“ನನಗೆ ಕುಟುಂಬ ವ್ಯಾಮೋಹವಿಲ್ಲ. ನಾನು ಯಾರಿಗೆ ಅನ್ಯಾಯ ಮಾಡಿದ್ದೇನೆ ನೀವೇ ಹೇಳಿ,” ಎಂದು ಮೊನ್ನೆ ಹಾಸನ ಸಮಾವೇಶದಲ್ಲಿ ದೇವೇಗೌಡರು ಕಣ್ಣೀರು ಹಾಕಿದರು. ನೆನ್ನೆ ಮಂಡ್ಯದಲ್ಲಿ ಮಾತನಾಡಿದ ಅವರು, ಕುಟುಂಬಕ್ಕಾಗಿ ಸ್ವಾರ್ಥ ರಾಜಕಾರಣ ಮಾಡುತ್ತಾರೆ ಎಂದು ಬಿಂಬಿಸುವ ಪ್ರಯತ್ನ ಮಾಧ್ಯಮಗಳಿಂದ ನಡೆಯುತ್ತಿದೆ. ಆದರೆ, ಜನರ ಒತ್ತಾಸೆಗೆ ಕಟ್ಟುಬಿದ್ದು, ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯ ಕಣಕ್ಕೆ ಇಳಿಸುವುದಾಗಿ ತಿಳಿಸಿದರು.
ದೇವೇಗೌಡ ವಂಶದ ಕುಡಿ ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಕಾರ್ಯನಿರ್ವಹಿಸುವುದಾಗಿ ಸಮಾವೇಶದಲ್ಲಿ ಕ್ಷೇತ್ರದ ಏಳು ಶಾಸಕರು ಒಗ್ಗಟ್ಟು ಪ್ರದರ್ಶಿಸಿದರು. ಜೆಡಿಎಸ್ನಲ್ಲಿ ಸ್ಥಳೀಯ ಮುಖಂಡರಿದ್ದರೂ ನಿಖಿಲ್ ಕುಮಾರಸ್ವಾಮಿ ಕರೆ ತಂದಿರುವ ಬಗ್ಗೆ ಜಿಲ್ಲೆಯ ಜನರಲ್ಲಿ ಮತ್ತು ಪಕ್ಷದ ಕೆಲ ಕಾರ್ಯಕರ್ತರಲ್ಲಿ ಚರ್ಚೆ ಶುರುವಾಗಿದೆ. ಪಕ್ಷಕ್ಕಾಗಿ ತನ್ನ ಐಆರ್ಎಸ್ ಹುದ್ದೆಯನ್ನೇ ತೊರೆದು ಬಂದಿದ್ದ ಲಕ್ಷ್ಮೀ ಅಶ್ವಿನಿಗೌಡ ಅವರ ಬಗ್ಗೆ ಅನುಕಂಪ ಉಂಟಾಗಿದೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡುವುದಾಗಿ ಹೇಳಿದ್ದ ಜೆಡಿಎಸ್ ನಾಯಕರು ಇಂದು ಆ ಹೆಸರನ್ನೇ ಮರೆತಿದ್ದಾರೆ.
ಗೋ ಬ್ಯಾಕ್ ನಿಖಿಲ್ ಅಭಿಯಾನದ ಬಗ್ಗೆ ಗುಡುಗಿದ ಗೌಡರು ಲಕ್ಷ್ಮೀ ಅವರಿಗೆ ಅನ್ಯಾಯ ಮಾಡಲಿಲ್ಲವೇ ಎಂಬ ಪ್ರಶ್ನೆಗಳು ಕೇಳಿಬಂದಿತು. ಈ ಹಿನ್ನೆಲೆಯಲ್ಲಿ ತಮ್ಮ ಭಾಷಣದ ಕೊನೆಯಲ್ಲಿ ಲಕ್ಷ್ಮೀ ಗೌಡ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ‘ಲಕ್ಷ್ಮೀ ಗೌಡ ಅವರಿಗೆ ನಾವು ಅನ್ಯಾಯ ಮಾಡಿಲ್ಲ. ಅವರ ಪತಿ ಐಆರ್ಎಸ್ ಅಧಿಕಾರಿ ನನ್ನ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಾನು ದೆಹಲಿಗೆ ಹೋದಾಗ ಲಕ್ಷ್ಮೀಗೌಡ ಮತ್ತೆ ಸರ್ಕಾರಿ ಕೆಲಸಕ್ಕೆ ಸೇರುವ ಕುರಿತು ಸಚಿವರೊಂದಿಗೆ ಮಾತನಾಡಿದ್ದೇನೆ’ ಎಂದರು. ಆ ಮೂಲಕ ಪಕ್ಷದಲ್ಲಿ ಇನ್ನು ಲಕ್ಷ್ಮೀ ಅಶ್ವಿನಿ ಗೌಡ ಅವರಿಗೆ ಸ್ಥಳವಿಲ್ಲ ಎಂಬ ಸಂದೇಶವನ್ನು ಸಾರಿದರು.
