ಕರ್ನಾಟಕ

ಬಿಜೆಪಿ ಆಮಿಷಕ್ಕೆ ಒಳಗಾಗಬೇಡಿ: ಜಾರಕಿಹೊಳಿ, ಕುಮಟಳ್ಳಿ ಮನವೊಲಿಕೆಗೆ ಕುಮಾರಸ್ವಾಮಿ ಯತ್ನ

Pinterest LinkedIn Tumblr


ಬೆಂಗಳೂರು: ಯಾವುದೇ ಬೇಡಿಕೆ ಇದ್ದರೂ ತಮ್ಮೊಂದಿಗೆ ಚರ್ಚೆ ನಡೆಸಿ, ಯಾವುದೇ ಕಾರಣಕ್ಕೂ ಬಿಜೆಪಿಯ ಆಮಿಷಕ್ಕೆ ಒಳಗಾಗಬೇಡಿ ಎಂದು ರಮೇಶ್‌ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅವರಿಗೆ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಹೇಳಲಾಗಿದೆ,
ಚಿಂಚೋಳಿ ಶಾಸಕ ಉಮೇಶ್‌ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಂದು ಅತೃಪ್ತ ಶಾಸಕರು ಎನ್ನಲಾದ ರಮೇಶ್‌ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಬಲವಾಗಿ ನಂಬಿರುವ ಮುಖ್ಯಮಂತ್ರಿ, ಬಿಜೆಪಿಯವರ ಆಮಿಷಕ್ಕೆ ಬಲಿಯಾಗದಂತೆ ಮನವೊಲಿಕೆಗಾಗಿ ಇವರಿಬ್ಬರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮುಖ್ಯಮಂತ್ರಿಯವರು ತಮ್ಮ ನಿಗದಿತ ಕಾರ್ಯಕ್ರಮಕ್ಕೆ ಹಾಜರಾಗದೆ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ಈ ಇಬ್ಬರು ಶಾಸಕರೊಂದಿಗೆ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡಿದ್ದರು ಎಂದು ಕಾಂಗ್ರೆಸ್‌ನ ಅಧಿಕೃತ ಮೂಲಗಳು ತಿಳಿಸಿವೆ.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಶಾಸಕರಾದ ರಮೇಶ್‌ ಜಾರಕಿಹೊಳಿ ಮತ್ತು ಮಹೇಶ್‌ ಕುಮಟಳ್ಳಿ ಅವರನ್ನು ಮನವೊಲಿಸುವ ಸಮಸ್ಯೆಯಾದರೂ ಏನಿದೆ? ಅವರು ತಮ್ಮನ್ನು ತಿಂಡಿಗೆ ಕರೆದಿದ್ದರು, ಒಳ್ಳೆಯ ತಿಂಡಿ ಕೊಡಿಸಿದ್ದಾರೆ. ರಾಜಕೀಯವಾಗಿ ಮಾತನಾಡಲು ಬಂದಿಲ್ಲ. ಕ್ಷೇತ್ರದ ಮತ್ತು ಜಿಲ್ಲೆಯ ಅಭಿವೃದ್ಧಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಸ್ಥಳೀಯ ಸಮಸ್ಯೆಗಳಿದ್ದರೆ ಅದನ್ನು ಕಾಂಗ್ರೆಸ್ ನಾಯಕರು ಬಗೆಹರಿಸುತ್ತಾರೆ, ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ತಾವು ಬಗೆಹರಿಸುವುದಾಗಿ ತಿಳಿಸಿದರು.
ಬಿಜೆಪಿಯವರು ನನ್ನ ಜೊತೆಯೂ ಸಂಪರ್ಕದಲ್ಲಿದ್ದಾರೆ. ಸಾಕಷ್ಟು ಜನರೊಂದಿಗೆ ತಾನು ಕೂಡ ಸಂಪರ್ಕದಲ್ಲಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ತಮ್ಮನ್ನು ಎರಡೆರಡು ಬಾರಿ ಭೇಟಿಯಾಗಿದ್ದಾರೆ. ಇವೆಲ್ಲಾ ಸಾಮಾನ್ಯ ಹಾಗೂ ಸೌಹಾರ್ದಯುತ ಭೇಟಿಯಾಗಿರುತ್ತವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.ರಮೇಶ್‌ ಜಾರಕಿಹೊಳಿ, ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಕಾಂಗ್ರೆಸ್‌ ನಾಯಕರು ನಿರ್ಧರಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಶಾಸಕ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯ ತಮ್ಮ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಜಾಧವ್‌ ಅವರೊಂದಿಗೆ ತಾವು ಸಂಪರ್ಕದಲ್ಲಿಯೂ ಇರಲಿಲ್ಲ. ರಮೇಶ್‌ ಜಾರಕಿಹೊಳಿ ಅವರ ಅಸಮಾಧಾನಗಳು ಸ್ಥಳೀಯ ಮಟ್ಟದ್ದು. ಅದನ್ನು ಕಾಂಗ್ರೆಸ್‌ನವರು ಬಗೆಹರಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಲು ರಮೇಶ್‌ ಜಾರಕಿಹೊಳಿ ನಿರಾಕರಿಸಿದ್ದಾರೆ.

Comments are closed.