ಕರ್ನಾಟಕ

ಯುದ್ಧ ಖೈದಿಗಳೆಲ್ಲರೂ ನನ್ನ ಮಕ್ಕಳೇ, ಎಲ್ಲರ ಜೊತೆಗೇ ನನ್ನ ಮಗನನ್ನು ರಿಲೀಸ್ ಮಾಡಿ; ಹೀಗೆ ಹೇಳಿದ್ದರು ಫೀಲ್ಡ್​​ ಮಾರ್ಷಲ್​ ಕಾರಿಯಪ್ಪ

Pinterest LinkedIn Tumblr


ಬೆಂಗಳೂರು: 1965, ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿತ್ತು. ಅಂದು, ಯುದ್ಧದ ಕೊನೆಯ ದಿನ. ಸ್ಕ್ವಾಡ್ರನ್​ ಲೀಡರ್​​ ​ ಕೆಸಿ ಕಾರಿಯಪ್ಪ ಅವರು ಭಾರತ-ಪಾಕ್​ ಗಡಿ ಪ್ರದೇಶದ ಸಮೀಪ ವಿಮಾನದಲ್ಲಿ ತೆರಳುತ್ತಿದ್ದರು. ಈ ವಿಮಾನವನ್ನು ಪಾಕ್​ ಹೊಡೆದುರುಳಿಸಿತು. ವಿಮಾನದಿಂದ ಜಿಗಿದು ಕೆಸಿ ಕಾರಿಯಪ್ಪ ಪ್ರಾಣ ಉಳಿಸಿಕೊಂಡರು. ಅವರನ್ನು ಪಾಕ್​ ಸೇನೆ ತನ್ನ ವಶಕ್ಕೆ ಪಡೆದುಕೊಂಡಿತ್ತು.

ಎಲ್ಲ ಬಂಧಿತರಂತೆ, ಕೆಸಿ ಕಾರಿಯಪ್ಪ ಕೂಡ ತಮ್ಮ ಹೆಸರು, ರ್ಯಾಂಕ್​ ಹಾಗೂ ಯುನಿಟ್​ ಸಂಖ್ಯೆಯನ್ನು ಪಾಕಿಸ್ತಾನ ಅಧಿಕಾರಿಗಳಿಗೆ ನೀಡಿದರು. ರಾವಲ್​ಪಿಂಡಿಯಲ್ಲಿರುವ ಪಾಕ್​ ಸೇನಾ ಕಚೇರಿಗೆ ಈ ಮಾಹಿತಿ ರವಾನೆಯಾಯಿತು. ಇದಾಗಿ ಒಂದು ಗಂಟೆಯಾಗಿರಬಹುದು. ಕೆಸಿ ಕಾರಿಯಪ್ಪ ಅವರನ್ನು ಬಂಧಿಸಿದ ವ್ಯಕ್ತಿ ಓಡೋಡಿ ಜೈಲಿನ ಸಮೀಪ ಬಂದ. ಬಂಧಿತ ವ್ಯಕ್ತಿ ಫೀಲ್ಡ್​ ಮಾರ್ಷಲ್​ ಕೆಎಂ ಕಾರಿಯಪ್ಪ ಅವರ ಮಗನಿರಬಹುದೇ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹಾಗೂ ದುಗುಡ ಆತನ ಕಣ್ಣಿನಲ್ಲಿ ಎದ್ದು ಕಾಣುತ್ತಿತ್ತು.

ಸ್ವಾತಂತ್ರ್ಯಾ ನಂತರದಲ್ಲಿ ಭಾರತೀಯ ಸೇನೆಗೆ ಕೆಎಂ ಕಾರಿಯಪ್ಪ ಮೊದಲ ಮುಖ್ಯಸ್ಥರಾದರು. ಮೊದಲು ಇಡೀ ಭದ್ರತಾ ವ್ಯವಸ್ಥೆಗೆ ಅವರನ್ನು ಮುಖ್ಯಸ್ಥರಾಗಿ ನೇಮಕ ಗೊಂಡಿದ್ದರು. ನಂತರ, ಸೇನೆಯ ಮುಖ್ಯಸ್ಥರನ್ನಾಗಿ ಅವರನ್ನು ನೇಮಕ ಮಾಡಲಾಯಿತು.

