ಕರ್ನಾಟಕ

ಶ್ರೀಗಳಿಗೆ ಭಾರತ ರತ್ನಕ್ಕೆ ಆಗ್ರಹಿಸಿ ರಾಜ್ಯದ 40 ಸಂಸದರು ರಾಜೀನಾಮೆ ನೀಡಲಿ: ಯತ್ನಾಳ್

Pinterest LinkedIn Tumblr


ಬೆಂಗಳೂರು: ಲಕ್ಷಾಂತರ ಮಂದಿ ಅನ್ನ ಮತ್ತು ಅಕ್ಷರ ದಾಸೋಹ ಮಾಡಿದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂಬ ಆಗ್ರಹದ ನಡುವೆಯೂ ಕೇಂದ್ರ ಸರ್ಕಾರ ನೆನ್ನೆ ಪ್ರಕಟಿಸಿದ ಭಾರತ ರತ್ನ ಪಟ್ಟಿಯಲ್ಲಿ ಶ್ರೀಗಳ ಹೆಸರು ಇಲ್ಲದಿರವುದಕ್ಕೆ ರಾಜ್ಯದ ಎಲ್ಲ ಪಕ್ಷಗಳ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರುಪರಿಶೀಲನೆ ನಡೆಸಿ, ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಮೇಲೆ ಒತ್ತಡ ಹೇರಲು ರಾಜ್ಯದ ಎಲ್ಲ 28 ಲೋಕಸಭೆ ಹಾಗೂ 12 ರಾಜ್ಯಸಭೆ ಸಂಸದರು ಪ್ರತಿಭಟನೆಗೆ ಮುಂದಾಗಬೇಕು. ನೆನ್ನೆ ಮೂರು ಜನರಿಗೆ ಭಾರತ ರತ್ನ ಪ್ರಕಟಿಸಲಾಗಿದೆ. ಅದರ ಬಗ್ಗೆ ಅಭ್ಯಂತರವಿಲ್ಲ. ಆದರೆ, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ ಎಂದರು.

ತಾವು ಈ ಹಿಂದೆ ವಿಜಯಪುರ ಲೋಕಸಭೆ ಸದಸ್ಯರಾಗಿದ್ದಾಗ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳಕ್ಕೆ ಅಂದಿನ ಆಂಧ್ರ ಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು ವಿರೋಧ ವ್ಯಕ್ತಪಡಿಸಿದಿದ್ದರು. ಆಗ ತಾವು ವಿಜಯಪುರ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದೆ. ಈಗ ರಾಜ್ಯದ ಸಂಸದರೂ ಇಂಥ ದೃಢ ನಿರ್ಧಾರ ಕೈಗೊಂಡು, ಒತ್ತಡ ಹೇರಲು ಮುಂದಾಗಬೇಕು ಎಂದು ಹೇಳಿದರು.

ರಾಜ್ಯದ ಜನರ ಭಾವನೆ ಮತ್ತು ಸಿಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಯತ್ನಾಳ ಹೇಳಿದರು.

ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಕಿತ್ತಾಟದ ಕುರಿತು ಮಾತನಾಡಿದ ಅವರು, ಇದಕ್ಕೆಲ್ಲ ಬಳ್ಳಾರಿ ಗಣಿ ರಾಜಕೀಯವೇ ಕಾರಣ. ಇಡೀ ಕರ್ನಾಟಕದ ಗಣಿ ರಾಜಕೀಯವೇ ಕಾರಣ. ಈ ಹಿಂದೆ ಸ್ವಲ್ಪ ಹಣ ಖರ್ಚು ಮಾಡಿ ಚುನಾವಣೆ ಎದುರಿಸುತ್ತಿದ್ದೇವು. ಈಗ ಹೆಚ್ಚಿಗೆ ಹಣ ಖರ್ಚು ಮಾಡಬೇಕಿದೆ. ರಾಜ್ಯದಲ್ಲಿ ಇಂದು ರಾಜಕೀಯ ಹಾಳಾಗಲು ಬಳ್ಳಾರಿ ಗಣಿಯೇ ಕಾರಣ. ಅಯೋಗ್ಯರೆಲ್ಲ ಜನಪ್ರತಿನಿಧಿಗಳಾದರೆ ಇನ್ನೇನು ಆಗಲು ಸಾಧ್ಯ ಎಂದು ಯತ್ನಾಳ್ ಪ್ರಶ್ನಿಸಿದರು.

