ಕರ್ನಾಟಕ

ಮೋದಿಗೆ ಕಾಂಗ್ರೆಸ್ ಮೇಲೆ ವೈಯಕ್ತಿಕ ದ್ವೇಷ: ದೇವೇಗೌಡ

Pinterest LinkedIn Tumblr


ಹಾಸನ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಮೇಲೆ ವೈಯಕ್ತಿಕವಾಗಿ ಆಕ್ರೋಶವಿದ್ದು, ಪಾಕಿಸ್ತಾನದ ವಿರುದ್ಧದ ಏರ್ ಸ್ಟ್ರೈಕ್ ನಡೆಯುವುದಕ್ಕೂ ಮೊದಲು ಮತ್ತು ಈಗ ವಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲಾ ಎಂದು ಪ್ರಧಾನಿ ಮೋದಿ ವಿರುದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ.

ಕಳೆದ ಬಾರಿ ಪ್ರಧಾನಿ ಮೋದಿಗೆ ಸ್ಪಷ್ಟ ಬಹುಮತ ಬಂದಿತ್ತು. ಈ ನಾಲ್ಕು ವರ್ಷದಲ್ಲಿ ಜಮ್ಮು ಕಾಶ್ಮೀರದಲ್ಲಿ ಮೂರು ಪಕ್ಷಗಳು ಅಧಿಕಾರಕ್ಕೆ ಬಂದವು. ಜಮ್ಮು ಕಾಶ್ಮೀರದಲ್ಲಿ ಯಾವಾಗಲೂ 144 ಸೆಕ್ಷನ್ ಜಾರಿ ಮಾಡಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.

ಪಾಕ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ದೇವೇಗೌಡರು, ದೆಹಲಿಯಲ್ಲಿ ಯುದ್ದ ಸ್ಮಾರಕ ಮಾಡಿದ್ದು ಸ್ವಾಗತಾರ್ಹ. ಆದರೆ ಮೋದಿ ತನಗೆ ತಾನೇ ಬಣ್ಣಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮೋದಿಯ ಆಕ್ರೋಶವನ್ನು ರಾಷ್ಟ್ರದ ಜನರು ನೋಡಿ ತೀರ್ಮಾನ ಮಾಡುತ್ತಾರೆ. ರಾಷ್ಟ್ರದ ಜನರಿಗೆ ರಾಜಕೀಯ ಪ್ರಬುದ್ದತೆ ಮತ್ತು ಶಕ್ತಿ ಇದೆ. ನಮ್ಮ ಶತ್ರು ಉಗ್ರರು, ಉಗ್ರರ ವಿರುದ್ದ ನಮ್ಮ ಹೋರಾಟ ಎಂದರು.

ಮೊದಲು ನಮ್ಮ ದೇಶದ ಅಂಗ ಜಮ್ಮು ಕಾಶ್ಮೀರವನ್ನು ಗೌರವದಿಂದ ಕಾಣಬೇಕು. ನಮ್ಮ ರಾಷ್ಟ್ರದ ಅವಿಭಾಜ್ಯ ಅಂಗ ಜಮ್ಮು ಕಾಶ್ಮೀರ ಏಕೆ ಇಷ್ಟೊಂದು ಹದಗೆಟ್ಟಿದೆ ಎಂಬುದಕ್ಕೆ ಪ್ರಧಾನಿ ಉತ್ತರ ಕೊಡಬೇಕು. ಕಾಂಗ್ರೆಸ್ ಮತ್ತು ಬಿಜೆಪಿ ತಿಕ್ಕಾಟದಲ್ಲಿ ದೇಶದಲ್ಲಿನ ಐಕ್ಯತೆ ಕಾಪಾಡುವಲ್ಲಿ ಮುಗ್ಗರಿಸುತ್ತಿದ್ದೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದಾಗಿನಿಂದ ಪಾಕಿಸ್ತಾನದ ವಿರುದ್ದ ಬರೀ ಅಟ್ಯಾಕ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಿಎಸ್​ವೈಗೆ ತಿರುಗೇಟು:
ಏರ್ ಸ್ಟ್ರೈಕ್ ಆದ ಮೇಲೆ ಈಗ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಪಡೆಯುತ್ತೆ ಎಂದು ಮಾಜಿ ಸಿಎಂ ಬಿಎಸ್ ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ತಮ್ಮ ಸ್ವಾರ್ಥಕ್ಕೆ ಹೇಳುತ್ತಿದ್ದಾರೆ. ಹಿಂದೆ ವಾಜಪೇಯಿ ಕಾರ್ಗಿಲ್ ಯುದ್ದ ಗೆದ್ದು ಮತ್ತೆ ಸೋತರು. ಮಾತುಗಳಿಂದ ಜನರನ್ನು ಗೆಲ್ಲಲು ಆಗಲ್ಲ. ಈಗಲೂ ಬಿಜೆಪಿಗೆ ವಾಜಪೇಯಿ ಸ್ಥಿತಿ ಬರುತ್ತೆ ಎಂದು ಪರೋಕ್ಷವಾಗಿ ಟೀಕೆ ಮಾಡಿದರು

Comments are closed.