ಕರ್ನಾಟಕ

ಸದನಕ್ಕೆ ಗೈರಾಗುವಂತೆ ಕಾಂಗ್ರೆಸ್ ಶಾಸಕನಿಗೆ ಬಿಜೆಪಿಯಿಂದ 30 ಕೋಟಿ ಆಮಿಷ; ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಸದನಕ್ಕೆ ಗೈರಾಗುವಂತೆ ಕಾಂಗ್ರೆಸ್​ ಶಾಸಕನಿಗೆ ಬಿಜೆಪಿ 30 ಕೋಟಿ ಆಮಿಷವೊಡ್ಡಿದೆ. ನಮ್ಮ ಶಾಸಕನ ಮನೆಗೆ ಬಿಜೆಪಿ ನಾಯಕರು ಸೂಟ್​ಕೇಸ್​ ಸಮೇತ ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

30 ಕೋಟಿ ರೂ. ಆಫರ್ ಅನ್ನು ಕಾಂಗ್ರೆಸ್ ಶಾಸಕ ತಿರಸ್ಕರಿಸಿದ್ದು, ನಿನ್ನೆ ಅವರ ಮನೆಗೆ ಬಿಜೆಪಿ ಮುಖಂಡರು ಹಣದ ಸಮೇತ ಹೋಗಿದ್ದಾರೆ. ಸದನಕ್ಕೆ ಗೈರಾದರೆ 30 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಆದರೆ, ನಮ್ಮ ಶಾಸಕ ಬಿಜೆಪಿಯ ಆಮಿಷಕ್ಕೆ ಮಣಿದಿಲ್ಲ ಎಂದು ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಸಿದ್ದರಾಮಯ್ಯ ಹೊಸ ಬಾಂಬ್​ ಹಾಕಿದ್ದಾರೆ. ಯಾವ ಕಾಂಗ್ರೆಸ್​ ಶಾಸಕನಿಗೆ ಬಿಜೆಪಿ ಆಮಿಷವೊಡ್ಡಿತ್ತು ಎಂಬ ಬಗ್ಗೆ ಸಿದ್ದರಾಮಯ್ಯ ಸುಳಿವು ಬಿಟ್ಟುಕೊಟ್ಟಿಲ್ಲ.

ಅತೃಪ್ತರಿಗೆ ಕೊನೆಯ ಅವಕಾಶ:

ಇದೇ ವೇಳೆ ಪಕ್ಷದ ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದು, ಫೆ. 8ರಂದು ಕರೆದಿರುವ ಶಾಸಕಾಂಗ ಸಭೆಗೆ ಅತೃಪ್ತರು ಹಾಜರಾಗದಿದ್ದರೆ ಅನರ್ಹತೆ ಮಾಡುವಂತೆ ಸ್ಪೀಕರ್ ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅತೃಪ್ತ ಶಾಸಕರಿಗೆ ಕೊನೆಯ ಅವಕಾಶ ನೀಡುತ್ತಿದ್ದು, ಪಕ್ಷ ಮತ್ತು ಮುಖಂಡರು ಸಾಕಷ್ಟು ತಾಳ್ಮೆಯಿಂದ ಕಾದಿದ್ದೇವೆ.
ಇನ್ನೂ ಕಾಯಲು ಸಾಧ್ಯವಿಲ್ಲ. ಯಾವ ಕಾಂಗ್ರೆಸ್​ ಶಾಸಕರು ನಾಡಿದ್ದು ನಡೆಯುವ ಸಭೆಗೆ ಹಾಜರಾಗುವುದಿಲ್ಲವೋ ಅವರ ವಿರುದ್ಧ ಸ್ಪೀಕರ್ ಗೆ ದೂರು ನೀಡಿ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Comments are closed.