ಕರ್ನಾಟಕ

ಯಡಿಯೂರಪ್ಪಗೆ ಮುಳುವಾದ ಮಾತು; ಹೈ ಕಮಾಂಡ್​ ಹತ್ತಿರವಾದ ಸಂತೋಷ್​

Pinterest LinkedIn Tumblr


ಬೆಂಗಳೂರು: ಈ ಬಾರಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಡುತ್ತೇವೆ ಎಂದು ಹೈಕಮಾಂಡ್​ಗೆ ಮಾತುಕೊಟ್ಟಿರುವ ಯಡಿಯೂರಪ್ಪ ಅವರ ಮಾತೇ ಅವರಿಗೆ ಮುಳುವಾಗಿದೆ. ಅಷ್ಟೇ ಅಲ್ಲದೇ ಅವರ ಎಡವಟ್ಟು ಹೇಳಿಕೆಯಿಂದಾಗಿ ಹೈ ಕಮಾಂಡ್​ ಕೂಡ ಅವರನ್ನು ದೂರ ಮಾಡುತ್ತಿದೆ ಎಂಬ ಹೊಸ ಸುದ್ದಿ ಹೊರಬಂದಿದೆ

ಈ ಬಾರಿ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಹೈಕಮಾಂಡ್​ ಯಡಿಯೂರಪ್ಪ ಅವರ ಹೆಗಲಿಗೆ ಏರಿಸಿತಾದರೂ ಸದ್ಯದ ಮಟ್ಟಿಗೆ ಅವರು ಈಗ ದೂರವಾಗಿದ್ದಾರೆ. ಇದಕ್ಕೆ ಕಾರಣ, ಪುಲ್ವಾಮಾ ಘಟನೆ ಬಗ್ಗೆ ಅವರು ನೀಡಿದ ಹೇಳಿಕೆ. ಚುನಾವಣೆಗೆ ಯುದ್ಧ ಮಾಡಲಾಗಿದೆ ಎಂಬ ರೀತಿ ಅವರು ನೀಡಿರುವ ಹೇಳಿಕೆ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮುಜಗರ ಉಂಟು ಮಾಡಿತು. ಈ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಯಡಿಯೂರಪ್ಪ ಅವರನ್ನು ದೂರ ಮಾಡಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಪಕ್ಷ ಸಂಘಟನೆ ಕುರಿತು ಬಿಎಲ್​ ಸಂತೋಷ್​ ಅವರ ಸಂಪರ್ಕವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ

ರಾಷ್ಟ್ರೀಯ ರಾಜಕಾರಣದಿಂದ ಪಕ್ಷ ಸಂಘಟನೆಗಾಗಿ ರಾಜ್ಯಕ್ಕೆ ಆಗಮಿಸಿರುವ ಬಿಎಲ್​ ಸಂತೋಷ್​ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ, ರಾಜ್ಯದಲ್ಲಿ ಅಯ್ಯಪ್ಪ ಪ್ರವೇಶ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿ ಹೈಕಮಾಂಡ್​ ಮೆಚ್ಚುಗೆಗೆ ಪಾತ್ರವಾಗಿದ್ದರು.

ಯಡಿಯೂರಪ್ಪ ಮಾತಿನಿಂದ ಸಿಟ್ಟಿಗೆದ್ದಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ, ಈಗ ರಾಜ್ಯದ ಕುರಿತಾದ ವಿಷಯಗಳನ್ನು ಸಂತೋಷ್​ ಅವರೊಂದಿಗೆ ಚರ್ಚೆ ನಡೆಸಿದ್ದಾರೆ, ಅಲ್ಲದೇ, ತಳಮಟ್ಟದಿಂದಲೂ ಪಕ್ಷ ಯಾವ ರೀತಿ ಸಂಘಟನೆಯಾಗುತ್ತಿದೆ ಎಂಬ ಕುರಿತು ಪ್ರತಿ ಮಾಹಿತಿ ಅವರಿಂದಲೇ ಕೇಳಿ ಪಡೆಯುತ್ತಿದ್ದಾರೆ. ಇದರಿಂದಾಗಿ ಪಕ್ಷದಲ್ಲಿ ಬಿಎಸ್​ ಯಡಿಯೂರಪ್ಪ ಸೈಡ್​ಲೈನ್​ ಆಗುತ್ತಿದ್ದು, ಸಂತೋಷ್​ ಇದರ ಲಾಭಾವನ್ನು ಸಂಪೂರ್ಣವಾಗಿ ಪಡೆಯುತ್ತಿದ್ದಾರೆ.

