ಕರ್ನಾಟಕ

ಮಂಡ್ಯ ಲೋಕಸಭಾ ಕ್ಷೇತ್ರ: ದೇವೇಗೌಡ, ನಿಖಿಲ್​, ಶಿವರಾಮೇಗೌಡ ಇವರಲ್ಲಿ ಅಭ್ಯರ್ಥಿ ಯಾರು?

Pinterest LinkedIn Tumblr


ಮಂಡ್ಯ ಜಿಲ್ಲೆಯ ರಾಜಕೀಯ ಇಡೀ ದೇಶದ ಗಮನ ಸೆಳೆಯಲು ಹಲವು ಕಾರಣಗಳಿವೆ. ಇಲ್ಲಿನ ಅನೇಕ ರಾಜಕಾರಣಿಗಳು ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಚ್.ಸಿ. ವೀರಣ್ಣಗೌಡ, ಕೆ.ವಿ. ಶಂಕರಗೌಡ, ಎಸ್.ಎಂ. ಕೃಷ್ಣ, ಜಿ. ಮಾದೇಗೌಡ, ಎಸ್.ಡಿ. ಜಯರಾಂ, ಕೆ.ಎನ್. ನಾಗೇಗೌಡ, ಎಂ.ಎಚ್. ಅಂಬರೀಷ್ ಇಂತಹ ಅನೇಕ ರಾಜಕೀಯ ದಿಗ್ಗಜರನ್ನು ನೀಡಿದ ಕ್ಷೇತ್ರ ಇದು.

ಮಂಡ್ಯ ಕ್ಷೇತ್ರದ ಪ್ರತಿ ಚುನಾವಣೆಯಲ್ಲೂ ಸಾಂಪ್ರದಾಯಿಕ ಎದುರಾಳಿಗಳಾಗುತ್ತಿದ್ದ ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ದೋಸ್ತಿಗಳಾಗಿ ಕಣಕ್ಕಿಳಿಯುತ್ತಾರಾ ಅಥವಾ ಎದುರಾಳಿಗಳಾಗಿ ಸ್ವರ್ಧಿಸಲಿದ್ದಾರಾ ಎಂಬುದು ಸದ್ಯದ ಕುತೂಹಲವಾಗಿದೆ. ಇಲ್ಲಿ ಅಷ್ಟೆನೂ ಪ್ರಬಲವಲ್ಲದ ಬಿಜೆಪಿ ಸ್ಪರ್ಧೆ ಕಾಂಗ್ರೆಸ್​, ಜೆಡಿಎಸ್​ ಅಭ್ಯರ್ಥಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮಂಡ್ಯ ಲೋಕಸಭಾ ಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಕೆ.ಆರ್. ಪೇಟೆ, ಶ್ರೀರಂಗಪಟ್ಟಣ, ಮೇಲುಕೋಟೆ ಜೊತೆಗೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ಕೂಡ ಮಂಡ್ಯ ಲೋಕಸಭೆಗೆ ಒಳಪಡುತ್ತವೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸರಿ ಸುಮಾರು ಹದಿನಾರು ಲಕ್ಷ ಮತದಾರರಿದ್ದು, ಶೇ.65 ರಷ್ಟಿರುವ ಒಕ್ಕಲಿಗರು ಪ್ರಬಲರಾಗಿದ್ದಾರೆ. ನಂತರದ ಸ್ಥಾನದಲ್ಲಿ ಅಲ್ಪಸಂಖ್ಯಾತರು ದಲಿತರು, ವೀರಶೈವರು ಹಾಗೂ ಹಿಂದುಳಿದ ವರ್ಗದವರು ಬರುತ್ತಾರೆ.

ಇದುವರೆಗೂ 20 ಚುನಾವಣೆಗಳನ್ನು ನೋಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರುಗಳೇ ಸಂಸದರಾಗಿದ್ದಾರೆ. ಈ ಪೈಕಿ ಪ್ರಮುಖ ನಾಯಕರಾಗಿ ಕಾಣಿಸಿಕೊಳ್ಳುವುದು ಎಸ್​.ಎಂ.ಕೃಷ್ಣ. ರಾಜಕೀಯ ಇತಿಹಾಸದಲ್ಲಿ ನಾನಾ ಬಗೆಯ ಅಧಿಕಾರ ಅನುಭವಿಸಿರುವ ಕೃಷ್ಣ ಅವರು ಮೂರು ಬಾರಿ ಮಂಡ್ಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. 1980ರಲ್ಲಿ ಮೂರನೇ ಬಾರಿಗೆ ಕೃಷ್ಣ ಅವರು ಗೆದ್ದು ಇಂದಿರಾಗಾಂಧಿ ಸಂಪುಟದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದರು. ಆದರೆ ಇಂತಹ ಘಟಾನುಘಟಿ ರಾಜಕಾರಣಿ 1984ರ ಚುನಾವಣೆಯಲ್ಲಿ ಕೆ.ವಿ. ಶಂಕರೇಗೌಡರ ವಿರುದ್ಧ ಹೀನಾಯವಾಗಿ ಸೋತು ಹೋದರು.

