ಕರ್ನಾಟಕ

12 ಕ್ಷೇತ್ರಕ್ಕೆ ಜೆಡಿಎಸ್​ ಪಟ್ಟು, 9 ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್​ ಒಪ್ಪಿಗೆ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ, ಮೈತ್ರಿ ಸರ್ಕಾರದ ಸದ್ಯದ ಸವಾಲುಗಳು ಕುರಿತು ಇಂದು ನಡೆದ ಕಾಂಗ್ರೆಸ್​-ಜೆಡಿಎಸ್​ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ‌ ಪ್ರಕಾರ ಮಂಡ್ಯ‌ ಜೆಡಿಎಸ್​ಗೆ ಹೇಳಿಯಾಗಿದೆ. ಹಾಗಾಗಿ ನೇರವಾಗಿ ಇತರೆ ಕ್ಷೇತ್ರ ಗಳ ಬಗ್ಗೆ ಚರ್ಚೆ ಆರಂಭಿಸಿದರು. ಇದಕ್ಕೆ ಡ್ಯಾನಿಶ್ ಅಲಿ ದನಿಗೂಡಿಸಿದರು ಈ ಮೊದಲು ಜೆಡಿಎಸ್​ಗೆ 9 ಕ್ಷೇತ್ರ ಬಿಟ್ಟು ಕೊಡಲು ಕಾಂಗ್ರೆಸ್​ ಮನಸ್ಸು ಮಾಡಿದೆ. ಆದರೆ ಕುಮಾರಸ್ವಾಮಿ ಅವರು 12 ಕ್ಷೇತ್ರಗಳ ಬೇಡಿಕೆ ಇಡುವ ಮೂಲಕ ಕಾಂಗ್ರೆಸ್ಸಿಗರನ್ನು ಒವರ್ ಟೇಕ್ ಮಾಡಿದರು. 12 ಕ್ಷೇತ್ರಗಳು ನಮಗೆ ಬೇಕು ಎಂದು ಸಿಎಂ ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಏಕಾಏಕಿ ಹಾಗೆ ಕೇಳಿದ್ರೆ ಹೇಗೆ? ಹಾಲಿ ಕ್ಷೇತ್ರಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿ. ಹಾಸನ, ಮಂಡ್ಯ, ಶಿವಮೊಗ್ಗ, ಬೆಂಗಳೂರು‌ ಉತ್ತರದ ಬಗ್ಗೆ ಬೇಕಿದ್ರೆ ತೀರ್ಮಾನ ಮಾಡಬಹುದು. ಉಳಿದಂತೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಎಂದ ಹೇಳಿದರು.

ನೀವು ಬೇಡಿಕೆ ಇಟ್ಟ ಬಗ್ಗೆ ಹಾಗೂ ಸಭೆಯಲ್ಲಿ ಚರ್ಚೆಯಾದ ವಿಚಾರದ ಬಗ್ಗೆ ನಮ್ಮ ಹೈಕಮಾಂಡ್ ಗಮನಕ್ಜೆ ತರುತ್ತೇವೆ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಪರಮೇಶ್ವರ್ ಹಾಗೂ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಹಾಗೇ ಆಗ್ಲಿ, ನಮ್ಮ ವರಿಷ್ಠರು ದೇವೇಗೌಡರು ನಿಮ್ಮ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಿ ಬಿಡಿ ಎಂದು ಹೇಳಿ ಕುಮಾರಸ್ವಾಮಿ ಅವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಭೆಯಲ್ಲಿ ಎದ್ದು ಹೊರನಡೆದರು.

ಬಳಿಕ ಕೆಪಿಸಿಸಿ‌ ಅಧ್ಯಕ್ಷ ದಿನೇಶ್​ ಗುಂಡೂರಾವ್ ಅವರನ್ನು ಕರೆಸಿಕೊಂಡ ವೇಣುಗೋಪಾಲ್, ಜಾಧವ್​ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ, ನಾಗೇಂದ್ರ, ಮಹೇಶ ಕುಮಟಳ್ಳಿ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದರು. ಇವರನ್ನು ಹೊರತುಪಡಿಸಿ ಮತ್ಯಾರಾದ್ರೂ ರಾಜೀನಾಮೆ ಕೊಡಬಹುದು ಚೆಕ್ ಮಾಡಿ ,ರೆಬೆಲ್ಸ್ ಮೇಲೆ ಕಣ್ಣಿಡಿ ಎಂದು ಸೂಚನೆ ನೀಡಿದರು.

