ಕರ್ನಾಟಕ

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಶಾಸಕ ಆನಂದ್​ ಸಿಂಗ್

Pinterest LinkedIn Tumblr

ಬೆಂಗಳೂರು: ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್​ನಲ್ಲಿ ನಡೆದ ಕಾಂಗ್ರೆಸ್ ಶಾಸಕರ ಬಡಿದಾಟ ಪ್ರಕರಣದಲ್ಲಿ ಕಂಪ್ಲಿ ಶಾಸಕ ಜೆ.ಎನ್​. ಗಣೇಶ್​ ಅವರಿಂದ ಏಟು ತಿಂದಿದ್ದ ಆನಂದ್​ ಸಿಂಗ್​ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಕಂಪ್ಲಿ ಗಣೇಶ್​ ನಡೆಸಿದ್ದ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆನಂದ್​ ಸಿಂಗ್​ ಅವರ ಕಣ್ಣು, ತಲೆಗೆ ತೀವ್ರ ಗಾಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಆನಂದ್​ ಸಿಂಗ್​ ಪತ್ನಿ ಮತ್ತು ಮಗ ಕಂಪ್ಲಿ ಗಣೇಶ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ನಡೆದ ಬಳಿಕ, ಕಾಂಗ್ರೆಸ್​ನಿಂದ ಕೂಡ ಕಂಪ್ಲಿ ಗಣೇಶ್​ ಅವರನ್ನು ಅಮಾನತು ಮಾಡಲಾಗಿತ್ತು.

ಪೊಲೀಸರು ತಮಗೆ ಸಿಕ್ಕ ಸುಳಿವಿನ ಆಧಾರದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ಕಂಪ್ಲಿ ಗಣೇಶ್​ ಪತ್ತೆಯಾಗಿರಲಿಲ್ಲ. ಈ ನಡುವೆ ಗೃಹ ಸಚಿವರು, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳು ಕೂಡ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಅವರಿಗೆ ಶಿಕ್ಷೆ ಕೊಟ್ಟೇ ಕೊಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಹಾಗೇ, ಆನಂದ್​ ಸಿಂಗ್​ ಕುಟುಂಬಸ್ಥರೊಂದಿಗೆ ಕಂಪ್ಲಿ ಗಣೇಶ್​ ಮನೆಯವರು ಸಂಧಾನ ನಡೆಸಲು ಮುಂದಾಗಿದ್ದರು. ಆದರೆ, ಸಂಧಾನದ ಪ್ರಶ್ನೆಯೇ ಇಲ್ಲ, ಈ ರೀತಿಯ ಹಲ್ಲೆ ನಡೆಸಿದವರಿಗೆ ಶಿಕ್ಷೆ ಕೊಡಿಸಿಯೇ ಸಿದ್ಧ ಎಂದು ಆನಂದ್​ ಸಿಂಗ್​ ಕುಟುಂಬದವರು ಹಠ ಹಿಡಿದಿದ್ದರು.

ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಾಸಕ ಆನಂದ್ ಸಿಂಗ್ ಇಂದು ಡಿಸ್ಚಾರ್ಜ್​ ಆಗಿದ್ದಾರೆ. ಆನಂದ್​ ಸಿಂಗ್​ ಅವರ ಕಣ್ಣಿಗೆ ಪೆಟ್ಟಾಗಿ ಊತ ಉಂಟಾಗಿತ್ತು. ತಲೆ ಮತ್ತು ಎದೆಯ ಭಾಗಕ್ಕೆ ಪೆಟ್ಟಾಗಿತ್ತು. ಇಂದು ರಾತ್ರಿ 8.30ರ ಸುಮಾರಿಗೆ ಆನಂದ್​ ಸಿಂಗ್​ ತರಾತುರಿಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಕೆಲ ಸಮಯ ವಿಶ್ರಾಂತಿಯ ಅಗತ್ಯತೆ ಇದ್ದು, ಸದ್ಯಕ್ಕೆ ಆಸ್ಪತ್ರೆ ವಾಸ ಮುಗಿದಿದೆ.

Comments are closed.