ಕರ್ನಾಟಕ

‘ಆಪರೇಷನ್​ ಕಮಲ; ಹೊಸ ಬಾಂಬ್​ ಸಿಡಿಸಿದ ಖರ್ಗೆ

Pinterest LinkedIn Tumblr


ನವದೆಹಲಿ: ಆಪರೇಷನ್ ಕಮಲದ ವಿಚಾರ ತಣ್ಣಗಾಯಿತು ಎಂದುಕೊಳ್ಳುತ್ತಿರುವಾಗಲೇ ಕಾಂಗ್ರೆಸ್​ ಸಂಸದ ಮಲ್ಲಿಕಾರ್ಜುನ ಖರ್ಗೆ ಹೊಸ ಬಾಂಬ್​ ಸಿಡಿಸಿದ್ದಾರೆ. ಆಪರೇಷನ್​ ಕಮಲ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದಕ್ಕಾಗಿ ಆರ್​ಎಸ್​ಎಸ್​ ಹಾಗೂ ಕೇಂದ್ರದ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಆಪರೇಷನ್​ ಕಮಲ ಮಾಡುವ ಉದ್ದೇಶದಿಂದ ಬಿಜೆಪಿ ರೆಸಾರ್ಟ್​ ರಾಜಕಾರಣ ಆರಂಭಿಸಿತ್ತು. ಇದಕ್ಕಾಗಿ ಬಿಜೆಪಿಯ ಬಹುತೇಕ ಶಾಸಕರು ಗುರುಗ್ರಾಮದ ರೆಸಾರ್ಟ್​ನಲ್ಲಿ ತಂಗಿದ್ದರು. ಇತ್ತ ಕಾಂಗ್ರೆಸ್​ನ ಅತೃಪ್ತ ಶಾಸಕರು ಮುಂಬೈನ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಆದರೆ ಆಪರೇಷನ್​ ಕಮಲ ಯಶಸ್ಸು ಕಂಡಿರಲಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಖರ್ಗೆ, “ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಅವರು ಮಾಡಲಿ. ನಮ್ಮ ಬಣದಿಂದ ಓರ್ವ ಶಾಸಕ ತೆರಳಿದರೆ, ಬಿಜೆಪಿಯಿಂದ 10 ಶಾಸಕರು ಬರುತ್ತಾರೆ” ಎಂದು ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರವನ್ನು ಉರುಳಿಸಲು ಕೇಂದ್ರದ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿರುವ ಅವರು, “ಸರ್ಕಾರ ಬೀಳಿಸಲು ಬಿಜೆಪಿ, ಆರ್​ಎಸ್​ಎಸ್​ ಹಾಗೂ ಕೇಂದ್ರ ಸರ್ಕಾರದ ಕೆಲ ನಾಯಕರು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಆದರೆ ಇದು ಕನಸಾಗಿಯೇ ಉಳಿಯಲಿದೆ” ಎಂದು ಅವರು ಭವಿಷ್ಯನುಡಿದರು.

2008ರಲ್ಲಿ ಬಿಜೆಪಿ ಆಪರೇಷನ್​ ಕಮಲ ಮಾಡಿತ್ತು. ಇದನ್ನು ಉಲ್ಲೇಖಿಸಿ ಮಾತನಾಡಿರುವ ಖರ್ಗೆ, “2008ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಆಪರೇಷನ್​ ಕಮಲ ಮಾಡಿದ್ದರು. ಈಗ ಮತ್ತದೇ ಸಾಹಸಕ್ಕೆ ಅವರು ಮುಂದಾಗಿದ್ದಾರೆ. ಇದಕ್ಕಾಗಿ ಕೆಲವರಿಗೆ ಹಣದ ಆಸೆ, ಇನ್ನೂ ಕೆಲವರಿಗೆ ಅಧಿಕಾರದ ಆಸೆ ತೋರಿಸಲಾಗಿದೆ. ಕೆಲವರಿಗಂತೂ ಬೆದರಿಕೆವೊಡ್ಡಲಾಗುತ್ತಿದೆ” ಎಂಬುದು ಖರ್ಗೆ ಆರೋಪ.

‘ಆಪರೇಷನ್​ ಕಮಲ ಇನ್ನೂ ನಡೆಯುತ್ತಿದೆ. ಬಿಜೆಪಿಯವರು ನಿನ್ನೆ ರಾತ್ರಿ ಕಾಂಗ್ರೆಸ್​​ ಶಾಸಕರಿಗೆ ಕರೆ ಮಾಡಿ, ಗಿಫ್ಟ್​ ಎಲ್ಲಿಗೆ ಕಳಿಸಬೇಕು ಎಂದು ಕೇಳಿದ್ದಾರೆ. ಇವರಿಗೆ ಹಣ ಎಲ್ಲಿಂದ ಬರುತ್ತಿದೆ..? ಆ ಲೆಕ್ಕ ಕೇಳಿದರೆ ನೀವೇ ಆಶ್ಚರ್ಯ ಪಡುತ್ತೀರಾ’ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು.

Comments are closed.