ರಾಷ್ಟ್ರೀಯ

ಮೋದಿ ಪ್ರವಾಸಕ್ಕೆ ತಕ್ಕ ಹಾಗೆ ಚುನಾವಣೆ ದಿನಾಂಕ ನಿಗದಿ ಮಾಡುತ್ತೀರಾ?; ಕಾಂಗ್ರೆಸ್​​

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಅನುಗುಣವಾಗಿ ಚುನಾವಣೆ ದಿನಾಂಕ ನಿಗದಿಯಾಗಲಿದೆಯೇ? ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​​ ಪ್ರಶ್ನಿಸಿದೆ. “ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿ ಮಾಡಲು ಆಯೋಗ ಪ್ರಧಾನಿ ಪ್ರವಾಸ ಯಾವಾಗ ಅಂತ್ಯವಾಗಲಿದೆ ಎಂದು ಕಾಯುತ್ತಿದೆಯೇ; ಅವರ ಪ್ರವಾಸ ವೇಳಾಪಟ್ಟಿಗಳನ್ನು ಗಮದಲ್ಲಿಟ್ಟುಕೊಂಡು ದಿನಾಂಕ ನಿಗದಿ ಮಾಡಲಾಗುತ್ತದೆಯೇ” ಎಂದು ರಾಜ್ಯ ಸಭಾ ಸದಸ್ಯ ಅಹ್ಮದ್‌ ಪಟೇಲ್‌ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್​​​ ಮಾಡಿರುವ ಹಿರಿಯ ಕಾಂಗ್ರೆಸ್​​ ನಾಯಕ ಅಹ್ಮದ್​​ ಪಟೇಲರು, ಚುನಾವಣೆ ಆಯೋಗ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಕಳೆದ ಬಾರಿ 2014ರ ಲೋಕಸಭೆ ಚುನಾವಣೆಗೆ ಮಾರ್ಚ್​​​ ಮೊದಲ ವಾರದಲ್ಲಿಯೇ ದಿನಾಂಕ ಘೋಷಣೆ ಮಾಡಲಾಗಿತ್ತು. ಆದರೆ, ಈ ಸಲ ಇಲ್ಲಿಯವರೆಗೂ ಆಯೋಗ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ಸೂಕ್ತ ಸಮಯ ನೋಡಿ ದಿನಾಂಕ ಘೋಷಿಸಲಾಗುವುದು ಎಂದು ಹೇಳಿದೆ. ಹೀಗಾಗಿ ಪ್ರಧಾನಿ ಪ್ರವಾಸ ಅಂತ್ಯವಾಗಲಿ ಎಂದು ಕಾಯುತ್ತಿದೆಯೇ ಎಂದು ಆಯೋಗಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

ಒಂದು ವಾರದ ಹಿಂದೆಯೇ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೋ, ಇಲ್ಲವೋ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆಯೂ ನೀಡಿತ್ತು. ನಿಗದಿಯಂತೆ ಸಕಾಲಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆ ಲೋಕಸಭೆ ಚುನಾವಣಾ ವೇಳಾಪಟ್ಟಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಯೋಗ ಹೇಳಿತ್ತು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಿನ ಹಠಾತ್ ಉದ್ವಿಗ್ನತೆಯಿಂದ ಚುನಾವಣೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ದೃಢಪಡಿಸಿದ್ದಾರೆ. ಅಲ್ಲದೇ ಕಳೆದ ಎರಡು ದಿನಗಳಿಂದ ಮತದಾನದ ಸಿದ್ಧತೆಗಳನ್ನು ಪರಿಶೀಲಿಸಲು ಲಕ್ನೋಗೆ ಆಗಮಿಸಿದ್ದೇನೆ. ಎಲ್ಲವೂ ನಿರೀಕ್ಷೆಯಂತೆಯೇ ನಡೆಯುತ್ತದೆ ಎಂದಿದ್ದರು ಸುನೀಲ್​​.

ಇನ್ನು ನ್ಯೂಸ್​​-18ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಭಾರಿ ಅಭ್ಯರ್ಥಿಗಳು ವಿದೇಶದಲ್ಲಿ ತಮ್ಮ ಆಸ್ತಿಗಳ ವಿವರಗಳನ್ನು ನೀಡಬೇಕು ಎಂದು ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದೆ. ತೆರಿಗೆ ಇಲಾಖೆ ಇದನ್ನು ಪರಿಶೀಲಿಸುತ್ತದೆ. ಇದರಲ್ಲಿ ಯಾವುದಾದರೂ ವ್ಯತ್ಯಾಸಗಳು ಕಂಡು ಬಂದರೆ, ಬಳಿಕ ಅದನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್‍ನಲ್ಲಿ ಪ್ರಕಟಿಸಲಾಗುತ್ತದೆ. ಇಲ್ಲದಿದ್ದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

Comments are closed.