ಕರ್ನಾಟಕ

ಬಿಜೆಪಿಯವರು ಯಾವತ್ತೂ ಕೂಡ ತೊಂದರೆ ಕೊಟ್ಟಿರಲಿಲ್ಲ – ಸಿಎಸ್ ಪುಟ್ಟರಾಜು ಹೇಳಿಕೆ ತೆರೆದಿಟ್ಟಿದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹುಳುಕು

Pinterest LinkedIn Tumblr


ಬೆಂಗಳೂರು: ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ತಕರಾರುಗಳು, ಒಬ್ಬರಲ್ಲಾ ಒಬ್ಬರ ತರಲೆಗಳು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನಿತ್ಯದ ತಲೆನೋವು ತರುತ್ತಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತ ಶಾಸಕರ ಬಂಡಾಯ ಪರ್ವದ ಬಳಿಕ ನಿನ್ನೆ ಸಿದ್ದರಾಮಯ್ಯ ನಿಷ್ಠ ಕುರುಬ ಸಮುದಾಯದ ನಾಯಕರು ಮೈತ್ರಿ ಸರಕಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು ಈಗ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಎಸ್.ಟಿ. ಸೋಮಶೇಖರ್, ಎಂಟಿಬಿ ನಾಗರಾಜು ಮೊದಲಾದವರು ಈಗಲೂ ತಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳುವ ಮೂಲಕ ಕಾಂಗ್ರೆಸ್-ಜೆಡಿಎಸ್ ಬಾಂಧವ್ಯದ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾರೆ. ಸಿದ್ದರಾಮಯ್ಯರ ಪರಮನಿಷ್ಠರ ಈ ಹೇಳಿಕೆಗೆ ಜೆಡಿಎಸ್​ನ ನಾಯಕರು ಕೆಂಡಾಮಂಡಲವಾಗಿದ್ದಾರೆ. ಸಮ್ಮಿಶ್ರ ಸರಕಾರ ರಚಿಸಲು ದೇವೇಗೌಡರ ಮನೆ ಬಾಗಿಲಿಗೆ ಬಂದಿದ್ದು ಕಾಂಗ್ರೆಸ್ ಪಕ್ಷವೇ ಎಂದು ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.

“ನಾವೇನು ಅಧಿಕಾರ ಬೇಕೆಂದು ಯಾರ ಮನೆ ಬಳಿಯೂ ಹೋಗಿಲ್ಲ. ನಿಮ್ಮವರೇ ಸಿಎಂ ಆಗಿ ಎಂದು ದೇವೇಗೌಡರ ಮನೆ ಬಳಿ ಬಂದಿದ್ದ ಕಾಂಗ್ರೆಸ್ಸಿಗರು ಬೇಷರತ್ ಬೆಂಬಲ ಕೊಡುತ್ತೇವೆಂದಿದ್ದರು. ಈಗ ಅವರು ಉಲ್ಟಾ ಮಾತನಾಡುತ್ತಿದ್ದಾರೆ,” ಎಂದು ಮೇಲುಕೋಟೆ ಶಾಸಕರೂ ಆಗಿರುವ ಪುಟ್ಟರಾಜು ಟೀಕಿಸಿದ್ದಾರೆ.

ಇನ್ನೂ ನಿಷ್ಠುರವಾಗಿ ಮಾತನಾಡಿದ ಪುಟ್ಟರಾಜು, 2006ರಲ್ಲಿ ಬಿಜೆಪಿ ಜೊತೆ ಇದ್ದ ಸಖ್ಯ ಎಷ್ಟೋ ವಾಸಿ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಬಿಜೆಪಿ ಜೊತೆ ಅಧಿಕಾರ ನಡೆಸಿದಾಗ ಇಡೀ ರಾಜ್ಯದ ಜನತೆಯೇ ಮೆಚ್ಚುವಂತಿತ್ತು. 20 ತಿಂಗಳ ಆ ಆಡಳಿತವನ್ನು ಜನರು ಇಷ್ಟಪಟ್ಟಿದ್ದರು. ಬಿಜೆಪಿಯ ಸಹಕಾರವೂ ಚೆನ್ನಾಗಿತ್ತು. ಈಗ ಹೆಜ್ಜೆಹೆಜ್ಜೆಗೂ ತಕರಾರು ನಡೆಯುತ್ತಿದೆ. ರಾಜೀನಾಮೆ ಕೊಡಲು ಸಿದ್ದ ಎಂದು ಸಿಎಂ ಹೇಳಬೇಕಾದರೆ ಅವರಿಗೆ ಎಷ್ಟು ನೋವಿದೆ ಎಂಬುದನ್ನು ಜನರು ಗಮನಿಸಲಿ. ಕಾಂಗ್ರೆಸ್​ನವರು ಇದೇ ರೀತಿ ಮಾತು ಮುಂದುವರಿಸಿದರೆ ಮುಂದಿನ ಪರಿಣಾಮ ಬೇರೆಯೇ ಆಗುತ್ತದೆ” ಎಂದು ಸಚಿವ ಸಿಎಸ್ ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.

ದೇವೇಗೌಡರ ಕುಟುಂಬದ ಬಗ್ಗೆ ಟೀಕೆ ಮಾಡಿದರೆ ತಾವು ಸಹಿಸುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಕೋನರೆಡ್ಡಿ ಹೇಳಿದ್ದಾರೆ.

