ಕರ್ನಾಟಕ

ಸರ್ಕಾರಿ ಆಸ್ಪತ್ರೆಯ ಔಷಧಗಳು ಎಷ್ಟು ಸುರಕ್ಷಿತ?

Pinterest LinkedIn Tumblr


ಬೆಂಗಳೂರು: ಯಾವುದೇ ಪದಾರ್ಥವನ್ನು ಬಳಸುವ ಮುನ್ನ ಮೊದಲು ಪರೀಕ್ಷೆ ಮಾಡಿ, ಉಪಯೋಗಿಸಬೇಕು ಎಂಬುದು ಸಾಮಾನ್ಯ ವಾಡಿಕೆ. ಅದರಲ್ಲು ಔಷಧಗಳ ವಿಚಾರದಲ್ಲಿ ಸ್ವಲ್ಪ ಹೆಚ್ಚೇ ಜಾಗರೂಕರಾಗಿ ಅವುಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಆದರೆ, ಸರ್ಕಾರ ವತಿಯಿಂದ ರೋಗಿಗಳಿಗೆ ನೀಡಲಾಗುತ್ತಿರುವ ಔಷಧಗಳನ್ನು ಲ್ಯಾಬ್​ ಟೆಸ್ಟ್​ಗೆ ಕಳುಹಿಸದೆ ಉಪಯೋಗಿಸುತ್ತಿರುವ ತಿಳಿದುಬಂದಿದೆ.

ಹೌದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯು ಪೂರೈಕೆ ಮಾಡುತ್ತದೆ. ಹೀಗೆ ಮಾಡುವ ಶೇ.85ರಿಂದ 90ರಷ್ಟು ಔಷಧಗಳನ್ನು ಲ್ಯಾಬ್ ಟೆಸ್ಟಿಂಗ್ ಕೊಟ್ಟು ಚೆಕ್ ಮಾಡಬೇಕು. ಕಳೆದ 4 ವರ್ಷದಲ್ಲಿ 17,744 ಬ್ಯಾಚ್ ಗಳಲ್ಲಿ ಲಕ್ಷಾಂತರ ಯೂನಿಟ್ ಔಷಧಗಳನ್ನು ಖರೀದಿಸಲಾಗಿದೆ. ಆದರೆ ಇವುಗಳ ಸ್ಯಾಂಪಲ್ ಗಳನ್ನು ಟೆಸ್ಟಿಂಗ್ ಕೊಟ್ಟಿರುವ ಪ್ರಮಾಣ ಮಾತ್ರ ತೀರಾ ಕಡಿಮೆಯಿದೆ.

ರಾಜ್ಯದಲ್ಲಿ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯು ತನ್ನ 26 ಔಷಧ ಉಗ್ರಾಣಗಳಿಂದ 2,700 ಸರ್ಕಾರಿ ಆಸ್ಪತ್ರೆಗಳಿಗೆ ಔಷಧಗಳನ್ನು ಪೂರೈಕೆ ಮಾಡುತ್ತದೆ. ವಾರ್ಷಿಕವಾಗಿ ವಿವಿಧ ಔಷಧ ಕಂಪನಿಗಳು ಸರಿ ಸುಮಾರು 300 ರಿಂದ 400 ರೀತಿಯ ಔಷಧಗಳನ್ನು ಸೊಸೈಟಿಗೆ ಪೂರೈಕೆ ಮಾಡುತ್ತವೆ. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಸೊಸೈಟಿಯು ಕಂಪನಿಗಳಿಂದ ಖರಿದಿಸುವ ಔಷಧಗಳ ಪೈಕಿ ಶೇಕಡ 85 ರಿಂದ 90ರಷ್ಟು ಬ್ಯಾಚ್ ಗಳಲ್ಲಿ ಬರುವ ಔಷಧಗಳ ಸ್ಯಾಂಪಲನ್ನು ನೋಂದಾಯಿತ ಲ್ಯಾಬ್ ನಲ್ಲಿ ಪರೀಕ್ಷೆಗೆ ಕೊಡಬೇಕು. ಟೆಸ್ಟ್​ನಲ್ಲಿ ಔಷಧವು ನಿರ್ದಿಷ್ಟ ಗುಣಮಟ್ಟ ಹೊಂದಿಲ್ಲದಿದ್ದರೆ ಅಂತಹ ಮೆಡಿಸಿನ್​ಗಳನ್ನು ರೋಗಿಗಳಿಗೆ ಕೊಡಲೇಬಾರದು. ಆದರೆ ಕಳೆದ 4 ವರ್ಷದಲ್ಲಿ 17,744 ಬ್ಯಾಚ್ ಗಳಲ್ಲಿ ಔಷಧ ಖರೀದಿಸಿ, ಕೇವಲ 11,976 ಬ್ಯಾಚ್ ಗಳ ಔಷಧಗಳ ಸ್ಯಾಂಪಲ್​ಗಳನಷ್ಟೇ ಪ್ರಯೋಗಾಲಯದ ಪರೀಕ್ಷೆ ನೀಡಲಾಗಿದೆ.

