ಕರ್ನಾಟಕ

ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್​ ನೀಡುವ ಪ್ರಶ್ನೆಯೇ ಬರುವುದಿಲ್ಲ: ಸಿದ್ದರಾಮಯ್ಯ ಹೇಳಿಕೆ

Pinterest LinkedIn Tumblr

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿಯುವ ಸುಮಲತಾ ಆಸೆಗೆ ಈಗ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಣ್ಣೀರೆರಚಿದ್ದಾರೆ.

ಮಂಡ್ಯ ಜೆಡಿಎಸ್​ ಸಂಸದರಿರುವ ಕ್ಷೇತ್ರವಾದ್ದರಿಂದ ಸುಮಲತಾ ಅವರಿಗೆ ಟಿಕೆಟ್​ ಕೊಡುವ ಮಾತೇ ಬರುವುದಿಲ್ಲ ಎಂದಿದ್ದಾರೆ. ಈ ಹಿಂದೆ ಸುಮಲತಾ, ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಚುನಾವಣೆ ಎದುರಿಸುವ ಕುರಿತು ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಿಂದ ಸುಮಲತಾಗೆ ಟಿಕೆಟ್​ ನೀಡುವ ಸಾಧ್ಯತೆಯ ಬಗ್ಗೆ ಚರ್ಚೆಯಾಗಿತ್ತು. ಆದರೀಗ ಸಿದ್ದರಾಮಯ್ಯ ಹೇಳಿಕೆಯಿಂದ ಸುಮಲತಾ ರಾಜಕೀಯ ಪ್ರವೇಶ ಇಬ್ಬಗೆಯಲ್ಲಿ ಸಿಲುಕಿದಂತಾಗಿದೆ.

ಮಂಡ್ಯ ಕ್ಷೇತ್ರದಿಂದ ಯಾರಿಗೆ ಟಿಕೆಟ್​ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆಯುತ್ತಿದೆ. ದೇವೇಗೌಡರ ಕುಟುಂಬದ ಕುಡಿ ನಿಖಿಲ್​ ಕುಮಾರಸ್ವಾಮಿ​ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಎಸ್​ ಸಿದ್ಧತೆ ನಡೆಸಿದೆ. ಆದರೆ, ಈ ಕ್ಷೇತ್ರವನ್ನು ತನಗೆ ಬಿಟ್ಟುಕೊಡಿ ಎಂದು ಸುಮಲತಾ ಪಟ್ಟು ಹಿಡಿದ್ದಾರೆ. ಆದರೆ, ಈಗ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಿಂದ ಅವರಿಗೆ ಟಿಕೆಟ್​​ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಸೋಮವಾರ ಕಾಂಗ್ರೆಸ್​ – ಜೆಡಿಎಸ್​ ಸಮನ್ವಯ ಸಮಿತಿ ಸಭೆ ನಡೆಸಲಾಗಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಸಮನ್ವಯ ಸಮಿತಿಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮುಖ್ಯವಾಗಿ ಚರ್ಚೆಯಾದ ವಿಚಾರ ಲೋಕಸಭಾ ಟಿಕೆಟ್​ ಹಂಚಿಕೆ. ಜೆಡಿಎಸ್​ 12 ಸ್ಥಾನಗಳಿಗೆ ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್​ 9 ಸ್ಥಾನ ನೀಡಲು ಒಪ್ಪಿತ್ತು.

ಈಗ ಅದರ ಮುಂದುವರೆದ ಭಾಗವಾಗಿ ಕಾಂಗ್ರೆಸ್​ನಿಂದ ಸುಮಲತಾ ಅಂಬರೀಶ್​ಗೆ ಟಿಕೆಟ್​ ನೀಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೂಲಗಳ ಪ್ರಕಾರ ಸುಮಲತಾರಿಗೆ ಕಾಂಗ್ರೆಸ್​ನಿಂದ ಟಿಕೆಟ್​ ಸಿಕ್ಕರೆ ಅದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎನ್ನಲಾಗಿತ್ತು. ಆದರೀಗ ಸಿದ್ದರಾಮಯ್ಯ ಕೂಡ ಸುಮಲತಾ ಟಿಕೆಟ್​ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಮಂಡ್ಯದಲ್ಲಿ ಜೆಡಿಎಸ್ ಸಂಸದರಿದ್ದಾರೆ. ಮೈತ್ರಿ ಒಪ್ಪಂದದ ಪ್ರಕಾರ ಅಲ್ಲಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕ್ಷೇತ್ರ ಜೆಡಿಎಸ್​ಗೆ ಸೇರಬೇಕು. ಈ ಕ್ಷೇತ್ರ ಕಾಂಗ್ರೆಸ್​ ವ್ಯಾಪ್ತಿಗೆ ಬರುವುದೇ ಇಲ್ಲ ಎಂದಾದಮೇಲೆ ಸುಮಲತಾಗೆ ಟಿಕೆಟ್​ ನೀಡುವ ಪ್ರಶ್ನೆಯೇ ಬರುವುದಿಲ್ಲವಲ್ಲ,” ಎಂದಿದ್ದಾರೆ.

ಒಂದೊಮ್ಮೆ ಕಾಂಗ್ರೆಸ್​ನಿಂದ ಟಿಕೆಟ್​ ಸಿಗದೇ ಇದ್ದರೆ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎನ್ನುವ ಮಾತಿದೆ. ಈ ಬಗ್ಗೆಯೂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. “ಪಕ್ಷೇತರರಾಗಿ ಸ್ಪರ್ಧಿಸುವುದು ಸಂಪೂರ್ಣವಾಗಿ ಸುಮಲತಾ ಅವರಿಗೆ ಬಿಟ್ಟ ನಿರ್ಧಾರ. ಈ ಬಗ್ಗೆ ನಾನು ಏನನನ್ನೂ ಹೇಳಲು ಸಾಧ್ಯವಿಲ್ಲ,” ಎಂದರು.

Comments are closed.