ಕರ್ನಾಟಕ

ಬಂಡಾಯ ಶಾಸಕರ ಅನರ್ಹತೆಗೆ ಕಾಂಗ್ರೆಸ್ ನಿರ್ಧಾರ!: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ವಿದ್ಯಮಾನ

Pinterest LinkedIn Tumblr


ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ವಿದ್ಯಮಾನ ಜರುಗಿದ್ದು, ರೆಬೆಲ್ ಶಾಸಕರ ಅನರ್ಹತೆಗೆ ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇಂದು ವಿಪ್ ಉಲ್ಲಂಘಿಸಿದ ಅತೃಪ್ತ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಮತ್ತು ಉಮೇಶ್ ಜಾಧವ್ ಇಬ್ಬರನ್ನು ಅನರ್ಹತೆಗೊಳಿಸುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆಯಂತೆ. ಈ ಸಂಬಂಧ ಕಾಂಗ್ರೆಸ್ ಈಗಾಗಲೇ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಗುರುವಾರ ಅನರ್ಹಗೊಳಿಸುವಂತೆ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಲಿದೆ ಎಂದು ಕಾಂಗ್ರೆಸ್ ಬಲ್ಲ ಮೂಲಗಳು ತಿಳಿಸಿವೆ.

ಸಚಿವ ಸ್ಥಾನ ಕಳೆದುಕೊಂಡ ಬಳಿಕ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ. ಇತ್ತ ಚಿಂಚೋಳ್ಳಿ ಶಾಸಕ ಉಮೇಶ್ ಜಾಧವ್ ಬಂಡಾಯದ ಬಾವುಟ ಹಿಡಿದ ಮೊದಲಿಗರಾಗಿದ್ದು, ಹಲವು ಬಾರಿ ಸರ್ಕಾರದ ವೈಖರಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅತೃಪ್ತ ಶಾಸಕರನ್ನು ಸೆಳೆಯಲು ರಮೇಶ್ ಜಾರಕಿಹೊಳಿ ಮತ್ತು ಉಮೇಶ್ ಜಾಧವ್ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರನ್ನು ಅನರ್ಹಗೊಳಿಸುವ ಮೂಲಕ ಇನ್ನುಳಿದ ಶಾಸಕರಿಗೆ ಎಚ್ಚರಿಕೆ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

ಬಜೆಟ್ ಅಧಿವೇಶನದ ಮೊದಲ ದಿನವೇ ಮೈತ್ರಿ ಸರ್ಕಾರಕ್ಕೆ ಆಘಾತವಾಗಿದೆ. ಐವರು ಅತೃಪ್ತರೊಂದಿಗೆ 10 ಕಾಂಗ್ರೆಸ್ ಶಾಸಕರು ಗೈರಾಗಿದ್ದಾರೆ. ಜೆಡಿಎಸ್‍ನ ಓರ್ವ ಶಾಸಕರು ಹಾಗೂ ಇಬ್ಬರು ಪಕ್ಷೇತರರೂ ಕೂಡ ಚಕ್ಕರ್ ಹೊಡೆದಿದ್ದಾರೆ. ಮೈತ್ರಿ ಸರ್ಕಾರದ 10 ಶಾಸಕರಲ್ಲದೆ, ಬಿಜೆಪಿಯ ಐವರು ಶಾಸಕರು ಕಲಾಪದಿಂದ ದೂರ ಉಳಿದಿದ್ದಾರೆ. ಗೈರಾದ ಬಿಜೆಪಿ ಶಾಸಕರಲ್ಲಿ ಇಬ್ಬರು ಆಪರೇಷನ್ ಕಮಲದಲ್ಲೂ ತೊಡಗಿದ್ದಾರೆ ಎನ್ನಲಾಗಿದೆ.

ಕಲಾಪಕ್ಕೆ ಗೈರಾದ ಕಾಂಗ್ರೆಸಿಗರು: ರಮೇಶ್ ಜಾರಕಿಹೊಳಿ (ಗೋಕಾಕ್), ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಉಮೇಶ್ ಜಾಧವ್(ಚಿಂಚೋಳಿ), ಮಹೇಶ್ ಕುಮಟಳ್ಳಿ (ಅಥಣಿ), ಗಣೇಶ್ (ಕಂಪ್ಲಿ) ಈ ಎಲ್ಲ ಶಾಸಕರು ಯಾವುದೇ ಅನುಮತಿಯನ್ನು ಪಡೆಯದೇ ಅಧಿವೇಶನಕ್ಕೆ ಗೈರಾಗಿದ್ದಾರೆ ಎನ್ನಲಾಗುತ್ತಿದೆ, ಇನ್ನುಳಿದಂತೆ ಬಿ.ಸಿ. ಪಾಟೀಲ್, ಡಾ. ಸುಧಾಕರ್, ರಾಮಪ್ಪ, ರಾಮಲಿಂಗಾರೆಡ್ಡಿ ಮತ್ತು ಸೌಮ್ಯಾರೆಡ್ಡಿ ಇವರೆಲ್ಲರು ಪಕ್ಷಕ್ಕೆ ಮಾಹಿತಿ ನೀಡಿ ಗೈರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.