ಕರ್ನಾಟಕ

ಡಿಕೆಶಿ ವಿರುದ್ಧ ಇಡಿ ದಾಖಲಿಸಿರುವ ಪ್ರಕರಣ ರದ್ದುಗೊಳಿಸಲು ಕಪಿಲ್ ಸಿಬಲ್ ವಾದ

Pinterest LinkedIn Tumblr


ಬೆಂಗಳೂರು: ಜಾರಿ ನಿರ್ದೇಶನಾಲಯದ ಸಮನ್ಸ್​ ಹಾಗೂ ಮೂಲ ಪ್ರಕರಣ ರದ್ದು ಕೋರಿ ಸಚಿವ ಡಿ.ಕೆ.ಶಿವಕುಮಾರ್ ಸೇರಿ ನಾಲ್ವರು ಆಪ್ತರು ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಮುಂದಿನ ವಿಚಾರಣೆಯನ್ನು ಮಾರ್ಚ್​ 11ಕ್ಕೆ ಮುಂದೂಡಿತು. ಈ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಲ್ಪಮಟ್ಟಿನ ರಿಲೀಫ್​ ಸಿಕ್ಕಿದೆ.

ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪರವಾಗಿ ಕಪಿಲ್ ಸಿಬಲ್​ ವಾದ ಮಂಡಿಸಿದರು.

ಖುದ್ದು ಸಚಿವ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗುವಂತೆ ಜನವರಿ 17ರಂದು ಇ.ಡಿ. ಸಮನ್ಸ್ ನೀಡಿತ್ತು. ಡಿ.ಕೆ. ಶಿವಕುಮಾರ್ ವಿರುದ್ದ 276ಸಿ, 277 ಐಟಿ ಕಾಯ್ದೆ, 120ಬಿ ಐಪಿಸಿ ಅಡಿಯಲ್ಲಿ ಐಟಿ ಇಲಾಖೆ ಪ್ರಕರಣ ದಾಖಲಿಸಿದೆ.

ಡಿಕೆಶಿ ವಿರುದ್ಧ 276ಸಿ, 277 ಐಟಿ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣ ಇಡಿ ವ್ಯಾಪ್ತಿಗೆ ಬರುವುದಿಲ್ಲ. 120 ಬಿ ಒಳಸಂಚು ಪ್ರತ್ಯೇಕ ಅಪರಾಧವಲ್ಲ. ಶೆಡ್ಯೂಲ್​ನಲ್ಲಿರುವ ಅಪರಾಧಗಳ ಬಗ್ಗೆ ಮಾತ್ರ ಇಡಿ ವ್ಯಾಪ್ತಿಯಲ್ಲಿದೆ. 120 ಬಿ ಬಿಟ್ಟು ಉಳಿದ ಕೇಸ್ ಇಡಿ ವ್ಯಾಪ್ತಿಗೆ ಬರುವುದಿಲ್ಲ. 120 ಬಿ ಕೂಡ ಸ್ವತಂತ್ರ ಅಪರಾಧವಾಗುವುದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸುವ ಹಂತವಿನ್ನೂ ತಲುಪಿಲ್ಲ. ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿದ್ದು ಸರಿಯಲ್ಲ. ಹೀಗಾಗಿ ಇಡಿ ದಾಖಲಿಸಿರುವ ದೂರನ್ನು ರದ್ದುಗೊಳಿಸಬೇಕು ಎಂದು ಕಪಿಲ್​ ಸಿಬಲ್​ ವಾದ ಮಂಡಿಸಿದರು.

ಮನಿ ಲ್ಯಾಂಡರಿಂಗ್ ಆಕ್ಟ್ ಅಡಿ ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ. ಮನಿ ಲ್ಯಾಂಡರಿಂಗ್ ನಡೆದಿದೆ ಎನ್ನುವುದಕ್ಕೆ ಹಣ ವರ್ಗಾವಣೆಯ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ. ಯಾರು ಹಣ ನೀಡಿದ್ದಾರೆ? ಯಾರು ಪಡೆದಿದ್ದಾರೆ ಅನ್ನೋದಕ್ಕೆ ಯಾವುದೇ ದಾಖಲೆಗಳಿಲ್ಲ. ಐಟಿ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಇಸಿಐಆರ್ ದಾಖಲಿಸಲಾಗಿದೆ. ಈ ಕೇಸ್​ನಲ್ಲಿ ಇಸಿಐಆರ್ ದಾಖಲಿಸಲು ಸಾಧ್ಯವಿಲ್ಲ. ಇದು ಕಾಂಪೌಂಡೇಬಲ್ ಕೇಸ್ ಹೊರತು ಕಾಗ್ನಿಜಬಲ್ ಅಲ್ಲಾ. ನಮ್ಮ ಕಕ್ಷಿದಾರನಿಗೆ ತೊಂದರೆ ನೀಡಲು ಇಂದೊಂದು ಹೈಬ್ರಿಡ್ ರೀತಿಯ ಪ್ರಕ್ರಿಯೆಯಾಗಿದೆ. ಇಲ್ಲಿ ಇಡಿ ಯಾವುದೇ ಕಾನೂನು ಪಾಲನೆ‌ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಪರ ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.

ಐಪಿಸಿ 120(b)ಯನ್ನು ಇಸಿಐಆರ್ ನಲ್ಲಿ ಸೇರಿಸಲಾಗಿದೆ. 120(b) ಅಡಿ ದೂರು ದಾಖಲಿಸಲು ಸಾಧ್ಯವಿಲ್ಲ. ಯಾವ ಆಧಾರದ ಮೇಲೆ ನೋಟಿಸ್ ನೀಡಿದ್ದಾರೋ ಇಡಿ ಅಧಿಕಾರಿಗಳು..? ಏನು ವಿಚಾರಣೆ ಮಾಡ್ತಾರೋ ಗೊತ್ತಾಗುತ್ತಿಲ್ಲ. ಇಸಿಐಆರ್ ಪ್ರತಿಯನ್ನೂ ಕೂಡ ನಮಗೆ ‌ನೀಡಿಲ್ಲ. ಹೀಗಾಗಿ ಪ್ರಕರಣ ರದ್ದು ಮಾಡುವಂತೆ ಮನವಿ ಕಪಿಲ್ ಸಿಬಲ್​ ವಾದ ಮಂಡಿಸಿದರು.

ಇಡಿ‌ ಪರ ವಕೀಲರು ವಾದ ಮಂಡಿಸಲು‌ ಮುಂದಿನ ಸೋಮವಾರದವರೆಗೆ ಸಮಯಾವಕಾಶ ಕೇಳಿ ಮನವಿ ಮಾಡಿದರು. ಮುಂದಿನ ವಿಚಾರಣೆಯ ದಿನಾಂಕದವರೆಗೂ ಡಿಕೆಶಿ ಇಡಿ ಮುಂದೆ ಹಾಜರಾಗಲು ವಿನಾಯಿತಿ ನೀಡಿದ ಕೋರ್ಟ್​ ಮುಂದಿನ ವಿಚಾರಣೆಯನ್ನು ಮಾರ್ಚ್​ 11ಕ್ಕೆ ಮುಂದೂಡಿದರು. ಅಂದು ಇಡಿ ವಕೀಲರು ವಾದ ಮಂಡಿಸಿದ ನಂತರ ಅದಕ್ಕೆ ಪ್ರತ್ಯುತ್ತರವಾಗಿ ಕಪಿಲ್ ಸಿಬಲ್ ಮಾ. 16ರಂದು ಉತ್ತರ ನೀಡಲಿದ್ದಾರೆ.

Comments are closed.