ರಾಷ್ಟ್ರೀಯ

ಅಯೋಧ್ಯೆ ಭೂ ವಿವಾದ: ಸಂಧಾನಕ್ಕೆ ಸುಪ್ರೀಂನಿಂದ ರವಿಶಂಕರ್ ಗುರೂಜಿ​ ಸೇರಿ ಮೂವರ ನೇಮಕ

Pinterest LinkedIn Tumblr


ನವದೆಹಲಿ: ದೇಶದ ಅತೀ ದೊಡ್ಡ ವಿವಾದಾತ್ಮಕ ಅಯೋಧ್ಯೆ ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮಹತ್ವದ ಆದೇಶ ಹೊರಡಿಸಿದೆ. ಆಧ್ಯಾತ್ಮ ಗುರು ಹಾಗೂ ಆರ್ಟ್​​ ಆಫ್​ ಲಿವಿಂಗ್​ ಸ್ಥಾಪಕ ಶ್ರೀ ಶ್ರೀ ರವಿಶಂಕರ್​ ಗುರೂಜಿ ಸೇರಿ ಮೂವರನ್ನು ಸಂಧಾನಕಾರರನ್ನಾಗಿ ನೇಮಕ ಮಾಡಿದೆ.

ಸುಪ್ರೀಂಕೋರ್ಟ್​​ನ ಮಾಜಿ ನ್ಯಾಯಮೂರ್ತಿ ಎಫ್​.ಎಮ್​. ಖಲೀಫುಲ್ಲಾ, ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ್​ ಪಾಂಚು ಅವರನ್ನು ಸಂಧಾನಕಾರರನ್ನಾಗಿ ನೇಮಿಸಿ ಸುಪ್ರೀಂ ಆದೇಶ ಹೊರಡಿಸಿದೆ. ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸಿ 2 ತಿಂಗಳೊಳಗೆ ಸಂಧಾನ ಪ್ರಕ್ರಿಯೆ ಪೂರ್ಣಗೊಳ್ಳಬೇಕು. 4 ವಾರಗಳೊಳಗೆ ಮೊದಲ ವರದಿ ನೀಡಬೇಕು. ಫೈಜಾಬಾದ್​ನಲ್ಲಿ ಸಂಧಾನ ಪ್ರಕ್ರಿಯೆ ನಡೆಯಬೇಕು. ಇವೆಲ್ಲವೂ ಗುಪ್ತವಾಗಿರಬೇಕು ಎಂದು ಕೋರ್ಟ್​​ ತನ್ನ ಆದೇಶದಲ್ಲಿ ಹೇಳಿದೆ.

ಸಂಧಾನಕಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ, ಅವರಿಗೆ ಆದೇಶ ನೀಡುವ ಹಕ್ಕು ಇರುವುದಿಲ್ಲ. ಸಂಧಾನ ಸಭೆ ವಿಫಲವಾದರೂ ಸುಪ್ರೀಂಕೋರ್ಟ್​ ತೀರ್ಪು ನೀಡಲೇಬೇಕು ಎಂದು ಹಿರಿಯ ವಕೀಲ ಬಿ.ವಿ. ಆಚಾರ್ಯ ನ್ಯೂಸ್​ 18ಗೆ ಪ್ರತಿಕ್ರಿಯೆ ನೀಡಿದರು.

ಇನ್ನು, ಸಂಧಾನ ಸಮಿತಿಗೆ ರವಿಶಂಕರ್​ ನೇಮಕ ಆದೇಶವನ್ನು ಅಖಿಲ ಹಿಂದೂ ಮಹಾಸಭಾ ಸಂಘಟನೆ ಸ್ವಾಗತಿಸಿದೆ. ಅವರ ನೇತೃತ್ವದಲ್ಲಿ ಸಂಧಾನ ಸಭೆ ಸಫಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ನ್ಯಾಯಾಲಯ ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿತ್ತು. ಈ ವೇಳೆ ಉತ್ತರಪ್ರದೇಶ ಸರ್ಕಾರ ರಾಮಜನ್ಮ ಭೂಮಿ-ಬಾಬರಿ ಮಸೀದಿ ಪ್ರಸ್ತುತ ಸಂದರ್ಭದಲ್ಲಿ ಸಂಧಾನಕ್ಕೆ ಸೂಕ್ತವಲ್ಲ. ಇದು ಹಿಂದೂಗಳ ಭಾವನಾತ್ಮಕ ವಿಚಾರ ಎಂದು ವಾದ ಮಂಡಿಸಿತ್ತು.