1998ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಜೆಡಿಎಸ್​ನಿಂದ ಅಖಾಡಕ್ಕೆ ಇಳಿದ ಅಂಬರೀಷ್​ ಅವರು ಸೋಲಿಲ್ಲದ ಸರದಾರ ಎಂದೇ ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಜಿ. ಮಾದೇಗೌಡ ವಿರುದ್ಧ ಬರೋಬ್ಬರಿ 1,80,523 ಮತಗಳ ದಾಖಲೆ ಅಂತರದಿಂದ ಗೆದ್ದುಬಂದರು. ಬಳಿಕ 1999ರ ಲೋಕಸಭೆ ಚುನಾವಣೆಗೆ ಎಸ್.ಎಂ. ಕೃಷ್ಣ ಸೂಚನೆಯಂತೆ ಕಾಂಗ್ರೆಸ್ ಸೇರುವ ಅಂಬರೀಷ್​, 2ನೇ ಬಾರಿಗೂ ಮಂಡ್ಯದಿಂದ ಗೆದ್ದು ಸಂಸದರಾದರು. 2003ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದ ಗೆದ್ದು ಯುಪಿಎ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿದರು. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ನ ಚಲುವರಾಯಸ್ವಾಮಿ ವಿರುದ್ಧ ಅಂಬರೀಷ್​ ಸೋತು ರಾಜಕೀಯ ವನವಾಸ ಅನುಭವಿಸುವಂತಾಯ್ತು. ಸ್ಯಾಂಡಲ್ ವುಡ್ ಕ್ವೀನ್ ಎಂದೇ ಕರೆಯಲ್ಪಡುತ್ತಿದ್ದ ರಮ್ಯಾ ಸಹ ಅಚಾನಕ್ಕಾಗಿ ರಾಜಕಾರಣಕ್ಕೆ ಎಂಟ್ರಿಯಾಗಿ 2013ರ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಗೆಲುವು ಪಡೆದರು. ಆದರೆ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್​ನ ಸಿ.ಎಸ್​.ಪುಟ್ಟರಾಜು ವಿರುದ್ಧ ರಮ್ಯಾ ಸೋತು ಸುಣ್ಣವಾದರು.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದರಾಗಿದ್ದ ಪುಟ್ಟರಾಜು ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಶಾಸಕರಾಗಿ ಆಯ್ಕೆಯಾದರು. ನಂತರ ಮೈತ್ರಿ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್​ ದೋಸ್ತಿ ಪಕ್ಷದ ಅಭ್ಯರ್ಥಿಯಾಗಿ ಜೆಡಿಎಸ್​ನ ಎಲ್​.ಆರ್​ ಶಿವರಾಮೇಗೌಡ ಭರ್ಜರಿ ಜಯಭೇರಿ ಬಾರಿಸಿ, ಹಾಲಿ ಸಂಸದರಾಗಿದ್ದಾರೆ.

ಕ್ಷೇತ್ರದ ಮತದಾರರ ವಿವರ

ಪುರುಷ: 8,42,017
ಮಹಿಳೆ: 8,39,519
ಇತರೆ: 142
ಸೇವಾ ಮತದಾರರು: 717
ಒಟ್ಟು ಮತಗಳು: 16,81,678

ಜಾತಿವಾರು ಪ್ರಾಬಲ್ಯ:

ಒಕ್ಕಲಿಗರು: ಶೇ. 30
ದಲಿತರು: ಶೇ. 16
ಲಿಂಗಾಯಿತ: ಶೇ. 10
ಕುರುಬರು: ಶೇ. 12
ವಿಶ್ವಕರ್ಮ: ಶೇ.06
ಮುಸ್ಲಿಂ: ಶೇ. 13
ಕ್ರೈಸ್ತರು: ಶೇ. 6
ಇತರೆ: ಶೇ.07