“ಎಲ್ಲಾ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ನಾವು ಸರಿಯಾಗಿ ಉತ್ತರ ಕೊಡಬೇಕಾಗುತ್ತೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ರಾಮಯ್ಯ ಬಗ್ಗೆ ನಾವು ಎಲ್ಲಿಯೂ ಮಾತನಾಡಿಲ್ಲ. ನಮ್ಮ ಪಕ್ಷದ ವಿರುದ್ಧ ಯಾರೂ ಟೀಕೆ ಮಾಡಬಾರದು” ಎಂದು ಕೋನರೆಡ್ಡಿ ಆಗ್ರಹ ಮಾಡಿದ್ದಾರೆ.

ಕಾಂಗ್ರೆಸ್ಸಿನವರು ಮನಸ್ಸಿಗೆ ಬಂದಂತೆ ಹೋದಲ್ಲಿ ಬಂದಲ್ಲಿ ಅಭ್ಯರ್ಥಿ ಘೋಷಣೆ ಮಾಡುತ್ತಿದ್ದಾರೆ ಎಂದೂ ಕೋನರೆಡ್ಡಿ ಅವರು ಸಿದ್ದರಾಮಯ್ಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

“ಎಲ್ಲಾ ಕೆಲಸ ಮಾಡಿಕೊಳ್ಳುತ್ತಿರುವವರು ಕಾಂಗ್ರೆಸ್​ನವರು. ಈಗ ಅವರೇ ನಮ್ಮ ಸಿಎಂ ಬಗ್ಗೆ ಮಾತನಾಡುತ್ತಾರೆ. ಯಾವುದೇ ಷರತ್ತು ಹಾಕದೆ ಸಿಎಂ ಸ್ಥಾನಕ್ಕೆ ಕೂರಿಸಿ ಈಗ ಬಾಯಿಗೆ ಬಂದಂತೆ ಮಾಡನಾಡುತ್ತಿದ್ದಾರೆ. ಎಸ್.ಟಿ. ಸೋಮಶೇಖರ್ ಅವರಿಗೆ ಮುಖ್ಯಮಂತ್ರಿಗಳು ಬಿಡಿಎ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೂ ಅವರಿಗೆ ಹಿಂಗೆ ಮಾತನಾಡುವುದು ಸರಿಯಲ್ಲ. ಸಚಿವ ಪುಟ್ಟರಂಗಶೆಟ್ಟಿ ಅವರು ಸಿಎಂ ವಿರುದ್ಧ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತಿದೆ. ಕಾಂಗ್ರೆಸ್ ನಾಯಕರು ಮಾತನಾಡುವಾಗ ನೂರು ಸಲ ಯೋಚನೆ ಮಾಡಿ ಮಾತನಾಡಬೇಕು” ಎಂದು ಮಾಜಿ ಶಾಸಕ ಕೋನರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್​ನ ಇತರ ನಾಯಕರಾದ ವೈಎಸ್​ವಿ ದತ್ತಾ, ಟಿಎ ಸರವಣ, ಹೆಚ್. ವಿಶ್ವನಾಥ್ ಮೊದಲಾದವರೂ ಕೂಡ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮೈತ್ರಿ ಸರಕಾರದ ಸಿಎಂ ಆಗಿ ಕುಮಾರಸ್ವಾಮಿ ಅವರೇ ಇರುತ್ತಾರೆ. ಹಗಲೂ ರಾತ್ರಿ ಕೆಲಸ ಮಾಡುತ್ತಿರುವ ಇಂತಹ ಮುಖ್ಯಮಂತ್ರಿಗೆ ಸಹಕಾರ ಕೊಡಬೇಕು. ಬೀದಿಯಲ್ಲಿ ನಿಂತು ಸರಕಾರಕ್ಕೆ ಧಕ್ಕೆ ಬರುವಂತಹ ಮಾತನ್ನ ಯಾರೂ ಆಡಬಾರದು. ಮೈತ್ರಿ ಸರಕಾರದಲ್ಲಿ ಜವಾಬ್ದಾರಿ ಇರುವ ಕಾಂಗ್ರೆಸ್ ಪಕ್ಷವು ತಮ್ಮ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ.

ನಿನ್ನೆ ನಗರದ ಸೋಂಪುರ ಗೇಟ್ ಬಳಿ ನಡೆದ ಕನಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್​ನ ಪುಟ್ಟರಂಗ ಶೆಟ್ಟಿ, ಎಂಟಿಬಿ ನಾಗರಾಜು, ಎಸ್.ಟಿ. ಸೋಮಶೇಖರ್, ಹೆಚ್.ಎಂ. ರೇವಣ್ಣ ಅವರು ಸಿದ್ದರಾಮಯ್ಯ ಹಾಗೂ ಅವರ ಹಿಂದಿನ ಸರಕಾರದ ಗುಣಗಾನ ಮಾಡಿದ್ದರು. ಜೊತೆಗೆ, ಈಗಿನ ಸಮ್ಮಿಶ್ರ ಸರಕಾರ ವಿಫಲವಾಗಿದೆ ಎಂದೂ ಟೀಕಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ತಮ್ಮ ಆಪ್ತರ ಹೊಗಳಿಕೆಗೆ ಸಾಕ್ಷಿಯಾಗಿದ್ದರು.

Comments are closed.