ಮಂಡ್ಯದ ಮಳವಳ್ಳಿ ತಾಲೂಕಿನ ನಿಟ್ಟೂರಿನ ಕೋಡಹಳ್ಳಿ ಗ್ರಾಮದ ಲಕ್ಷ್ಮೀ ಅಶ್ವಿನಿ ಗೌಡ ಎಂಬಿಬಿಎಸ್ ಪದವೀಧರೆ. ಸಮಾಜಸೇವೆ ಮಾಡಬೇಕೆಂಬ ಉದ್ದೇಶ ಹೊಂದಿದ್ದ ಲಕ್ಷ್ಮೀ 2013ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿಸಿ, 2015ರಲ್ಲಿ ಐಆರ್ಎಸ್ ಅಧಿಕಾರಿಯಾದರು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಬದುಕು ಸುಧಾರಿಸಬೇಕೆಂಬ ಉದ್ದೇಶದಿಂದ 2017ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ನಿರ್ಧಾರದ ಹಿಂದೆ ಜೆಡಿಎಸ್ ನಾಯಕರು ಪಕ್ಷದಿಂದ ನಾಗಮಂಗಲ ಟಿಕೆಟ್ ನೀಡುವ ಆಶ್ವಾಸನೆ ಕೂಡ ಇತ್ತು.
ಕಳೆದ ವಿಧಾನಸಭೆಯಲ್ಲಿ ನಾಗಮಂಗಲ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮೀಗೆ ಕಡೆ ಸಮಯದಲ್ಲಿ ಟಿಕೆಟ್ ಕೈ ತಪ್ಪಿತು. ಕಾರಣ ಸುರೇಶ್ ಗೌಡ. ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರಿದ್ದ ಸುರೇಶ್ ಗೌಡಗೆ ಟಿಕೆಟ್ ನೀಡಿದ್ದ ನಾಯಕರ ನಡೆ ಬಗ್ಗೆ ಲಕ್ಷ್ಮೀ ಬೇಸರ ತೊಡಿಕೊಂಡಿದ್ದು ಇದೆ. ಪಕ್ಷದ ನಡುವಳಿಕೆ ಬಗ್ಗೆ ಅತೃಪ್ತಿ ತೊರಿದ ಅವರಿಗೆ ಖುದ್ದು ಅನಿತಾ ಅವರೇ ಮನವೊಲಿಸಿದರು ಎನ್ನಲಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಸೇವೆಯಲ್ಲಿರುವ ನಿಮಗೆ ಲೋಕಸಭೆ ಟಿಕೆಟ್ ನೀಡಲಾಗುವುದು. ಇದರಿಂದಾಗಿ ಕೇಂದ್ರಕ್ಕೆ ನಮ್ಮ ಸಮಸ್ಯೆ ಮುಟ್ಟಿಸಲು ನೀವು ಧ್ವನಿಯಾಗುತ್ತೀರಾ. ಉಪ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಟಿಕೆಟ್ ನೀಡಲಾಗುವುದು ಎಂಬ ಆಶ್ವಾಸನೆಯನ್ನು ನೀಡಿದರು. ಜೆಡಿಎಸ್ ವರಿಷ್ಠರ ಮಾತಿಗೆ ತಲೆಬಾಗಿದ ಅಶ್ವಿನಿಗೆ ಕಾದಿದ್ದು ಮತ್ತೊಂದು ಆಘಾತದ ಜೊತೆಗೆ ನಿರಾಸೆ.