ನಾಲ್ಕು ಉಪಚುನಾವಣೆಗಳು ಸೇರಿ ಮಂಡ್ಯ ಜಿಲ್ಲೆಗೆ ನಡೆದಿರುವ 20 ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್​ಗೆ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್​. ಈವರೆಗೂ ನಡೆದ ಚುನಾವಣೆಗಳಲ್ಲಿ ಈ ಎರಡು ಪಕ್ಷಗಳೇ ಗೆಲುವಿಗಾಗಿ ಪೈಪೋಟಿ ನಡೆಸಿವೆ. ಬಿಜೆಪಿ ಎರಡು ಬಾರಿ‌ ಬಿಟ್ಟರೆ ಮತ್ಯಾವ ಚುನಾವಣೆಯಲ್ಲೂ ಠೇವಣಿ ಸಹ ತೆಗೆದುಕೊಂಡಿಲ್ಲ. 1991ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಲಿಂಗಯ್ಯ ಎಂಬುವರು ಎರಡನೇ ಸ್ಥಾನ ಪಡೆದುಕೊಂಡು ಠೇವಣಿ ಉಳಿಸಿಕೊಂಡಿದ್ದರು. ನಂತರ 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಠೇವಣಿ ಉಳಿಸಿಕೊಂಡಿತ್ತು. ಇನ್ನುಳಿದ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಠೇವಣಿ ಪಡೆದ ಇತಿಹಾಸವೇ ಇಲ್ಲ.

ಪ್ರತಿ ಚುನಾವಣೆಯಲ್ಲೂ ಸಾಂಪ್ರದಾಯಿಕ ಎದುರಾಳಿಗಳಾಗುತ್ತಿದ್ದ ಕಾಂಗ್ರೆಸ್ ಮತ್ತು ಜನತಾದಳ ಪ್ರಸ್ತುತ ದೋಸ್ತಿಗಳಾಗಿವೆ. ಮಂಡ್ಯ ಜೆಡಿಎಸ್​ನ ಭದ್ರಕೋಟೆ ಆದ ಕಾರಣ ಜೆಡಿಎಸ್​ಗೆ ಕಳೆದ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಕಾಂಗ್ರೆಸ್​ ಬಿಟ್ಟುಕೊಟ್ಟಿತ್ತು. ಇದೀಗ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಾಗುತ್ತಿದೆ. ಜೆಡಿಎಸ್ ಪಕ್ಷ ಮತ್ತೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದೆಯಾದರೂ ಕೈ ವರಿಷ್ಠರು ಇನ್ನು ಈ ಬಗ್ಗೆ ನಿರ್ಧಾರ ಸೂಚಿಸಿಲ್ಲ. ಅಲ್ಲದೇ ಜಿಲ್ಲೆಯ ಕೈ ಮುಖಂಡರು ಮತ್ತು ಕಾರ್ಯಕರ್ತರು ಕ್ಷೇತ್ರ ಬಿಟ್ಟುಕೊಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಯಾಗಲು ಪೈಪೋಟಿ:

ಮಂಡ್ಯ ಕ್ಷೇತ್ರದಿಂದ ಜೆಡಿಎಸ್​ನಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಹಾಲಿ‌ ಸಂಸದ ಶಿವರಾಮೇಗೌಡ ನಾನೇ‌ ಮುಂದಿನ ಚುನಾವಣೆಗೂ ಜೆಡಿಎಸ್ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವಂತೆ ಜಿಲ್ಲೆಯ ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ. ನಿಖಿಲ್ ಕೂಡ ಸ್ವರ್ಧೆಗೆ ಉತ್ಸುಕರಾಗಿದ್ದಾರೆನ್ನುವ ಮಟ್ಟಿಗೆ ಜಿಲ್ಲೆಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್​.ಡಿ. ದೇವೇಗೌಡರೇ ಸ್ವರ್ಧೆ ಮಾಡುತ್ತಾರೆ ಅನ್ನೋ ‌ಮಾತುಗಳು ಕೂಡ ಹರಿದಾಡುತ್ತಿವೆ.

