ಕರ್ನಾಟಕ

ಸಿದ್ದಗಂಗಾ ಮಠದಲ್ಲಿ ಸಾಮೂಹಿಕ ಕೇಶಮುಂಡನೆ ನಿರ್ಧಾರ: ಬಸವತತ್ವಕ್ಕೆ ಅಪಚಾರ ಎಂದ ಮಾತೆ ಮಹಾದೇವಿ

Pinterest LinkedIn Tumblr


ಬಾಗಲಕೋಟೆ: ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಠದ ವಿದ್ಯಾರ್ಥಿಗಳ ಸಾಮೂಹಿಕ ಕೇಶಮುಂಡನೆಯ ನಿರ್ಧಾರಕ್ಕೆ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ಕೇಶ ಮುಂಡನೆಯ ನಿರ್ಧಾರವು ಬಹುದೊಡ್ಡ ಮೂರ್ಖತನದ್ದಾಗಿದೆ. ಕೇಶ ಮುಂಡನ ಬದಲು ಸಾಮೂಹಿಕ ಲಿಂಗಪೂಜೆ, ದಾಸೋಹ ಮಾಡಲಿ ಎಂದು ಮಾತೆ ಮಹಾದೇವಿ ಸಲಹೆ ನೀಡಿದ್ದಾರೆ.

ಲಿಂಗಾಯತ ಧರ್ಮದಲ್ಲಿ ಯಾರಾದರೂ ಮೃತಪಟ್ಟರೆ ಕೇಶಮುಂಡನ ಮಾಡಿಕೊಳ್ಳುವ ಪದ್ಧತಿ ಇಲ್ಲ. ಬಸವತತ್ವ ಎಂದು ಹೇಳಿಕೊಂಡು ಇಂತಹ ಆಚರಣೆ ಮಾಡಿದರೆ ಹೇಗೆ? ಇದು ಶಿವಕುಮಾರ ಶ್ರೀಗಳಿಗೆ ಮಾಡುವ ಅಪಚಾರವಾಗಿದೆ. ಶ್ರೀಗಳಿಗಾಗಿ ಬೇಕಾದರೆ ಪ್ರಾರ್ಥನೆ ಮಾಡಲಿ, ಸಾಮೂಹಿಕ ಲಿಂಗಪೂಜೆ ಮಾಡಲಿ, ದಾಸೋಹ ಮಾಡಲಿ. ಮೌಢ್ಯಾಚರಣೆ ಮೂಲಕ ವೈದಿಕ ಸಂಪ್ರದಾಯದಂತೆ ತಲೆ ಬೋಳಿಸಿಕೊಳ್ಳುವುದು ಸರಿಯಲ್ಲ ಎಂದು ಮಾತೆ ಮಹಾದೇವಿ ಬುದ್ಧಿಮಾತು ಹೇಳಿದ್ದಾರೆ.

ವಿದ್ಯಾರ್ಥಿಗಳು ನಿಮ್ಮ ಕೈಯಲ್ಲಿ ಇದ್ದಾರೆ ಅಂದರೆ ಅವರು ಸಾಮೂಹಿಕ ನಿರ್ಧಾರಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎಂದರ್ಥವಲ್ಲ. ಹಿರಿಯ ಶ್ರೀಗಳ ನಿಧನದಿಂದ ಮಕ್ಕಳಲ್ಲಿ ಅನಾಥಭಾವ ಮೂಡಿದೆ ಎಂದು ಹೇಳುವುದು ಸರಿಯಲ್ಲ. ಹಿರಿಯ ಶ್ರೀಗಳು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಕಿರಿಯ ಶ್ರೀಗಳು ಎಲ್ಲವನ್ನೂ ನೋಡಿಕೊಂಡು ಹೋಗಿದ್ದಾರೆ. ಹೀಗಾಗಿ, ಮಕ್ಕಳಲ್ಲಿ ಯಾವುದೇ ಅನಾಥ ಭಾವ ಇರೋದಿಲ್ಲ. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಲಿ, ಜ್ಞಾನ ನೀಡಲಿ., ಕೇಶಮುಂಡನದಂಥ ಮೌಢ್ಯಾಚರಣೆಗೆ ಸಿದ್ದಲಿಂಗ ಶ್ರೀಗಳು ಅವಕಾಶ ಕೊಡಬಾರದು. ಮೂಢನಂಬಿಕೆ ನೀಗಿಸಬೇಕಾದ ಮಠಗಳೇ ಮೌಢ್ಯಾಚರಣೆ ಬಿತ್ತಬಾರದು ಎಂದು ಮಾತೆ ಮಹಾದೇವಿ ಕರೆ ಕೊಟ್ಟಿದ್ದಾರೆ.

Comments are closed.