ಸಭೆ ನಂತರ ಕೆ.ಸಿ. ವೇಣುಗೋಪಾಲ್ ಮಾತನಾಡಿ, ಜೆಡಿಎಸ್ 12 ಸೀಟು ಕೇಳಿದೆ. ಸೀಟು ಕೇಳುವ ಹಕ್ಕು ಅವರಿಗೆ ಇದೆ, ಕೇಳಿದ್ದಾರೆ. ಎಲ್ಲದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಮೂರ್ನಾಲ್ಕು ದಿನದಲ್ಲಿ ಎಲ್ಲವೂ ತೀರ್ಮಾನವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ನಾವು ಜಂಟಿಯಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಬಂದಿದೆ. ಸೀಟು ಹಂಚಿಕೆ ಬಗ್ಗೆ ಈಗಾಗಲೇ ಜೆಡಿಎಸ್ ಮುಖಂಡರು ಹಾಗೂ ನಮ್ಮವರು ಚರ್ಚೆ ಮಾಡಿದ್ದಾರೆ. ಅವರು ಇಂದು ಕ್ಷೇತ್ರಗಳ ಪಟ್ಟಿಯನ್ನು ನೀಡಿದ್ದಾರೆ. ಅದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಒಳ್ಳೆಯ ಚರ್ಚೆಯಾಗಿದೆ. ನಮಗೆ ವಿಶ್ವಾಸವಿದೆ ಮಾರ್ಚ್ 10ರ ಒಳಗೆ ಅಂತಿಮ ತೀರ್ಮಾನವಾಗಲಿದೆ. 12 ಕ್ಷೇತ್ರ ಅಥವಾ 9 ಕ್ಷೇತ್ರಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ.‌ ನಮ್ಮ ಹಂತದಲ್ಲಿಯೇ ಬಗೆಹರಿಯುತ್ತೆ ಅನ್ನೋ ವಿಶ್ವಾಸವಿದೆ ಎಂದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ತೀರ್ಮಾನ ಮಾಡಲಿ.‌ ಇಲ್ಲಿ ಕೂಡ ಚರ್ಚೆ ಆಗ್ಬೇಕಲ್ವಾ ಎಂದರು.

ಜೆಡಿಎಸ್​ನ ಡ್ಯಾನಿಶ್ ಅಲಿ ಮಾತನಾಡಿ, ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿದೆ. ಇನ್ನೂ ಚರ್ಚೆ ಹಂತದಲ್ಲಿದ್ದು, ಬಿಜೆಪಿಯನ್ನು ಎದುರಿಸುವ ಬಗ್ಗೆ ಹಾಗೂ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ಚರ್ಚೆಯಾಗಿದೆ. ಸೀಟು ಹಂಚಿಕೆ ಬಗ್ಗೆ ಹಿಂದಿನ ಸಭೆಯಲ್ಲೂ ಹಾಗೂ ಇಂದಿನ ಸಭೆಯಲ್ಲೂ ಚರ್ಚೆಯಾಗಿದೆ. ಮುಂದೆ ದೇವೇಗೌಡರು, ರಾಹುಲ್ ಗಾಂಧಿ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ ಎಂದರು.

ಸಭೆ ಆರಂಭವಾಗುತ್ತಿದ್ದಂತೆ ಎಚ್​ಡಿಕೆ ಅವರು ಉಮೇಶ್​ ಜಾಧವ್ ರಾಜೀನಾಮೆ ವಿಚಾರ ಪ್ರಸ್ತಾಪ ಮಾಡಿದರು. ರಮೇಶ್​ ಜಾರಕಿಹೊಳಿ ಹಾಗೂ ನಾಗೇಂದ್ರ ಕತೆ ಏನಂತೆ? ಎಂದು ಕೇಳಿದರು. ಇದಕ್ಕೆ ಸಿದ್ದರಾಮಯ್ಯ ಅವರು, ಅವರ ಬಗ್ಗೆನೂ ವಿಶ್ವಾಸ ಇಲ್ಲ ಬಿಡ್ರಿ. ಏನ್ಮಾಡ್ತಾರೆ ನೋಡೋಣ, ಅವರಿಂದೇನೂ ಸರ್ಕಾರಕ್ಕೆ ತೊಂದರೆಯಾಗಲ್ಲ ಬಿಡಿ ಎಂದು ಹೇಳಿದರು.

Comments are closed.