ಕರ್ನಾಟಕ

ಮಂಡ್ಯದಲ್ಲಿ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲಿರುವ ದೇವೇಗೌಡರು?

Pinterest LinkedIn Tumblr


ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯಲು ಕಾಂಗ್ರೆಸ್​- ಜೆಡಿಎಸ್​ ಸಜ್ಜಾಗಿವೆ. ಆದರೆ, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಎರಡೂ ಪಕ್ಷಗಳಿಗೆ ಕಗ್ಗಂಟಾಗಿದೆ. ಅಂತಹ ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದು. ಜೆಡಿಎಸ್​ನ ಪ್ರಭಾವ ಹೆಚ್ಚಿರುವ ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರ ಹವಾ ಕೂಡ ಜೋರಾಗೇ ಇದೆ. ಅಲ್ಲದೆ, ಈ ಬಾರಿಯ ಚುನಾವಣೆಗೆ ಅಂಬರೀಷ್​ ಅವರ ಪತ್ನಿ ಸುಮಲತಾಗೆ ಮಂಡ್ಯದಿಂದ ಟಿಕೆಟ್​ ನೀಡಬೇಕೆಂದು ಕಾಂಗ್ರೆಸ್​ ಬೆಂಬಲಿಗರು ಪಟ್ಟು ಹಿಡಿದಿದ್ದರು.

ಇತ್ತ ದೇವೇಗೌಡರ ಮೊಮ್ಮಗ ನಿಖಿಲ್​ ಕುಮಾರ್ ಮಂಡ್ಯದಿಂದ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗಾಗಿ, ಇಲ್ಲಿನ ಟಿಕೆಟ್​ ಹಂಚಿಕೆ ಒಂದು ರೀತಿಯ ಸವಾಲಿನದ್ದಾಗಿತ್ತು. ಆದರೆ, ಇದೀಗ ಹೊಸ ಲೆಕ್ಕಾಚಾರ ನಡೆಸಿರುವ ದೇವೇಗೌಡರು ಜಾಣತನ ಹೆಜ್ಜೆಯಿಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ರಾಜಕೀಯದ ಚದುರಂಗದಾಟದಲ್ಲಿ ದೇವೇಗೌಡರು ಯಾವಾಗ ಯಾವ ಕಾಯಿಯನ್ನು ನಡೆಸುತ್ತಾರೆ ಎಂದು ಊಹಿಸುವುದು ಸ್ವಲ್ಪ ಕಷ್ಟವೇ. ಇದೀಗ, ಮಂಡ್ಯದಲ್ಲಿ ಹೊಸ ದಾಳ ಉರುಳಿಸಿದ ಜೆಡಿಎಸ್ ಮತ್ತೆ ಮಂಡ್ಯ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ರೂಪಿಸಿದೆ. ಸುಮಲತಾ ಅಂಬರೀಷ್​ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್​ ಮುಂದಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಜೆಡಿಎಸ್​ ವರಿಷ್ಠ ದೇವೇಗೌಡರು ಇಕ್ಕಟ್ಟಿಗೆ ಸಿಲುಕಿದ್ದರು. ಕಳೆದ ಎರಡ್ಮೂರು ದಿನಗಳಿಂದ ಈ ವಿಚಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೊಳಲಾಗಿತ್ತು.

ಇದೀಗ, ಮಂಡ್ಯದ ಸೊಸೆಯಾದ ಸುಮಲತಾ ಅಂಬರೀಷ್​ ಬದಲಿಗೆ ಮಂಡ್ಯದ ಮನೆಮಗಳನ್ನೇ ಅಖಾಡಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. ಆ ಮೂಲಕ ಕಾಂಗ್ರೆಸ್ ತಂತ್ರಕ್ಕೆ ತಿರುಗೇಟು ನೀಡಲು ದೇವೇಗೌಡರು ಸಿದ್ಧತೆ ನಡೆಸಿದ್ದಾರೆ. 2 ಬಾರಿ ಜೆಡಿಎಸ್​ನಿಂದ ಟಿಕೆಟ್ ವಂಚಿತರಾಗಿದ್ದ ಮಂಡ್ಯದ ಲಕ್ಷ್ಮೀ ಅಶ್ವಿನ್​ ಗೌಡ ಅವರಿಗೆ ಈಗ ಅವಕಾಶ ನೀಡಲು ಜೆಡಿಎಸ್​ ಮುಂದಾಗಿದೆ ಎನ್ನಲಾಗಿದೆ. ಕಳೆದ ಲೋಕಸಭಾ ಉಪಸಮರದಲ್ಲೂ ಅವಕಾಶ ವಂಚಿತರಾಗಿದ್ದ ಲಕ್ಷ್ಮೀಗೆ ವಿಧಾನ ಸಭೆ ಚುನಾವಣೆಯಲ್ಲೂ ಟಿಕೆಟ್ ಕೈತಪ್ಪಿತ್ತು. ಈಗ ಮಂಡ್ಯ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೆ ಐಆರ್​ಎಸ್​ ಅಧಿಕಾರಿಯಾಗಿದ್ದ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಲಾಗಿದೆ.

ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ಗೆ ಮಂಡ್ಯದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ ಕುಟುಂಬ ರಾಜಕಾರಣದ ಆರೋಪ ಬರುತ್ತದೆ. ಸುಮಲತಾ ಅಂಬರೀಷ್​ ಸ್ಪರ್ಧಿಸಬೇಕೆಂಬ ಒತ್ತಾಯ ಇರುವುದರಿಂದ ಮಹಿಳೆಗೆ ಅವಕಾಶ ತಪ್ಪಿಸಿದ ಆರೋಪವೂ ಬರಬಹುದು. ಈ ಕಾರಣಕ್ಕಾಗಿ ಇನ್ನೋರ್ವ ಮಹಿಳೆಗೆ ಅವಕಾಶ ನೀಡುವ ಮೂಲಕ ಜೆಡಿಎಸ್​ನಿಂದಲೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ದೇವೇಗೌಡರು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

Comments are closed.