ಕರ್ನಾಟಕ

ಶಾಸಕ ಗಣೇಶ್ ಕುರಿತು ಶಾಸಕ ಆನಂದ್ ಸಿಂಗ್‌ ಹೇಳಿದ್ದೇನು ಗೊತ್ತಾ?

Pinterest LinkedIn Tumblr


ಬಳ್ಳಾರಿ: ಬದ್ಧ ವೈರಿಯ ಮೇಲೆ ಹಾಗೆ ಹಲ್ಲೆ ಮಾಡುತ್ತಾರೋ ಇಲ್ಲವೋ? ಗೊತ್ತಿಲ್ಲ. ಆದರೆ ರಾಜಕಾರಣದ ಗುರುವಾಗಿದ್ದ ಶಾಸಕ ಆನಂದ್ ಸಿಂಗ್ ಮೇಲೆ ತನ್ನ ಶಿಷ್ಯನೇ ಆಗಿರುವ ಗಣೇಶ್ ಕುಡಿದು ಕೊಲೆ ಮಾಡುವಷ್ಟರ ಮಟ್ಟಿಗೆ ಹಲ್ಲೆ ಮಾಡುತ್ತಾನೆ ಎಂದರೆ ಯಾರೂ ನಂಬುವಂತಿಲ್ಲ. ಸದ್ಯ ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡು ಆರೋಪಿ ಸ್ಥಾನದಲ್ಲಿರುವ ಗಣೇಶ್ ಮೇಲೆ ಆನಂದ್ ಸಿಂಗ್ ಗೆ ಅದೆಷ್ಟು ಪ್ರೀತಿಯಿತ್ತು ಗೊತ್ತಾ? ಮೊದಲ ಬಾರಿಗೆ ಶಾಸಕರಾದ ಮೇಲೆ ಗಣೇಶನಿಗೆ ಸಾರ್ವಜನಿಕವಾಗಿ ನೀಡಿದ ಸಲಹೆಯೇನು ಗೊತ್ತಾ?

ಬದ್ದ ವೈರಿಗಳಿಗೂ ಮೀರಿಸಿದಂತೆ ದ್ವೇಷ ಕಾರುತ್ತಿರುವ ಈ ಇಬ್ಬರು ಶಾಸಕರು ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದಾರೆ. ಇನ್ನು ಈ ಇಬ್ಬರು ಶಾಸಕರ ನಡುವೆ ಅದೆಷ್ಟು ಪ್ರೀತಿ, ಮಮಕಾರವಿದೆ ಎನ್ನೋದಕ್ಕೆ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಭಾಷಣ ಕೇಳಿದರೆ ಅದರ ಅರಿವಾಗುತ್ತದೆ. ಶಿಷ್ಯನ ಸಮಾನರಾಗಿರುವ ಕಂಪ್ಲಿ ಕ್ಷೇತ್ರದ ಶಾಸಕ ಜೆ ಎನ್ ಗಣೇಶ್ ಮೊದಲ ಬಾರಿಗೆ ಶಾಸಕರಾದ ಮೇಲೆ ಹೊಸಪೇಟೆಯಲ್ಲಿ ಜರುಗಿದ ನೂತನ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗುರು ಆನಂದ್ ಸಿಂಗ್ ಗಣೇಶನಿಗೆ ಬಹಿರಂಗವಾಗಿ ಪ್ರೀತಿಯಿಂದ ಕೆಲ ಕಿವಿಮಾತನ್ನು ತಮ್ಮ ಭಾಷಣದಲ್ಲಿ ಆನಂದ್ ಸಿಂಗ್ ಹೇಳುತ್ತಾರೆ.