ಇನ್ನು ಕಾಂಗ್ರೆಸ್​ನಿಂದ ಅಂಬರೀಷ್ ಪುತ್ರ ಅಭಿಷೇಕ್ ಹೆಸರು ಕೇಳಿ ಬರುತ್ತಿದೆ. ಅಭಿಷೇಕ್ ನಿಲ್ಲದಿದ್ದರೆ ಸುಮಲತಾಗೆ ಟಿಕೆಟ್ ನೀಡುವಂತೆ ಜಿಲ್ಲೆಯ ಕೈ ನಾಯಕರು ಹೈ ಕಮಾಂಡ್​ಮೇಲೆ ಒತ್ತಡ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್​ಗೆ ಕ್ಷೇತ್ರ ಬಿಟ್ಟು ಕೊಡದಂತೆ ಮನವಿ ಮಾಡಿದ್ದು, ಕ್ಷೇತ್ರ ಬಿಟ್ಟು ಕೊಟ್ಟರೆ ಜಿಲ್ಲೆಯಲ್ಲಿ ಕೈ ಅಸ್ತಿತ್ವಕ್ಕೆ ಧಕ್ಕೆ ಎದುರಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿಯವರು ಈ ಬಾರಿ‌ಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಶತಾಯಗತಾಯ ಮಂಡ್ಯ ಕ್ಷೇತ್ರದಲ್ಲಿ ಕಮಲ ಅರಳಿಸಲು‌ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಮತ ಗಳಿಸಿರುವುದು ಆ ಪಕ್ಷದ ಮುಖಂಡರ ಉತ್ಸಾಹವನ್ನು ಇಮ್ಮಡಿ ಮಾಡಿದೆ. ಈ ಬಾರಿ ಸಮರ್ಥ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಕಳೆದ ಬಾರಿ ಉಪ ಚುನಾವಣೆ ಸೋತ ಡಾ. ಸಿದ್ದರಾಮಯ್ಯ, ಆರ್. ಅಶೋಕ್, ಅಶ್ವತ್ಥ್​ ನಾರಾಯಣ್, ಯೋಗೇಶ್ವರ್ ಹೆಸರು ಕೇಳಿ ಬರುತ್ತಿದ್ದು ಅಂತಿಮವಾಗಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಜೆಡಿಎಸ್ -ಕಾಂಗ್ರೆಸ್​ ಮೈತ್ರಿಯಾಗಿ, ಜೆಡಿಎಸ್​ಗೆ ಕಾಂಗ್ರೆಸ್​ ಕ್ಷೇತ್ರ ಬಿಟ್ಟುಕೊಟ್ಟರೆ, ಕೈನ ಅತೃಪ್ತ ಸ್ಥಳೀಯ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದರೂ ಅಚ್ಚರಿಪಡಬೇಕಿಲ್ಲ.

ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್​ ಶಾಸಕರು!

ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಶಾಸಕರೇ ಇದ್ದು, ಇವರಲ್ಲಿ ಮೂರು ಮಂದಿ ಸಚಿವರಿದ್ದಾರೆ. ಅಲ್ಲದೇ ಜಿಲ್ಲೆಯ‌ ಸಂಸದರಾಗಿ ಜೆಡಿಎಸ್ ಪಕ್ಷದವರೇ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ 3 ಜನ ಪರಿಷತ್ ಸದಸ್ಯರು ಕೂಡ ಜೆಡಿಎಸ್ ನವರೇ ಆಗಿದ್ದು, 11 ಸದಸ್ಯರ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿದೆ ಎಂದೇ ಹೇಳಬಹುದು.

ಮೇಲುಕೋಟೆ ಹೊರತುಪಡಿಸಿ ಉಳಿದ ಏಳು ಕಡೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಜೆಡಿಎಸ್ ಗೆ ಎದುರಾಳಿಯಾಗಿ ಸೋಲನ್ನಪ್ಪಿದ್ದಾರೆ. ಈ ಏಳು ಕ್ಷೇತ್ರದಲ್ಲೂ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಹಾವು ಮುಂಗುಸಿ ರೀತಿ ಚುನಾವಣೆ ಎದುರಿಸಿದ್ದಾರೆ. ಆದರೆ ತೋರಿಕೆಗಾಗಿ ಕಳೆದ ಉಪಚುನಾವಣೆಯಲ್ಲಿ ದೋಸ್ತಿ ರೀತಿ ಕೆಲಸ‌ ಮಾಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್ಸಿಗರನ್ನು ಸಂಭಾಳಿಸಿ, ವಿಶ್ವಾಸಕ್ಕೆ ತೆಗೆದುಕೊಂಡು, ಮುಂದಿನ ಚುನಾವಣೆ ಎದುರಿಸುವುದು ಜೆಡಿಎಸ್ ಅಭ್ಯರ್ಥಿಗೆ ಸಾಹಸದ ಕೆಲಸವೇ ಆಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಲೋಕಸಮರದ ಅಖಾಡ ರಂಗೇರಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿಖಿಲ್ ಕುಮಾರಸ್ವಾಮಿ ಮತ್ತು ದೇವೇಗೌಡರು ಸಿದ್ದತೆ ನಡೆಸುತ್ತಿರುವುದಾಗಿ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ಹಾಲಿ ಸಂಸದ ಮುಂದಿನ ಚುನಾವಣೆಗೂ ನಾನೇ ಅಭ್ಯರ್ಥಿ ಅಂತಿದ್ದಾರೆ. ಜೆಡಿಎಸ್ ಕ್ಷೇತ್ರದ ವಿಚಾರದಲ್ಲಿ ಮೈತ್ರಿ ದಾಳ ಬಳಸಿ ಕ್ಷೇತ್ರ ಬಿಟ್ಟುಕೊಡಲು ದಾಳ ಉರುಳಿಸಿದರೆ, ಕಾಂಗ್ರೆಸ್ ಅಂಬಿ ಪುತ್ರ ಅಭಿಷೇಕ್ ಹೆಸರಿನ ಮೂಲಕ ಕೈ ಅಭ್ಯರ್ಥಿ ಸ್ವರ್ಧೆಯ ಸುಳಿವು ಕೊಟ್ಟಿದೆ. ಇದರ ನಡುವೆ ಬಿಜೆಪಿ ಪಕ್ಷವು ಕೂಡ ಲೋಕಸಮರದಲ್ಲಿ ಈ ಬಾರಿ ಪ್ರಬಲ ಅಭ್ಯರ್ಥಿ ಸ್ವರ್ಧೆಯ ಮೂಲಕ ಕಮಲ ಅರಳಿಸುವ ಪ್ರಯತ್ನ ನಡೆಸಿದೆ.

