ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಜೆಡಿಎಸ್ ಮತ್ತು ಕಾಂಗ್ರೆಸ್ನಡುವೆ ತೀವ್ರ ಕಗ್ಗಂಟಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಒಪ್ಪಿದರೂ ಪಟ್ಟುಬಿಡದ ಸುಮಲತಾ ಕಾಂಗ್ರೆಸ್ನಿಂದ ಟಿಕೆಟ್ ಪಡೆಯಲು ನೇರವಾಗಿ ಹೈಕಮಾಂಡ್ ಮೇಲೆ ಒತ್ತಡ ತರುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.
ಹೈಕಮಾಂಡ್ ಮೂಲಕ ಟಿಕೆಟ್ ಪಡೆಯಲು ದಕ್ಷಿಣ ಭಾರತದ ಖ್ಯಾತ ನಟರಾದ ಚಿರಂಜೀವಿ ಮತ್ತು ಕಮಲ್ ಹಾಸನ್ ಮೂಲಕ ಒತ್ತಡ ಹಾಕಿಸಿದ್ದಾರೆ. ಈ ಸಂಬಂಧ ಚಿರಂಜೀವಿ ಅವರು ಕೆ.ಸಿ. ವೇಣುಗೋಪಾಲ್ ಜೊತೆ ಮಾತುಕತೆ ನಡೆಸಿದರೆ, ಕಮಲ್ ಹಾಸನ್ ಅವರು ನೇರವಾಗಿ ರಾಹುಲ್ ಗಾಂಧಿ ಅವರನ್ನೇ ಸಂಪರ್ಕಿಸಿ, ಸುಮಲತಾ ಅಂಬರೀಶ್ಗೆ ಟಿಕೆಟ್ ನೀಡುವಂತೆ ಕೋರಿದ್ದಾರೆ. ಇದು ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಉಭಯ ನಾಯಕರ ಮನವಿ ಮಾಡಿದ್ದಾರೆ.
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವೇಣುಗೋಪಾಲ್, ಸುಮಲತಾ ತರುತ್ತಿರುವ ಒತ್ತಡದ ಬಗ್ಗೆ ಹೇಳಿದ್ದಾರೆ. ಮತ್ತು ಈ ವಿಚಾರವಾಗಿ ಸಿದ್ದರಾಮಯ್ಯ ಅವರ ಸಲಹೆಯನ್ನು ಕೇಳಿದ್ದಾರೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಅದು ಮುಗಿದ ಅಧ್ಯಾಯ. ಸುಮಲತಾಗೆ ಟಿಕೆಟ್ ಕೊಟ್ಟರೆ ಮೈತ್ರಿಗೆ ಧಕ್ಕೆ ಆಗಬಹುದು. ಎಷ್ಟೇ ಒತ್ತಡ ಬಂದರೂ ಸುಮಲತಾಗೆ ಟಕೆಟ್ ನೀಡುವುದು ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಸಲಹೆ ಬಳಿಕ ಸುಮಲತಾಗೆ ಟಿಕೆಟ್ ಕೊಡದಿರಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಜೊತೆಗೆ ಸುಮಲತಾ ಅವರ ಮನವೊಲಿಸಲು ಪ್ರಯತ್ನಿಸುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ.
Comments are closed.