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ (5 ಸೆಪ್ಟೆಂಬರ್ 2018ರಂದು ಹೊಸಪೇಟೆಯಲ್ಲಿ) ವೇದಿಕೆಯಲ್ಲಿ ಮಾತನಾಡುತ್ತ ಭಾಷಣ ಮಾಡಿದ ಆನಂದ್ ಸಿಂಗ್, ನಾಯಕ ಸಮುದಾಯದ ಗಣೇಶ್ ಸಮ್ಮುಖದಲ್ಲಿಯೇ ‘ರಾಜಕೀಯವಾಗಿ ನಾನು ಸಾರ್ವಜನಿಕ ಜೀವನದಲ್ಲಿ ಜನಪ್ರತಿನಿಧಿಯಾಗಲು ವಾಲ್ಮೀಕಿ ಸಮುದಾಯ ಪ್ರಮುಖ ಕಾರಣ. ನೀನು ಬಡವನಾಗಿ, ಕಷ್ಟದಲ್ಲಿ ಬೆಳೆದು 2018ರ ಚುನಾವಣೆಯಲ್ಲಿ ಕಂಪ್ಲಿಯಿಂದ ನೀನು ಗೆದ್ದು ಬಂದಿದ್ದಿ ಅಲ್ಲಿನ ಜನರು ನಿನಗೆ ಆಶಿರ್ವಾದ ನೀಡಿದ್ದಾರೆ. ಅವರ ಋಣ ತೀರಿಸಲು ಅವಕಾಶ ಸಿಕ್ಕಿದೆ. ಕಂಪ್ಲಿ ಕ್ಷೇತ್ರ ಅಭಿವೃದ್ಧಿ ಮಾಡುವ ಮೂಲಕ ಋಣ ತೀರುಸುತ್ತಿಯಾ ಎನ್ನುವ ಹಂಡ್ರೆಡ್ ಪರ್ಸೆಂಟ್ ನಂಬಿಕೆಯಿದೆ. ನೀನು ಒಳ್ಳೆಯ ಕೆಲಸಗಾರ, ನೀನು ಛಲಗಾರ. ನನಗೆ ಸಂಪೂರ್ಣ ನಂಬಿಕೆಯಿದೆ. ಹೊಸಪೇಟೆಯಿಂದ ಬಂದು ಕಂಪ್ಲಿ ಕ್ಷೇತ್ರವನ್ನು ಉದ್ಧಾರ ಮಾಡುವ ಮೂಲಕ ನಮ್ಮ ವಿಜಯನಗರ ಕ್ಷೇತ್ರದ ಗೌರವ ತರುವ ಕೆಲಸ ನಿನ್ನ ಮೇಲಿದೆ. ಹೊಸಪೇಟೆ ಹೇಗೆ ಅಭಿವೃದ್ಧಿಯಾಗಿದೆಯೋ ಅದೇ ರೀತಿ ಕಂಪ್ಲಿ ಅಭಿವೃದ್ಧಿ ಮಾಡಬೇಕು. ಆ ರೀತಿ ಕೆಲಸ ಮಾಡುವ ಅವಕಾಶ ನಿನಗಿದೆ ಎಂದು ಪ್ರೀತಿಯಿಂದ ತನ್ನ ಶಿಷ್ಯ ಗಣೇಶನಿಗೆ ಬೆನ್ನುತಟ್ಟಿ ಮಾತನಾಡಿದ್ದರು.

ಇನ್ನು ಅಂದು ಅದೇ ವೇದಿಕೆಯಲ್ಲಿ ಚುನಾವಣಾ ರಾಜಕಾರಣಕ್ಕೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಗುಡ್ ಬೈ ಹೇಳಿ ಕಾರ್ಯಕರ್ತರಿಗೆ ಶಾಕ್ ನೀಡಿದ್ದರು. ನಾನು ಮುಂದೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದರು. ನನಗೆ ಹತ್ತು ಬಾರಿ ಶಾಸಕನಾಗಿ ಆಯ್ಕೆಯಾಗಬೇಕು ಎಂಬ ಆಸೆಯಿದ್ದಿಲ್ಲ. ಮೂರು ಬಾರಿ ಶಾಸಕನಾಗಬೇಕು ಎಂದುಕೊಂಡಿದ್ದೆ. ಅದರಂತೆ ಇದ್ದೇನೆ. ಆದರೆ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಹಾಗಂತ ಕಾರ್ಯಕರ್ತರು ಯಾರು ಗಾಬರಿಯಾಗಬೇಡಿ. ಮುಂದೆಯೂ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ ಇದು ನನ್ನ ಕೊನೆಯ ಶಾಸಕ ಸ್ಥಾನ ಅವಧಿ. ಮುಂದೆ ಬರುವವರಿಗೆ ಅವಕಾಶ ಸಿಗಬೇಕು, ಶಾಸಕರಾಗಿ ಕಾರ್ಯನಿರ್ವಹಿಸಬೇಕು, ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಆಲೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದರು.

ಆಪರೇಷನ್ ಕಮಲ ವಿಷಯದಲ್ಲಿ ಎಲ್ಲವೂ ತಲೆಕೆಳಗಾಗಿ ಕಾಂಗ್ರೆಸ್ ಶಾಸಕರು ನೆರೆದಿದ್ದ ಈಗಲ್ ಟನ್ ರೆಸಾರ್ಟ್ ನಲ್ಲಿ ಆಗಬಾರದ್ದು ಕುಡಿದ ನಶೆಯಲ್ಲಿಯೇ ಆಗಿ ಹೋಗಿದೆ. ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರು, ಶಾಸಕ ಆನಂದ್ ಸಿಂಗ್ ಆರೋಗ್ಯದಲ್ಲಿ ಚೇತರಿಸಿಕೊಳ್ಳಬೇಕಿದೆ. ಕೊಲೆ ಮಾಡುವ ಮಟ್ಟಿಗೆ ಹಲ್ಲೆ ಮಾಡಿದ ಶಿಷ್ಯ ಗಣೇಶ್ ನಾನೇನು ಮಾಡಿಲ್ಲ, ಆದರೂ ಕ್ಷಮೆ ಕೇಳುತ್ತೇನೆ ಎಂದೇಳಿ, ಆನಂತರ ಫೇಸ್ ಬುಕ್ ನಲ್ಲಿ ಆದ ರಾದ್ಧಾಂತಕ್ಕೆ ಆನಂದ್ ಸಿಂಗ್ ಕಾರಣ ಎಂದೇಳಿ, ಕೌಂಟರ್‌ ಕೇಸ್ ದಾಖಲಿಸದೇ ನಾಪತ್ತೆಯಾಗಿದ್ದಾರೆ. ಸದ್ಯ ಆನಂದ್ ಸಿಂಗ್ ಪರಿಸ್ಥಿತಿ ಮಾನಸ ಸರೋವರ ಚಿತ್ರದ ‘ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ’ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.

Comments are closed.