ಕರ್ನಾಟಕ

ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ: ಗೌಡರ ಕುಟುಂಬದ ವಿರುದ್ಧ ಬಿಜೆಪಿಗೆ ಸಿಕ್ತು ಕಾಂಗ್ರೆಸ್ ಬಲ

Pinterest LinkedIn Tumblr


ಹಾಸನ: ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ ಇಂದು ಕೂಡ ಹಾಸನದಲ್ಲಿ ಸದ್ದು ಮಾಡಿತು. ನಿನ್ನೆಯ ಕಲ್ಲು ತೂರಾಟ ಘಟನೆಯನ್ನ ಖಂಡಿಸಿದ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಮೂಲಕ ಪ್ರತಿಭಟನೆ ಮಾಡಿದ ನೂರಾರು ಬಿಜೆಪಿ ಕಾರ್ಯಕರ್ತರು, ಎನ್​ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಿಜೆಪಿ ಮುಖಂಡರು, ಗೂಂಡಾ ಜೆಡಿಎಸ್ ಕಾರ್ಯಕರ್ತರ ಬಂಧಿಸುವಂತೆ ಒತ್ತಾಯ ಮಾಡಿದರು. ಈ ಸಮಯದಲ್ಲಿ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗರಮೇಶ್ ಮಾತನಾಡಿ ರೇವಣ್ಣ ವಿರುದ್ಧ ಕಿಡಿ ಕಾರಿದರು. ಜಿಲ್ಲೆಯಲ್ಲಿ ಇದು ರೇವಣ್ಣ ದರ್ಬಾರ್ ಅಲ್ಲ, ರಾವಣನ ದರ್ಬಾರ್ ಅಂತಾ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಕಾಂಗ್ರೆಸ್ಸಿಗರ ಶಕ್ತಿ:

ಪ್ರೀತಮ್ ಗೌಡ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಎ, ಮಂಜು ಹಾಗೂ ಮಾಜಿ ಸಿಎಂ ಸಿದ್ದು ಆಪ್ತ ಬಾಗೂರು ಮಂಜೇಗೌಡ, ಪ್ರೀತಮ್ ಗೌಡ ಪೋಷಕರಿಗೆ ಸಾಂತ್ವನ ಹೇಳಿದರು.. ನೀವು ಧೈರ್ಯವಾಗಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಮಂಜು, ಘಟನೆಯನ್ನ ನಾನು ಖಂಡಿಸುತ್ತೇನೆ… ಮಾಜಿ ಪ್ರಧಾನಿ ಜಿಲ್ಲೆಯಲ್ಲಿ ಇಂತಹ ಘಟನೆ ಆಗಿರುವುದು ಪ್ರಜೆಗಳಿಗೆ ಅವಮಾನ ಮಾಡಿದ ರೀತಿ… ನಾಯಕರ ಮೆಚ್ಚಿಸಲು ಕೆಲ ಕಾರ್ಯಕರ್ತರು ಇಂತಹ ಕೃತ್ಯಕ್ಕೆ ಕೈ ಹಾಕುವುದು ಕೆಟ್ಟ ಸಂಪ್ರದಾಯ ಎಂದು ಅಭಿಪ್ರಯಪಟ್ಟಿರು…ಅಲ್ಲದೆ ಭೇಟಿ ರಾಜಕೀಯ ಉದೇಶ ಅಲ್ಲ ಎಂದ ಮಂಜು, ಪ್ರೀತಂ ನನ್ನ ಸ್ನೇಹಿತರು, ಹಾಗಾಗಿ ಸಾಂತ್ವನ ಹೇಳಲು ಬಂದಿದ್ದೇನೆ.. ಅಧಿಕಾರ ಶಾಶ್ವತ ಅಲ್ಲ.. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಿ ಎಂದು ಸಚಿವ ರೇವಣ್ಣಗೆ ತಿರುಗೇಟು ನೀಡಿದರು.

ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಆಪ್ತ ಬಾಗೂರು ಮಂಜೇಗೌಡ ಅವರು, ಜಿಲ್ಲೆಯಲ್ಲಿ ಜೆಡಿಎಸ್ ಗೂಂಡಾಗಳ ಗೂಂಡಾಗಿರಿ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಬಿಜೆಪಿ ಶಾಸಕ ಪ್ರೀತಮ್ ಗೌಡ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿರುವುದು ಶತ್ರುವಿನ ಶತ್ರು ಮಿತ್ರ ಎಂಬಂತೆ ಸಚಿವ ಹೆಚ್.ಡಿ. ರೇವಣ್ಣ ವಿರುದ್ದ ಬಿಜೆಪಿ ಮತ್ತು ಕಾಂಗ್ರೆಸ್ ಒಂದಾದಂತಿದೆ. ಒಂದುಕಡೆ ಕಾಂಗ್ರೆಸ್ಸಿಗರು ಬಿಜೆಪಿಯಂಥ ಕೋಮುವಾದಿ ಪಕ್ಷ ದೂರವಿಡುವ ಸಲುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ ಎಂದು ಹೇಳುತ್ತಾರೆ. ಆದ್ರೆ ಹಾಸನದಲ್ಲಿ ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಮನೆಗೆ ಭೇಟಿ ನೀಡುವುದು ಭಾರೀ ಕುತೂಹಲ ಕೆರಳಿಸಿದೆ. ಈ ಭೇಟಿ ಹಿಂದೆ ಭಾರೀ ರಾಜಕೀಯ ಲೆಕ್ಕಾಚಾರವಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

Comments are closed.