ರಾಷ್ಟ್ರೀಯ

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲಿರುವ ಪ್ರಿಯಾಂಕಾ ಗಾಂಧಿ!

Pinterest LinkedIn Tumblr


ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ (ಉತ್ತರ ಪ್ರದೇಶ ಪೂರ್ವ) ನೇಮಕಗೊಂಡಿರುವ ಗಾಂಧಿ ಕುಡಿ ಪ್ರಿಯಾಂಕಾ ವಾದ್ರಾ ಅವರು ಫೆ.4ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಕುಂಭಮೇಳದಲ್ಲಿ ಅವರು ಪಾಲ್ಗೊಳ್ಳಲಿದ್ದು, ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರಂತೆ.

ಕುಂಭ ಮೇಳದಲ್ಲಿ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​ ಗಾಂಧಿ ಕೂಡ ಪಾಲ್ಗೊಳ್ಳಲಿದ್ದಾರೆ. ಅವರು ಇತ್ತೀಚೆಗೆ ದೇವಾಲಯಕ್ಕೆ ಹೆಚ್ಚೆಚ್ಚು ಭೇಟಿ ನೀಡುತ್ತಿದ್ದಾರೆ. ಈ ಬಗ್ಗೆ ರಾಹುಲ್​ ಟೀಕೆಗೆ ಗುರಿಯಾಗಿದ್ದು, ಮತ ಗಳಿಕೆಗೆ ಈ ತಂತ್ರ ಉಪಯೋಗಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಾರಿ ರಾಹುಲ್​ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮತ್ತೆ ಟೀಕೆಗಳು ವ್ಯಕ್ತವಾಗುವ ಸಾಧ್ಯತೆ ಇದೆ.

ಫೆ.4ರಂದು ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ಪ್ರಿಯಾಂಕಾ ಪುಣ್ಯಸ್ನಾನ ಮಾಡಲಿದ್ದಾರಂತೆ. ನಂತರ ಲಖನೌನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಿದ್ದು, ಇದರಲ್ಲಿ ರಾಹುಲ್​ ಕೂಡ ಪಾಲ್ಗೊಳ್ಳಲಿದ್ದಾರೆ. ಫೆ.4ರಂದು ಇದು ಸಾಧ್ಯವಾಗದ ಪಕ್ಷದಲ್ಲಿ ಫೆ.10ರಂದು ಈ ಕಾರ್ಯಕ್ರಮ ನೆರವೇರಲಿದೆ.

ಇನ್ನು, ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಇಬ್ಬರು ಒಟ್ಟಿಗೇ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಮೊದಲು 2001 ರಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂದಿ ಅವರು ಸಂಗಮದಲ್ಲಿ ಸ್ನಾನ ಮಾಡಿದ್ದರು. ಈಗ ಹಿಂದುಗಳ ಮತ ಗಳಿಕೆ ಮೇಲೆ ಕಾಂಗ್ರೆಸ್​​ ಕಣ್ಣಿಟ್ಟಿದ್ದು, ಇದಕ್ಕಾಗಿ, ಪ್ರಿಯಾಂಕಾ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ತರಪ್ರದೇಶದಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯಲ್ಲಿ ಕಾಂಗ್ರೆಸ್​​ ಪಕ್ಷವನ್ನು ಹೊರಗಿಟ್ಟಿರುವುದರಿಂದ ಒಂಟಿಯಾಗಿ ಸ್ಪರ್ಧೆಗೆ ಇಳಿಯುವ ಪರಿಸ್ಥಿತಿ ಬಂದೊದಗಿದೆ. ಉತ್ತರ ಪ್ರದೇಶದ ಎಲ್ಲಾ 80 ಸ್ಥಾನಗಳಲ್ಲೂ ಸ್ಪರ್ಧಿಸುತ್ತೇನೆಂದಿರುವ ಕೈಪಾಳಯ ಇಲ್ಲಿ ಮಿಷನ್-30 ಗುರಿ ಇಟ್ಟುಕೊಂಡಿದೆ. ಅಂದರೆ ಉತ್ತರ ಪ್ರದೇಶದಲ್ಲಿ 30 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಎಸ್​ಪಿ-ಬಿಎಸ್​ಪಿ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ನಿರ್ಧರಿಸಿದೆ.

Comments are closed.