ಲ್ಯಾಬ್​ ಟೆಸ್ಟ್ ವಿವರ

ಇಸವಿ ಔಷಧ ಕಂಪನಿಗಳು ಲ್ಯಾಬ್ ಟೆಸ್ಟ್ ಶೇ. ಗುಣಮಟ್ಟವಲ್ಲದ ಬ್ಯಾಚ್

2015-16 70 ಶೇ.67 44

2016-17 69 ಶೇ.49.71 26

2017-18 82 ಶೇ.70.81 40

2018-19 80 ಶೇ.85 40

2015-16ನೇ ಇಸವಿಯಲ್ಲಿ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್ ಹೌಸಿಂಗ್ ಸೊಸೈಟಿಗೆ 70 ಔಷಧ ಕಂಪನಿಗಳು ಪೂರೈಸಿದ ಔಷಧಗಳ ಪೈಕಿ ಶೇ.67ರಷ್ಟು ಬ್ಯಾಚ್​ಗಳ ಸ್ಯಾಂಪಲ್ ಗಳನ್ನು ಲ್ಯಾಬ್ ಟೆಸ್ಟ್ ಗೆ ನೀಡಲಾಗಿತ್ತು. ಆದರೆ ಅದರಲ್ಲಿ 44 ಬ್ಯಾಚ್ ನಷ್ಟು ಮೆಡಿಸಿನ್ ಗಳನ್ನು ಬಳಸಲು ಯೋಗ್ಯವಲ್ಲ ಎಂದು ವರದಿ ಬಂದಿತ್ತು. ಇನ್ನು 2016-17ರಲ್ಲಿ ಕೆಎಸ್​ಡಿಎಲ್​ಡಬ್ಲ್ಯುಎಸ್​ ಸೊಸೈಟಿಗೆ 69 ಕಂಪನಿಗಳು ಸರಬರಾಜು ಮಾಡಿದ ಮೆಡಿಸಿನ್ ಗಳಲ್ಲಿ ಶೇಕಡ 49.71 ರಷ್ಟು ಮಾತ್ರ ಲ್ಯಾಬ್ ಟೆಸ್ಟ್ ಗೆ ಕೊಡಲಾಗಿತ್ತು. ಅದರಲ್ಲಿ 26 ಬ್ಯಾಚ್ ಔಷಧಗಳು ಬಳಸುವ ಗುಣಮಟ್ಟವಿರಲಿಲ್ಲ. 2017-18ರಲ್ಲಿ 82 ಕಂಪನಿಗಳು ಪೂರೈಸಿದ ಶೇಕಡ 71ರಷ್ಟು ಮೆಡಿಸಿನ್ ಸ್ಯಾಂಪಲ್ ಗಳನ್ನು ಮಾತ್ರ ಟೆಸ್ಟಿಂಗ್ ಕೊಡಲಾಗಿತ್ತು. ಆದ್ರೆ ಅದ್ರಲ್ಲಿ 40 ಬ್ಯಾಚ್ ಗಳ ಔಷಧಗಳು ಬಳಕೆಗೆ ಯೋಗ್ಯವಾಗಿರಲಿಲ್ಲ. ಇನ್ನು 2018-19ರ ಅಂದರೆ ಈ ಡಿಸೆಂಬರ್ ತನಕ 80 ಕಂಪನಿಗಳು ಸರಬರಾಜು ಮಾಡಿದ ಮೆಡಿಸಿನ್ ಪೈಕಿ ಶೇಕಡ 85ರಷ್ಟು ಬ್ಯಾಚ್ ಗಳ ಸ್ಯಾಂಪಲ್ ಗಳನ್ನು ಲ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿದ್ದು, ಆ ಪೈಕಿ 40 ಬ್ಯಾಚ್ ಔಷಧಗಳು ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿದೆ.