ಸದ್ಯದ ಉಪ ಚುನಾವಣೆಯಲ್ಲಿ ಜಿಲ್ಲೆಯ ಮತದಾರರ ಮನಸ್ಥಿತಿ ನೋಡುವುದಾದರೆ, ಜಿಲ್ಲೆಯ ಮತದಾರರು ಇನ್ನು ಗುಟ್ಟು‌ಬಿಟ್ಟು ಕೊಡುತ್ತಿಲ್ಲ. ಕಳೆದ ಎರಡು‌ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು‌ ಬೆಂಬಲಿಸಿದ್ದರು. ಆದರೆ, ಕೊಟ್ಟ ಭರವಸೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ದ ಅಸಮಧಾನಗೊಂಡಿದ್ದಾರೆ. ಇನ್ನು ಮೈತ್ರಿ ಹೆಸರಲ್ಲಿ‌ ಕಚ್ಚಾಡಿಕೊಂಡ ಜೆಡಿಎಸ್ ಕಾಂಗ್ರೆಸ್ ಪಕ್ಷದ ವಿರುದ್ದ ಸಹಜವಾಗಿಯೇ‌ ಅಸಮಾಧಾನ ಹೊಂದಿದ್ದಾರೆ. ಜಿಲ್ಲೆಯ ಕೈ ಕಾರ್ಯಕರ್ತರಂತು ರಾಷ್ಟ್ರ ಮತ್ತು ರಾಜ್ಯ ನಾಯಕರ ಮೈತ್ರಿ‌ ಒಪ್ಪುವ ಮನಸ್ಥಿತಿಯಲ್ಲಿ ಇಲ್ಲ‌.‌ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೈತ್ರಿ‌ ಮುಂದುವರೆಸಿದರೆ ಬಿಜೆಪಿ ಬೆಂಬಲಿಸುವ ಮಾತನಾಡುತ್ತಿದ್ದಾರೆ.

ಒಟ್ಟಾರೆ ಜಿಲ್ಲೆಯ ಈ ಸಾರ್ವತ್ರಿಕ ಚುನಾವಣೆಯಲ್ಲಿ ಮೇಲ್ಮಟ್ಟದ ಜೆಡಿಎಸ್- ಕಾಂಗ್ರೆಸ್ ದೋಸ್ತಿ ನಿಜಕ್ಕೂ ವರ್ಕೌಟ್ ಆಗುತ್ತಾ. ಮಂಡ್ಯ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್​ ಜೆಡಿಎಸ್​ಗೆ ಬಿಟ್ಟು ಕೊಡುತ್ತಾ, ಇಲ್ಲವಾ ಅನ್ನೋದು ಇನ್ನೂ ಕುತೂಹಲದ ವಿಷಯವಾಗಿದೆ. ಬಿಜೆಪಿ‌ ಕೂಡ ಈ ಬಾರಿ ಸಕ್ಕರೆನಾಡಲ್ಲಿ ಕಮಲ ಅರಳಿಸುವ ಭರವಸೆಯಲ್ಲಿದೆ. ಚುನಾವಣೆ ಘೋಷಣೆಯಾಗಿ ಟಿಕೆಟ್ ಖಾತ್ರಿಯ ನಂತರವಷ್ಟೇ ಮುಂದಿನ‌ ಸ್ವಷ್ಟ ‌ಚಿತ್ರಣ ಹೊರಬರಲಿದೆ.

Comments are closed.