ಇನ್ನು ಹಾಸನದಲ್ಲಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಇಡೀ ರಾಷ್ಟ್ರದಲ್ಲಿಯೇ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮಾದರಿ ವ್ಯಕ್ತಿ. ಜಾತಿ, ಭೇದ ಮಾಡದೆ ಲಕ್ಷಾಂತರ ಮಕ್ಕಳಿಗೆ ಅನ್ನ, ವಿದ್ಯೆ ದಾನ ಮಾಡಿದ‌ ಮಹಾನ್ ಗುರು. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕಿತ್ತು. ಯಾಕೆ ಪ್ರಶಸ್ತಿ ನೀಡಿಲ್ಲ ನನಗೆ ಗೊತ್ತಿಲ್ಲ. ಪ್ರಧಾನಮಂತ್ರಿಗಳು ಪುನರ್ ಪರಿಶೀಲನೆ ಮಾಡಬೇಕು. ಈಗಲೂ ಕಾಲ‌ ಮಿಂಚಿಲ್ಲ ಶಿವಕುಮಾರ ಸ್ವಾಮೀಜಿ‌ ಅವರಿಗೆ ಭಾರತ ರತ್ನ ನೀಡಲಿ. ಈ ವಿಚಾರವಾಗಿ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಇದೇ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್​, ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ಇಟ್ಟಿದ್ವಿ. ಯಾಕೆ ಕೊಟ್ಟಿಲ್ಲ ಅನ್ನೋದು ಗೊತ್ತಿಲ್ಲ. ಕೊಡೋದು-ಬಿಡೋದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಎಷ್ಟು ಬಾರಿ ಮನವಿ ಮಾಡಿರೋದು ಎಂದು ನನಗೆ ಗೊತ್ತಿಲ್ಲ. ಅದು ನನ್ನ ಇಲಾಖೆಗೆ ಬರೋದಿಲ್ಲ, ಡಿಪಿಆರ್​ಗೆ ಬರುತ್ತೆ. ಅವರಿಂದ ಮಾಹಿತಿ ಪಡೆದು ಹೇಳ್ತೇನೆ. ಶ್ರೀಗಳು ಅತ್ಯಂತ ಗೌರವಯುತ ವ್ಯಕ್ತಿತ್ವದವರು. ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳಿದರು.

ಬಾಗಲಕೋಟೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಕೇಂದ್ರ ಸರ್ಕಾರ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ. ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ರಾಜ್ಯ ಸಕಾ೯ರ ಒತ್ತಾಯ ‌ಮಾಡಿತ್ತು. ಈಗಿನ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದ್ದರು. ಬಿಜೆಪಿ ಮುಖಂಡರು ಸೇರಿ ಪಕ್ಷಾತೀತವಾಗಿ ಶ್ರೀಗಳಿಗೆ ಭಾರತ ರತ್ನ ನೀಡಲು ಮನವಿ ಮಾಡಲಾಗಿತ್ತು. ಆದರೆ ಯಾವ ಮಾನದಂಡ ಅನುಸರಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಇನ್ನೂ ಕಾಲ ಮಿಂಚಿಲ್ಲ, ಈಗಲೂ ಶ್ರೀಗಳಿಗೆ ಮರಣೋತ್ತರ ಪ್ರಶಸ್ತಿ ನೀಡಬಹುದು. ನೀಡಲಿ ಅನ್ನೋದೇ ನಮ್ಮದು ಆಶಯ ಎಂದರು.

Comments are closed.