ಈಗಾಗಲೇ ಬಿಎಸ್​ ಯಡಿಯೂರಪ್ಪ ಅವರ ಎಡವಟ್ಟು ಮಾತುಗಳಿಂದ ಲಾಭಾ ಪಡೆದಿರುವ ಸಂತೋಷ್​ಗೆ ಲೋಕಸಭಾ ಚುನಾವಣೆ ಜವಬ್ದಾರಿಯನ್ನು ಹೈಕಮಾಂಡ್​ ನೀಡಿದೆ. ಅಲ್ಲದೆ ಸಂತೋಷ್​ ಕೂಡ ತಮ್ಮ ಅಧಿಕಾರ ಚಲಾಯಿಸಲು ಮುಂದಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜವಾಬ್ದಾರಿ ಹೊತ್ತಿದ್ದಾರೆ.

ಅನಂತ್ ಕುಮಾರ್​ ಅವರ ಶಿಷ್ಯರಾಗಿದ್ದ ಸಂತೋಷ್​ಗೆ ಕ್ಷೇತ್ರದ ಚುನಾವಣೆ ಜವಬ್ದಾರಿ ಹೊತ್ತು ಗೊಂಡಿದ್ದು, ತೇಜಸ್ವಿನಿ ಪರ ಬ್ಯಾಟಿಂಗ್ ಮಾಡಿದ್ದಾರೆ. ತೇಜಸ್ವಿನಿ ರಾಜಕೀಯ ಪ್ರವೇಶಕ್ಕೆ ಈಗಾಗಲೇ ಆರ್​ ಅಶೋಕ್​ ಹಾಗೂ ಸುಬ್ಬಾನರಸಿಂಹ ಟೀಮ್​ ವಿರೋಧಿಸಿದ್ದರು. ಅವರಿಗೆ ಬಿಸಿ ಮುಟ್ಟಿಸಿರುವ ಸಂತೋಷ್​​ ಪಕ್ಷದ ಪರ ಕೆಲಸ ಮಾಡಿ, ವ್ಯಕ್ತಿಪರ ಅಲ್ಲ ಎಂದು ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.

ಅನಂತ್​​ ಕುಮಾರ್​ ಬದುಕಿದ್ದಾಗ ಅವರಿಂದ ಸಹಾಯ ಪಡೆದು, ಈಗ ತೇಜಸ್ವಿನಿ ಅನಂತಕುಮಾರ್ ಪ್ರವೇಶಕ್ಕೆ ಅಡ್ಡಿಯಾಗುತ್ತಿದ್ದೀರಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಕೇವಲ ಇವರಿಗಷ್ಟೆ ಅಲ್ಲದೇ ರಾಜ್ಯದ ಅನೇಕ ನಾಯಕರಿಗೂ ಕ್ಲಾಸ್​ ನೀಡಿರುವ ಸಂತೋಷ್​ ಪಕ್ಷದಲ್ಲಿ ಪ್ರಬಲವಾಗಿ ಬೆಳೆಯುತ್ತಿದ್ದಾರೆ.

ಯಡಿಯೂರಪ್ಪ ಅವರ ಎಡವಟ್ಟುಗಳನ್ನು ಬಳಸಿಕೊಂಡು ಈಗಾಗಲೇ ಹೈಕಮಾಂಡ್​ಗೆ ಹತ್ತಿರವಾಗಿರುವ ಸಂತೋಷ್​ ಮುಂದಿನ ದಿನಗಳಲ್ಲಿ ಅವರನ್ನು ಮಿರಿಸಿ ಬೆಳೆದರೂ ಆಶ್ಚರ್ಯವಿಲ್ಲ ಎಂಬ ಸ್ಥಿತಿ ಕಮಲಪಾಳೆಯದಲ್ಲಿ ಮೂಡಿದೆ.

Comments are closed.