಿದ್ದ ಒಕ್ಕಲಿಗ ಮತಗಳನ್ನ ಸೆಳೆದು ಮೊಯಿಲಿ ಗೆಲುವಿಗೆ ಕಾರಣರಾಗಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಬಚ್ಚೇಗೌಡರಿಗೆ ಪೂರಕವಾದ ವಾತಾವರಣ ಕ್ಷೇತ್ರದಲ್ಲಿದೆ. ಇದು ಕಾಂಗ್ರೆಸ್​ಗೆ ತಲೆನೋವು ತಂದಿದೆ.

9) ಕೋಲಾರ: ಕೆ.ಹೆಚ್. ಮುನಿಯಪ್ಪ ಅವರು ಎಂಟನೇ ಬಾರಿ ಗೆಲ್ಲಲು ಮಾಡುತ್ತಿರುವ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಬಲ್ಲುದು. ಸ್ವಪಕ್ಷೀಯರಾದ ರಮೇಶ್ ಕುಮಾರ್, ನಾರಾಯಣಸ್ವಾಮಿ ಮೊದಲಾದವರು ಮುನಿಯಪ್ಪ ವಿರುದ್ಧ ಸಿಡಿದೆದ್ದಿದ್ದಾರೆ. ಅವರಿಗೆ ಟಿಕೆಟ್ ನೀಡದಂತೆ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಹಾಗೂ ಜಿಲ್ಲೆಯ ಕೈ ಕಾರ್ಯಕರ್ತರು ಕೆ.ಹೆಚ್. ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದಾರೆ. ಸತತ ಏಳು ಬಾರಿ ಸಂಸರಾಗಿದ್ದರಿಂದ ಸಹಜವಾಗಿಯೇ ಕ್ಷೇತ್ರದಲ್ಲಿ ಆಡಳಿತವಿರೋಧಿ ಅಲೆ ಇದೆ. ಒಂದು ವೇಳೆ ಬಿಜೆಪಿಯು ಇಲ್ಲಿ ಪ್ರಬಲ ಅಭ್ಯರ್ಥಿ ಹಾಕಿದರೆ ಕಾಂಗ್ರೆಸ್ ಸಂಕಷ್ಟಕ್ಕೀಡಾಗುವುದು ನಿಶ್ಚಿತ.

ರಾಜ್ಯದಲ್ಲಿ ಒಟ್ಟು 10 ಕಾಂಗ್ರೆಸ್ ಸಂಸದರಿದ್ದು ಮೇಲಿನ 9 ಸಂಸದರ ರಿಪೋರ್ಟ್ ಕಾರ್ಡ್ ಕಾಂಗ್ರೆಸ್​ಗೆ ಚಿಂತೆಗೀಡು ಮಾಡಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರ ಗೆಲುವಿಗೆ ಸದ್ಯಕ್ಕೆ ಅಡೆತಡೆ ಇದ್ದಂತಿಲ್ಲ ಎನ್ನಲಾಗಿದೆ. ಡಿಕೆ ಸುರೇಶ್ ಬಗ್ಗೆ ಕ್ಷೇತ್ರದಲ್ಲಿ ಒಳಗೊಳಗೇ ವಿರೋಧವಿದೆಯಂತೆ. ಒಂದು ವೇಳೆ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಹಾಕಿದರೆ ಡಿಕೆ ಸುರೇಶ್ ಅವರಿಗೆ ತೀವ್ರ ಪೈಪೋಟಿ ನೀಡಲು ಸಾಧ್ಯವಿದೆ ಎನ್ನುತ್ತವೆ ಇಂಟೆಲಿಜೆನ್ಸ್ ರಿಪೋರ್ಟ್.

Comments are closed.