ಪಂಚ ಸದಸ್ಯ ಪೀಠದ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ, ನಮಗೆ ಇತಿಹಾಸ ಹೇಳಲು ಬರಬೇಡಿ. ನಮಗೂ ಇತಿಹಾಸ ಗೊತ್ತಿದೆ. ಈ ಪ್ರಕರಣ ಸೂಕ್ಷ್ಮವಾಗಿದ್ದು, ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ ಎಂದು ಹೇಳಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ರವಿಶಂಕರ್​, “ದೀರ್ಘಾವಧಿಯ ವಿವಾದಕ್ಕೆ ಒಂದು ಸುಖಾಂತ್ಯ ನೀಡಲು ಬಯಸಿದ್ದೇವೆ. ಕನಸನ್ನು ನನಸು ಮಾಡುವ ಕಾಲ ಬಂದಿದೆ. ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳಬೇಕು. ನಮ್ಮ ಗುರಿಯೆಡೆಗೆ ನಾವು ಸಾಗಬೇಕಿದೆ,” ಎಂದಿದ್ದಾರೆ.

ಮುಸ್ಲಿಂ ಅರ್ಜಿದಾರರ ಪರ ವಾದ ಮಂಡಿಸಿದ್ದ ರಾಜೀವ್​ ಧವನ್, ಮುಸ್ಲಿಂ ಅರ್ಜಿದಾರರಿಗೆ ಸಂಧಾನ ಅಥವಾ ರಾಜಿ ಮೂಲಕ ಎಲ್ಲ ಅರ್ಜಿದಾರರು ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಒಪ್ಪಿಗೆ ಇದೆ,” ಎಂದಿದ್ದರು. ಹಿಂದೂ ಮಹಾಸಭಾ ಪರ ವಕೀಲರಾದ ಸಿ.ಎಸ್​.ವೈದ್ಯನಾಥನ್​, ರಾಮಜನ್ಮ ಭೂಮಿ ಪ್ರಕರಣ ದೇಗುಲ ನಿರ್ಮಾಣದ ಸಂಧಾನೇತರ ವಿಷಯ. ಇದು ಹಿಂದೂಗಳ ಭಾವನಾತ್ಮಕ ವಿಚಾರ. ಬೇಕಿದ್ದರೆ ನಾವೇ ಎಲ್ಲರೂ ಹಣ ಹೂಡಿ ಬೇರೊಂದು ಜಾಗದಲ್ಲಿ ಮಸೀದಿ ಕಟ್ಟಲು ಸಹಕರಿಸುತ್ತೇವೆ. ಆದರೆ, ಮಧ್ಯಸ್ಥಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು. ಮಾ.7ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಲಯ ವಾದಗಳನ್ನು ಆಲಿಸಿತ್ತು. ನಂತರ ತೀರ್ಪನ್ನು ಇವತ್ತಿಗೆ ಕಾಯ್ದಿರಿಸಿತ್ತು.

ಸಂಧಾನದ ಆಯ್ಕೆ ನೀಡಿದ್ದ ನ್ಯಾಯಪೀಠ:

ಈ ಹಿಂದೆ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ಮಧ್ಯಸ್ಥಿಕೆ ಮೂಲಕ ಈ ವಿವಾದವನ್ನು ಬಗೆಹರಿಸುವುದು ಉತ್ತಮ ಎಂದು ನ್ಯಾ. ಎಸ್​.ಎ. ಬೊಬ್ಡೆ ಅಭಿಪ್ರಾಯಪಟ್ಟಿದ್ದರು. ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹಿಂದೂಗಳು ಆಗ್ರಹಿಸಿದ್ದರು. ಇದು ನಂತರ ರಾಜಕೀಯದ ದಾಳವಾಗಿ ಬದಲಾಗಿತ್ತು. ಹೀಗಾಗಿ, ಈ ಪ್ರಕರಣ ಇನ್ನೂ ಇತ್ಯರ್ಥವಾಗದೆ ಉಳಿದಿದೆ.

Comments are closed.