ವಿಚಾರಣೆಗೆ ಬಂದ ವ್ಯಕ್ತಿ ಕೆಸಿ ಕಾರಿಯಪ್ಪ ಹಿನ್ನೆಲೆ ವಿಚಾರಿಸಿದ. ಅವರು ಕೆಎಂ ಕಾರಿಯಪ್ಪ ಮಗ ಎಂಬ ವಿಚಾರ ಬೆಳಕಿಗೆ ಬಂತು. ವಿಚಾರಣೆ ಮಾಡಲು ಬಂದ ವ್ಯಕ್ತಿ ವಾಪಸ್ಸಾದ. ಇದಾದ ನಂತರ ಅಚ್ಚರಿಯ ಬೆಳವಣಿಗೆಯೊಂದು ನಡೆದಿತ್ತು. ಕೆಸಿ ಕಾರಿಯಪ್ಪ ಅವರನ್ನು ಇತರ ಕೈದಿಗಳಿರುವ ಜಾಗದಿಂದ ಬೇರೆಡೆಗೆ ಸ್ತಳಾಂತರಿಸಲಾಯಿತು. ಅಲ್ಲಿ ಏನಾಗುತ್ತಿದೆ ಎಂಬುದೇ ಕೆಸಿ ಕಾರಿಯಪ್ಪ ಅವರಿಗೆ ತಿಳಿಯದಾಯಿತು. ತಾನು ಪಾಕಿಸ್ತಾನದ ವಶದಲ್ಲಿರುವುದು ಮನೆಯವರಿಗೆ ಗೊತ್ತಿಲ್ಲವಲ್ಲ ಎನ್ನುವ ಚಿಂತೆ ಅವರನ್ನು ಕಾಡುತ್ತಿತ್ತು.

ಜೈಲಿನ ಹೊರಗೆ ಅಚ್ಚರಿಯ ಬೆಳವಣಿಗೆಯೊಂದು ನಡೆಯಿತು. ಅದೇನೆಂದರೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್​ ಅಯುಬ್​ ಖಾನ್​ ರೆಡಿಯೋದಲ್ಲಿ ಘೋಷಣೆಯೊಂದನ್ನು ಮಾಡಿದರು. “ಕೆಸಿ ಕಾರಿಯಪ್ಪ ಅವರನ್ನು ನಾವು ಬಂಧಿಸಿದ್ದೇವೆ. ಅವರು ಇಲ್ಲಿ ಸುರಕ್ಷಿತವಾಗಿದ್ದಾರೆ. ನಾವು ಅವರನ್ನು ಬಿಡುಗಡೆ ಮಾಡಲು ಸಿದ್ಧರಿದ್ದೇವೆ,” ಎಂದು ಹೇಳಿದರು. ಇದಕ್ಕೆ ಒಂದು ಬಲವಾದ ಕಾರಣವೂ ಇತ್ತು. ಬ್ರಿಟಿಷ್ ಇಂಡಿಯನ್​ ಆರ್ಮಿಯಲ್ಲಿ ಕೆಎಂ ಕಾರಿಯಪ್ಪ ಅವರು ಅಯೂಬ್​ನ ಬಾಸ್​ ಆಗಿದ್ದರು. ಅವರ ಜೊತೆ ಕೆಲಸ ಮಾಡಿದ್ದಕ್ಕೆ ಅಯೂಬ್​ಗೆ ಕೆಎಂ ಕಾರಿಯಪ್ಪ ಕುಟುಂಬದ ಮೇಲೆ ಅಪಾರ ಗೌರವ ಇತ್ತು. ಇದೇ ಕಾರಣಕ್ಕೆ ಕಾರಿಯಪ್ಪ ಅವರನ್ನು ಬಿಡುಗಡೆ ಮಾಡಲು ಪಾಕ್​ ಸೇನಾ ಮುಖ್ಯಸ್ಥರು ಮುಂದಾಗಿದ್ದು.