ಕೆಎಸ್​ಡಿಎಲ್​ಡಬ್ಲ್ಯುಎಸ್ ಸೊಸೈಟಿಗೆ ಈಚೆಗಷ್ಟೇ ಹೆಚ್ಚುವರಿ ನಿರ್ದೇಶಕರಾಗಿ ಬಂದ ಸಿ. ನಾಗರಾಜ್ ಇದೀಗ, ಈ ಸಂಸ್ಥೆಯಲ್ಲಿ ಸುಧಾರಣಾ ಕ್ರಮ ಕೈಗೊಂಡ ಪರಿಣಾಮ ಶೇಕಡ 85ರಷ್ಟು ಮೆಡಿಸಿನ್​ಗಳನ್ನು ಲ್ಯಾಬ್ ಟೆಸ್ಟ್ ಗೆ ನೀಡಿದ್ದಾರೆ. ಲ್ಯಾಬ್ ಟೆಸ್ಟ್ ನಲ್ಲಿ ಮೆಡಿಸಿನ್ ಬಳಕೆಗೆ ಯೋಗ್ಯವಲ್ಲ ಅಂದರೆ ತಕ್ಷಣವೇ ಆ ಮೆಡಿಸಿನ್ ಬಳಸದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಎಸ್ಎಂಎಸ್ ಮೂಲಕ ಮೆಸೇಜ್ ಹೋಗುತ್ತೆ. ಔಷಧ ಖರೀದಿಸುವ ಟೆಂಡರ್ ನಿಯಮಾವಳಿಯನ್ನು ಸರಳೀಕರಿಸಲಾಗಿದೆ. ಇಂತಹ ಹಲವು ಕ್ರಮಗಳನ್ನು ಈ ಅಧಿಕಾರಿ ಕೈಗೊಂಡಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನ್ನ 10ನೇ ವರದಿಯಲ್ಲೇ, 2009ರಲ್ಲಿ ಔಷಧಗಳ ಟೆಸ್ಟಿಂಗ್ ಮಾಡದೆ ರೋಗಿಗಳಿಗೆ ಔಷಧ ನೀಡಿರುವ ಬಗ್ಗೆ ತೀಕ್ಷ್ಣವಾಗಿ ಆಕ್ಷೇಪ ಎತ್ತಿತ್ತು. 14 ತಿಂಗಳುಗಳ ಕಾಲ ಸೊಸೈಟಿಯು ಔಷಧಗಳ ಗುಣಮಟ್ಟ ದೃಢೀಕರಿಸಿಕೊಳ್ಳದೆ ರೋಗಿಗಳಿಗೆ ಔಷಧ ಪೂರೈಕೆ ಮಾಡಿತ್ತು ಎಂಬುದನ್ನು ಎತ್ತಿ ತೋರಿಸಿತ್ತು. ಆದರೀಗ 2016-17ರಲ್ಲಿ ಅತಿ ಕಡಿಮೆ ಬ್ಯಾಚ್ ಔಷಧಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿ ಮತ್ತೆ ಈ ತಪ್ಪು ಮರುಕಳಿಸಿದೆ. ಜನರಿಗೆ ಔಷಧ ಪೂರೈಸುವ ಈ ಸೊಸೈಟಿಯ ಜಡ್ಡು ಹಿಡಿದ ಆಡಳಿತ ನಿಧಾನವಾಗಿ ಸುಧಾರಿಸುವತ್ತ ಹೆಜ್ಜೆ ಇಡುತ್ತಿರುವುದು ಒಳ್ಳೆಯ ಬೆಳವಣಿಗೆ.

Comments are closed.