ರಾಷ್ಟ್ರೀಯ

ಮುತ್ತೂಟ್​ ಫೈನಾನ್ಸ್​ನಿಂದ 10 ಕೋಟಿ ಮೌಲ್ಯದ ಚಿನ್ನ ದರೋಡೆ​!

Pinterest LinkedIn Tumblr


ಮುಜಾಫರ್​ಪುರ (ಬಿಹಾರ): ಐದು ಬ್ಯಾಗುಗಳಲ್ಲಿ, ಒಟ್ಟು ಹತ್ತು ಕೋಟಿ ಮೌಲ್ಯದ ಚಿನ್ನವನ್ನು ಐನಾತಿ ಕಳ್ಳರು ಲೂಟಿ ಮಾಡಿರುವ ಘಟನೆ ಬಿಹಾರದ ಖಾಸಗಿ ಲೇವಾದೇವಿ ಸಂಸ್ಥೆ ಮುತ್ತೂಟ್​ ಫೈನಾನ್ಸ್​ನಲ್ಲಿ ನಡೆದಿದೆ.

ಕಳ್ಳತನದ ನಂತರ ಮಾತನಾಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್, ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಇಲ್ಲಿನ ಉದ್ಯೋಗಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಈ ಹೇಳಿಕೆಯಂತೆ ಖದೀಮರು ಶಸ್ತ್ರಸಜ್ಜಿತರಾಗಿದ್ದರು. ಅವರೆಲ್ಲರ ಬಳಿ ಪಿಸ್ತೂಲ್​ ಇತ್ತು. ಉದ್ಯೋಗಿಗಳ ಹಣೆಗೆ ಪಿಸ್ತೂಲ್​ ಇಟ್ಟು ಬೆದರಿಸಿ, ಚಿನ್ನವಿದ್ದ ಲಾಕರ್​ ಇದ್ದ ಕೀ ಪಡೆದು, ಚಿನ್ನವನ್ನು ದೋಚಿದ್ದಾರೆ ಎಂದು ತಿಳಿಸಿದ್ದಾರೆ. ಕಳ್ಳತನವಾದ ಚಿನ್ನದ ಒಟ್ಟಾರೆ ಮೌಲ್ಯ ಹತ್ತು ಕೋಟಿ ಎಂದು ಇಲ್ಲಿನ ಉದ್ಯೋಗಿಗಳು ತಿಳಿಸಿದ್ದಾರೆ.

ಒಟ್ಟು ಆರು ಮಂದಿ ಇದ್ದ ಖದೀಮರ ಎಲ್ಲರ ಬಳಿ ಪಿಸ್ತೂಲ್​ ಇತ್ತು. ಭಾಗ್ವಾನ್​ಪುರದ ಮುತ್ತೂಟ್​ ಫೈನಾನ್ಸ್​ಗೆ ಪಿಸ್ತೂಲ್​ಸಮೇತರಾಗಿ ಖದೀಮರು ನುಗ್ಗಿ, ಚಿನ್ನವನ್ನು ಲೂಟಿ ಹೊಡೆದಿದ್ದಾರೆ ಎಂದು ಎಸ್​ಎಸ್​ಪಿ ಹೇಳಿದರು.

ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು, ಚಿನ್ನದ ಮೇಲಿನ ಸಾಲ ಕೇಳಿದರು. ಆರಂಭದಲ್ಲಿ ನಾನು ಅವರಿಗೆ ಮಾರ್ಗದರ್ಶನ ನೀಡಿದೆ. ಈ ವೇಳೆ ಹಿಂದಿನಿಂದ ಬಂದ ಮತ್ತೊಬ್ಬ ನನ್ನ ಹೊಡೆದ. ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದೆ. ಅರೆಪ್ರಜ್ಞೆ ಬಂದಾಗ ಅವರು ಹೊರಗೆ ಹೋಗುತ್ತಿದ್ದರು. ಹೋಗುವಾಗ ಅವರ ಕೈಯಲ್ಲಿ ಬ್ಯಾಗುಗಳು ಇದ್ದವು. ನನಗೆ ಪೂರ್ಣ ಪ್ರಜ್ಞೆ ಬಂದಾಗ ತಿಳಿಯಿತು ಇಲ್ಲಿ ಏನಾಗಿದೆ ಎಂದು ವರದಿಗಾರರಿಗೆ ಇಲ್ಲಿನ ಸಿಬ್ಬಂದಿ ಒಬ್ಬರು ವಿವರಿಸಿದರು.

ಅಲ್ಲಿನ ಮತ್ತೊಬ್ಬ ಉದ್ಯೋಗಿ ಹೇಳುವ ಪ್ರಕಾರ, ಲಾಕರ್​ನಲ್ಲಿದ್ದ ಚಿನ್ನವನ್ನು ಒಬ್ಬ ಐದು ಬ್ಯಾಗುಗಳಿಗೆ ತುಂಬಿಕೊಳ್ಳುವಾಗಿ ಉಳಿದವರು ಹೊರಗೆ ರಕ್ಷಣೆಗಾಗಿ ಎಲ್ಲರನ್ನು ಪಿಸ್ತೂಲ್​ ತೋರಿಸಿ, ಬೆದರಿಸುತ್ತಿದ್ದರು. ಅಲ್ಲಿದ್ದವರು ಯಾರೂ ಶಬ್ದ ಮಾಡದಂತೆ ನೋಡಿಕೊಳ್ಳುತ್ತಿದ್ದರು. ನಂತರ ಐದು ಬ್ಯಾಗುಗಳಲ್ಲಿ ಚಿನ್ನವನ್ನು ಕದ್ದೊಯ್ದರು ಎಂದು ಎಸ್​ಎಸ್​ಪಿ ತಿಳಿಸಿದ್ದಾರೆ. ಒಟ್ಟಾರೆ ಪ್ರಕರಣ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಖದೀಮರನ್ನು ಹಿಡಿಯುವುದಾಗಿ ಅವರು ಭರವಸೆ ನೀಡಿದರು.

Comments are closed.