ಕಾರಿಯಪ್ಪ ಅವರನ್ನು ಅತಿ ಗೌರವದಿಂದ ನೋಡಿಕೊಳ್ಳಲಾಯಿತು. ಕೆಎಂ ಕಾರಿಯಪ್ಪ ಅವರನ್ನು ಖುದ್ದು ಭೇಟಿ ಮಾಡಿ ಮಗನ ಸದ್ಯದ ಸ್ಥಿತಿಗತಿ ಬಗ್ಗೆ ವಿವರಿಸುವಂತೆ ದೆಹಲಿಯಲ್ಲಿರುವ ಪಾಕ್​ ಹೈ ಕಮಿಷನರ್​ಗೆ ಅಯೂಬ್​ ಆದೇಶ ನೀಡಿದರು!

ಅಚ್ಚರಿ ಎಂದರೆ, ಅವರನ್ನು ಬಿಡುಗಡೆ ಮಾಡಲು ಪಾಕ್​ ಸಿದ್ಧ ಎಂದು ಹೇಳಿದ ಪಾಕ್​ ಆಫರ್​ ಅನ್ನು ಫೀಲ್ಡ್​​ ಮಾರ್ಷಲ್​ ಕಾರಿಯಪ್ಪ ಅವರು ವಿನಮ್ರವಾಗಿ ತಿರಸ್ಕರಿಸಿದ್ದರು. ಅಷ್ಟೇ ಅಲ್ಲ ಬಂಧನಕ್ಕೊಳಗಾದ ಎಲ್ಲ ಸೈನಿಕರು ನನ್ನ ಮಕ್ಕಳಿದ್ದಂತೆ. ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಿ ಎಂದು ಅವರು ಅಯೂಬ್​ಗೆ ಸೂಚಿಸಿದ್ದರು.

ಕೆಸಿ ಕಾರಿಯಪ್ಪ ಅವರಿಗೆ ಈಗ 80 ವರ್ಷ. ಅವರು ಮಾಧ್ಯಮದ ಜೊತೆ ಮಾತನಾಡುತ್ತಾ, “ನಮ್ಮ ತಂದೆ ಪ್ರಿನ್ಸಿಪಲ್​ಗಳನ್ನು ಪಾಲಿಸುತ್ತಿದ್ದರು. ಅವರಿಗೆ ಮಗ ಹಾಗೂ ಉಳಿದ ಸೈನಿಕರು ಒಂದೇ. ಅಯುಬ್​ ಖಾನ್​ ಅವರು ನಮ್ಮ ತಂದೆಯ ಜ್ಯೂನಿಯರ್​ ಆಗಿದ್ದರು. ಆದಾಗ್ಯೂ ಉಳಿದವರಿಗಿಂತ ಮೊದಲು ನನ್ನನ್ನು ಬಿಡುಗಡೆ ಮಾಡುವುದು ಬೇಡ ಎಂದು ಹೇಳಿದ್ದರು. ಎಲ್ಲರ ಜೊತೆಗೆ ನನ್ನನ್ನೂ ಬಿಡುಗಡೆ ಮಾಡಲಾಯಿತು,” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಪಾಕಿಸ್ತಾನದಿಂದ ಬಿಡುಗಡೆಗೊಂಡು ಅವರು ವಾಪಸ್ಸಾದ ನಂತರ ಕೆಸಿ ಕಾರಿಯಪ್ಪ ಅವರನ್ನು ಭಾರತೀಯ ವಾಯು ಸೇನೆಯಲ್ಲಿ ಹೆಲಿಕಾಪ್ಟರ್​ ಘಟಕದ ಕಮಾಂಡರ್​ ಆಗಿ ನೇಮಕ ಮಾಡಲಾಯಿತು. ಅವರು ಏರ್​ ಮಾರ್ಷಲ್​ ಆಗಿ ನಿವೃತ್ತಿ ಹೊಂದಿದರು. 1971ರಲ್ಲಿ ನಡೆದ ಪಾಕ್​ ವಿರುದ್ಧದ ಯುದ್ಧದಲ್ಲೂ ಪಾಲ್ಗೊಂಡರು. ಇವರು ದೇಶಕ್ಕೆ ಸೇವೆ ಸಲ್ಲಿಸುವುದರ ಜೊತೆಗೆ ಭದ್ರತೆ ವಿಚಾರದ ಕುರಿತು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವಾಸವಾಗಿದ್ದಾರೆ.

Comments are closed.