ಚುನಾವಣೆ ಒಂದರ್ಥದಲ್ಲಿ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಭಾರತದಂತೆ ಪ್ರಪಂಚದ ನೂರಾರು ದೇಶಗಳಲ್ಲಿ ಚುನಾವಣೆ ಮೂಲಕವೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ, ಕೆಲ ದೇಶಗಳಲ್ಲಿ ಸರ್ವಾಧಿಕಾರಿ ನೀತಿ ಜಾರಿಯಲ್ಲಿದೆ. ಒಂದು ಅಂದಾಜಿನ ಪ್ರಕಾರ ಚುನಾವಣಾ ಖರ್ಚಿನ ಲೆಕ್ಕಾಚಾರ ಬಂದರೆ ಅಮೆರಿಕ ದೇಶದ ಚುನಾವಣೆಯ ನಂತರದ ಸ್ಥಾನದಲ್ಲಿ ಭಾರತದ ಚುನಾವಣೆ ಸ್ಥಾನ ಪಡೆಯುತ್ತದೆ. ಅಂದರೆ ಚುನಾವಣಾ ಪ್ರಕ್ರಿಯೆಗೆ ದೇಶ ಅಷ್ಟು ದೊಡ್ಡ ಮಟ್ಟದ ಹಣವನ್ನು ವ್ಯಯಿಸುತ್ತದೆ.
2010ರ ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಪ್ರಪಂಚದ ಮೂರನೇ ಒಂದುಭಾಗದಷ್ಟು ಬಡವರು ಭಾರತದಲ್ಲಿದ್ದಾರೆ. ದೇಶದಲ್ಲಿ ಶೇ.68.7ರಷ್ಟು ಜನರ ದಿನದ ಆದಾಯ ರೂ. 144ಕ್ಕಿಂತಲೂ ಕಡಿಮೆ ಇದೆ. ಅಲ್ಲದೇ ಶೇ. 32.7ರಷ್ಟು ಭಾರತೀಯರು ಅಂತರಾಷ್ಟ್ರೀಯ ಬಡತನ ರೇಖೆಗಿಂತಲೂ ಕೆಳಗಿನ ಸ್ತರದಲ್ಲಿ ಬದುಕುತ್ತಿದ್ದಾರೆ. ಒಂದೆಡೆ ಕಿತ್ತು ತಿನ್ನುವ ಬಡತನವಿದ್ದರೆ ಮತ್ತೊಂದೆಡೆ ಆಗರ್ಭ ಶ್ರೀಮಂತರು ಚುನಾವಣೆ ಅಭ್ಯರ್ಥಿಗಳಾಗಿದ್ದಾರೆ. ದೇಶದ ಬಡತನದ ಬಗ್ಗೆ ಸಂಕ್ಷಿಪ್ತ ವಿವರ ನೀಡಿದ ಜತೆಜತೆಗೆ ಚುನಾವಣಾ ಕಣದಲ್ಲಿರುವ ಕರ್ನಾಟಕದ ಆಗರ್ಭ ಶ್ರೀಮಂತರ ಬಗ್ಗೆಯೂ ವಿವರ ಇಲ್ಲಿ ನೀಡಲಾಗಿದೆ.
ಜನರಿಂದ ಚುನಾಯಿತರಾಗಲು ಕಣದಲ್ಲಿ ಈ ಬಾರಿ ಅನೇಕ ಶ್ರೀಮಂತ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಲ್ಲಿ ರಾಜ್ಯದ ಲೋಕಸಭಾ ಚುನಾವಣಾ ಕಣದಲ್ಲಿರುವ ಲೋಕಸಭಾ ಸಂಭಾವ್ಯ ಅಭ್ಯರ್ಥಿಗಳು ಯಾರು ಎಂಬ ಮಾಹಿತಿ ಇಲ್ಲಿದೆ.
ಪ್ರಿಯಾಕೃಷ್ಣ:
ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಿಯಾಕೃಷ್ಣ ಒಟ್ಟಾರೆ ಆಸ್ತಿ ರೂ. 802.74 ಕೋಟಿ. ಕಳೆದ ವಿಧಾನಸಭಾ ಚುನಾವಣೆಗೆ ಸಲ್ಲಿಸಿದ ಮೊತ್ತ ಇದಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಇವರು ಈಗಾಗಲೇ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದಾರೆ.
ಡಿಕೆ ಸುರೇಶ್:
ಕಳೆದ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಅವರು, ತಮ್ಮ ಬಳಿ ರೂ. 85.73 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು. ಕೇಂದ್ರ ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ರೂ. 15.77 ಕೋಟಿ ಚರಾಸ್ತಿ ಮತ್ತು ಕೃಷಿ ಹಾಗೂ ಕೃಷಿಯೇತರ ಭೂಮಿ, ನಿವೇಶನಗಳು ಸೇರಿದಂತೆ ರೂ. 69.96 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಪ್ರಕಾಶ್ ರೈ:
ಬೆಂಗಳೂರು ಕೇಂದ್ರ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಈಗಾಗಲೇ ನಟ ಪ್ರಕಾಶ್ ರೈ ಘೋಷಿಸಿದ್ದಾರೆ. ನಟನೆ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಪ್ರಕಾಶ್ ಸುಮಾರು ರೂ. 150 ಕೋಟಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಪಿಸಿ ಮೋಹನ್:
ಬೆಂಗಳೂರು ಕೇಂದ್ರದ ಹಾಲಿ ಸಂಸದರಾಗಿರುವ ಪಿಸಿ ಮೋಹನ್ ಕೂಡ ರೂ. 25.30 ಕೋಟಿ ಒಡೆಯರಾಗಿರುವುದಾಗಿ ಕಳೆದ ಲೋಕಸಭಾ ಚುನಾವಣೆ ವೇಳೆ ನಾಮಪತ್ರದಲ್ಲಿ ದಾಖಲಿಸಿದ್ದರು. ಈ ಬಾರಿ ಕೂಡ ಬೆಂಗಳೂರು ಕೇಂದ್ರದಿಂದ ಪಿಸಿ ಮೋಹನ್ಗೆ ಬಿಜೆಪಿ ಟಿಕಟ್ ನೀಡಲಿದೆ.
ಸುರೇಶ್ ಅಂಗಡಿ:
ಬೆಳಗಾವಿಯ ಬಿಜೆಪಿ ಹಾಲಿ ಸಂಸದರಾಗಿರುವ ಸುರೇಶ್ ಅಂಗಡಿ ರೂ. 37 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಈ ಬಾರಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರದೇ ಪಕ್ಷದ ಪ್ರಭಾಕರ್ ಕೋರೆ ಕೂಡ ತಾನು ಆಕಾಂಕ್ಷಿ ಎಂದು ತಿಳಿಸಿದ್ದಾರೆ.
Comments are closed.