ಲೋಕಸಭೆಯ ಉಪ ಚುನಾವಣೆಯಲ್ಲಿ ಶಿವರಾಮೇಗೌಡಗೆ ಟಿಕೆಟ್ ನೀಡುವ ಮೂಲಕ ಲಕ್ಷ್ಮೀ ಅವರನ್ನು ಮತ್ತೊಮ್ಮೆ ಕಡೆಗಣಿಸಿತ್ತು. ನಮಗೆ ಗೆಲುವಿನ ಲೆಕ್ಕಾಚಾರ ಮಾತ್ರ ಮುಖ್ಯ ಎಂಬುದನ್ನು ಮತ್ತೊಮ್ಮೆ ಪಕ್ಷ ಸಾಬೀತು ಮಾಡಿತು. ಇದರಿಂದ ಅಸಮಾಧಾನಗೊಂಡ ಲಕ್ಷ್ಮೀ ಜೆಡಿಎಸ್ ನಾಯಕರ ವಿರುದ್ಧ ಬಹಿರಂಗವಾಗಿ ಸಿಟ್ಟು ಹೊರಹಾಕಿದರು.
‘ಜೆಡಿಎಸ್ ನಾಯಕರು ನನಗೆ ಒಂದಲ್ಲ ಎರಡು ಬಾರಿ ಅನ್ಯಾಯ ಮಾಡುವ ಮೂಲಕ ಶಾಕ್ ನೀಡಿದರು ಎಂದು ಸಿಟ್ಟು ಹೊರ ಹಾಕಿದರು. ನಾನು ಇಲ್ಲಿಯವರೆಗೆ ಕೇವಲ ಒಬ್ಬ ನಾಗರಿಕ ಸೇವಾ ಅಧಿಕಾರಿಯಂತೆ ಕಾರ್ಯನಿರ್ವಹಿಸಿ, ಪಕ್ಷಕ್ಕಾಗಿ ದುಡಿದೆ. ಆದರೆ, ಈಗ ನನ್ನ ಚಿಂತನೆಗಳನ್ನು ಬದಲಾಯಿಸಿಕೊಂಡು, ಒಬ್ಬ ರಾಜಕಾರಣಿಯಂತೆ ಕೆಲಸ ಮಾಡಬೇಕಿದೆ. ಇದನ್ನು ಸಮಯ ಬಂದಾಗ ತಿಳಿಸುವೆ’ ಎಂದು ಗುಡುಗಿದ್ದರು. ಇದಾದ ಬಳಿಕ ಪಕ್ಷದಿಂದ ದೂರಾದ ಅವರು, ಯಾವುದೇ ಕಾರ್ಯಕ್ರಮ ಹಾಗೂ ಪಕ್ಷ ಸಂಘಟನೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಲೋಕಸಭಾ ಉಪ ಚುನಾವಣೆ ನಡೆದ ಆರು ತಿಂಗಳ ಬಳಿಕ ಮತ್ತೊಂದು ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಮಂಡ್ಯ ಈಗ ಕೇಂದ್ರ ಬಿಂದುವಾಗಿದೆ. ಸುಮಲತಾ ಅಂಬರೀಷ್ ಸ್ಪರ್ಧೆಯಿಂದಾಗಿ ಈ ಕ್ಷೇತ್ರ ಕದನ ಕಣವಾಗಿ ಮಾರ್ಪಟ್ಟಿದೆ. ಜೆಡಿಎಸ್ ಕಾರ್ಯಕರ್ತರ ಒತ್ತಡದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಪಕ್ಷ ಹೇಳುತ್ತಿದೆ. ಆದರೆ, ಅದೇ ಮಂಡ್ಯದ ಜನ ಲಕ್ಷ್ಮೀ ಅಶ್ವಿನಿ ಗೌಡ ಅವರಿಗೆ ಜೆಡಿಎಸ್ ಅನ್ಯಾಯ ಮಾಡಿದೆ ಎಂದು ಆರೋಪಿಸುತ್ತಿದ್ದಾರೆ.
Comments are closed.