ಕರ್ನಾಟಕ

ಗೃಹ ಸಚಿವರನ್ನೇ ಪ್ರಶ್ನಿಸಿ, ಸೈ ಎನಿಸಿಕೊಂಡ ಕಾಲೇಜು ವಿದ್ಯಾರ್ಥಿನಿ

Pinterest LinkedIn Tumblr

ವಿಜಯಪುರ: ಗೃಹ ಸಚಿವ ಎಂ.ಬಿ. ಪಾಟೀಲ್ ನಿನ್ನೆಯಿಂದ ವಿಜಯಪುರ ನಗರದಲ್ಲಿ ವಾಸ್ತವ್ಯವಿದ್ದಾರೆ. ಮಹಾಶಿವರಾತ್ರಿ ಅಂಗವಾಗಿ ಸಚಿವರು ತಾವೇ ಅಧ್ಯಕ್ಷರಾಗಿರುವ ವಿಜಯಪುರದ ಪ್ರತಿಷ್ಠಿತ ಬಿಎಲ್​ಡಿಇ ಸಂಸ್ಥೆಯ ಆವರಣದಲ್ಲಿರುವ 770 ಲಿಂದಗದ ಗುಡಿಗೆ ಆಗಮಿಸಿದ್ದರು. ಅಲ್ಲಿ ಆಗಲೇ ನೂರಾರು ಜನರು ದೇವರ ದರ್ಶನಕ್ಕಾಗಿ ತಮ್ಮ ಪಾಳಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದರು.

ಆಗ, ಸಚಿವರು ಪಾಳಿಯಲ್ಲಿ ನಿಲ್ಲದೇ ನೇರವಾಗಿ ದೇವಸ್ಥಾನದ ಒಳಗೆ ತೆರಳಿ ದರ್ಶನ ಪಡೆದರು. ಇದನ್ನೇ ಗಮನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸಚಿವರು ದರ್ಶನ ಮುಗಿಸಿ ಹೊರಗೆ ಬರುತ್ತಿದ್ದಂತೆ ಸಚಿವರನ್ನು ಪ್ರಶ್ನಿಸಿದಳು.

“ಒಂದು ಗಂಟೆಯಿಂದ ನಾವೆಲ್ಲ ಇಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದೇವೆ. ನೀವು ಈಗ ಬಂದು ದರ್ಶನ ಪಡೆದಿದ್ದೀರಿ. ನೀವೇ ಹೀಗೆ ಮಾಡಿದರೆ ಹೇಗೆ?” ಎಂದು ಆ ಹುಡುಗಿ ಪ್ರಶ್ನಿಸಿದಳು. ಆಗ ಕಾಲೇಜು ವಿದ್ಯಾರ್ಥಿನಿಯನ್ನು ಹತ್ತಿರ ಕರೆದು ಮಾತನಾಡಿದ ಎಂ. ಬಿ. ಪಾಟೀಲ, ನಿನ್ನ ಸಲಹೆ ಸ್ವೀಕರಿಸುತ್ತೇನೆ. ತುರ್ತಾಗಿ ತೆರಳಬೇಕಾಗಿದೆ. ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ವಿಮಾನದ ಮೂಲಕ ಬೇರೆ ಕೆಲಸಕ್ಕೆ ಹೋಗಬೇಕಾಗಿದೆ ಎಂದು ಸಮಜಾಯಿಷಿ ನೀಡಿದರು.

ಅಷ್ಟೇ ಅಲ್ಲ, ಆ ಕಾಲೇಜು ವಿದ್ಯಾರ್ಥಿನಿ ತಲೆಯ ಮೇಲೆ ಕೈ ಇಟ್ಟು ನನಗೂ ಸಾಮಾನ್ಯನಂತೆ ಜೀವಿಸುವ ಬಯಕೆಯಿದೆ. ಆದುದರಿಂದಲೇ ನನಗೆ ಕಲ್ಪಿಸಲಾಗಿದ್ದ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ತೆಗೆದುಹಾಕಿ ಅಂತ ಸೂಚಿಸಿದ್ದೇನೆ ಎಂದು ಕಾಲೇಜು ವಿದ್ಯಾರ್ಥಿನಿಗೆ ಮನವರಿಕೆ ಮಾಡಿದರು. ಅಲ್ಲದೇ, ತಮ್ಮ ಜೊತೆಗಿದ್ದವರಿಗೆ ಹೇಳಿ ಫೋಟೋ ತೆಗೆಯಿರಿ ಎಂದು ಫೋಟೋ ತೆಗೆಸಿಕೊಂಡರು.

ಆಗ ವಿದ್ಯಾರ್ಥಿನಿ, ಸಚಿವರ ಮಾತಿಗೆ ಮನ್ನಣೆ ನೀಡಿ, ಕಾಂಗ್ರ್ಯಾಚುಲೇಶನ್ ಸರ್ ಎಂದು ಶುಭ ಕೋರಿದಳು. ಆಗ ಸಚಿವರು ತಮ್ಮ ಕೆಲಸಕ್ಕೆ ನಿರ್ಗಮಿಸಿದರು.

Comments are closed.