ಕರ್ನಾಟಕ

ತೇಜಸ್ವಿನಿ ವಿರುದ್ಧ ರೋಹಿಣಿ ನೀಲೇಕಣಿ ಸ್ಪರ್ಧೆ..?

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಎಲ್ಲರ ಗಮನ ಬೆಂಗಳೂರು ದಕ್ಷಿಣ ಕ್ಷೇತ್ರದ ಕಡೆ ವಾಲಿದೆ. ಈವರೆಗೆ​​ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದ ಕಾಂಗ್ರೆಸ್​​ನಿಂದ ಮಹಿಳೆಯೊಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ನಂದನ್​ ನಿಲೇಕಣಿ ಪತ್ನಿ ರೋಹಿಣಿ ನೀಲೇಕಣಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಅನಂತಕುಮಾರ್​ ಆರು ಬಾರಿ ಪ್ರತಿನಿಧಿಸಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಕ್ಷೇತ್ರ ತೆರವಾಗಿದ್ದು, ಅವರ ಹೆಂಡತಿ ತೇಜಸ್ವಿನಿ ಅನಂತಕುಮಾರ್​​ ಅವರಿಗೆ ಬಿಜೆಪಿ ಟಿಕೆಟ್​​ ನೀಡಲಿದೆ ಎಂದು ಹೇಳಲಾಗುತ್ತಿದೆ.

ಇಂದು ತೇಜಸ್ವಿನಿ ಅನಂತಕುಮಾರ್​​ ಮಾಜಿ ಡಿಸಿಎಂ ಆರ್​.ಅಶೋಕ್​ ಅವರನ್ನು ಭೇಟಿ ಮಾಡಿದ್ದರು. ರಹಸ್ಯ ಸ್ಥಳದಲ್ಲಿ 1 ಗಂಟೆಗೂ ಹೆಚ್ಚು ಕಾಲ ಇಬ್ಬರು ನಾಯಕರು ಚರ್ಚೆ ನಡೆಸಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್​​ ಕಣಕ್ಕಿಳಿಯುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿತ್ತು. ಹೈಕಮಾಂಡ್​​ ನಿರ್ಧಾರಕ್ಕೆ ತೇಜಸ್ವಿನಿ ಅನಂತಕುಮಾರ್​​ ಸೈ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ಬಿಜೆಪಿ ತೇಜಸ್ವಿನಿ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್​ ಕೂಡ ರೋಹಿಣಿ ನೀಲೇಕಣಿ ಅವರನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ರೋಹಿಣಿ ನೀಲೇಕಣಿ ಅವರನ್ನು ಪಕ್ಷದ ಹಿರಿಯ ನಾಯಕರು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬಾರಿ ಅನಂತಕುಮಾರ್​ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್​​ ಅಭ್ಯರ್ಥಿ ನಂದನ್​ ನೀಲೇಕಣಿ ಸೋಲು ಅನುಭವಿಸಿದ್ದರು. ಈ ಬಾರಿಯೂ ಸಹ ಕಾಂಗ್ರೆಸ್​​ನಿಂದ ನೀಲೇಕಣಿ ಅವರೇ ನಿಲ್ಲುವಂತೆ ಕಾಂಗ್ರೆಸ್​​ ಮನವಿ ಮಾಡಿತ್ತು. ಆದರೆ ಕಳೆದ ಬಾರಿ ಸೋಲಿನ ರುಚಿ ಕಂಡ ಕಾರಣ ನೀಲೇಕಣಿ ಕಾಂಗ್ರೆಸ್​​ನ ಮನವಿಯನ್ನು ನಿರಾಕರಿಸಿದ್ದರು.

ಬಳಿಕ ಕಾಂಗ್ರೆಸ್​​ನಿಂದ ರಾಮಲಿಂಗಾರೆಡ್ಡಿ ಹಾಗೂ ಪ್ರಿಯಾಕೃಷ್ಣ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಪ್ರಿಯಾಕೃಷ್ಣ ಗೋವಿಂದರಾಜನಗರದ ಸೋಲಿನ ಬಳಿಕ ಬೆಂಗಳೂರು ದಕ್ಷಿಣದಲ್ಲಿ ಕೆಲಸ ಆರಂಭಿಸಿದ್ದರು. ಬಿಜೆಪಿಯಿಂದ ತೇಜಸ್ವಿನಿ ಅನಂತಕುಮಾರ್​ ಸ್ಪರ್ಧಿಸಿದರೆ, ತಾನು ಕಾಂಗ್ರೆಸ್​​ನಿಂದ ಅಖಾಡಕ್ಕಿಳಿಯುವುದಾಗಿ ರಾಮಲಿಂಗಾರೆಡ್ಡಿ ಈ ಹಿಂದೆ ಹೇಳಿದ್ದರು.

Comments are closed.