ಕರ್ನಾಟಕ

ಶೋಕಾಚಾರಣೆ ಘೋಷಣೆ ನಡುವೆ ಅದ್ಧೂರಿ ಜನ್ಮದಿನ ಆಚರಿಸಿದ ಬಿಜೆಪಿ ಶಾಸಕ

Pinterest LinkedIn Tumblr


ಬೆಳಗಾವಿ: ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಿಸಿದೆ. ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು 63ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಜನ್ಮದಿನದ ನಿಮಿತ್ತ ಅನೇಕರಿಗೆ ಆಮಂತ್ರಣ ನೀಡಿದ್ದರಿಂದ ಸಾವಿರಾರು ಜನರು ಶಾಸಕರ ಸಾರೋಟ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾಸಕರು ಹಾಗೂ ಧರ್ಮ ಪತ್ನಿ ಅವರನ್ನು ರಾಯಬಾಗ ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಳಿಕ ವೇದಿಕೆಗೆ ಕರೆತರಲಾಯಿತು. ಆದರೆ ಹೆಸರಿಗೆ ಎಂಬಂತೆ ಸಾರೋಟದಲ್ಲಿ ಶಿವಕುಮಾರ ಶ್ರೀಗಳ ಭಾವ ಚಿತ್ರ ಇಟ್ಟು ಪೂಜೆ ಮಾಡಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಜೆಯೂ ಗಾಯನ ಸ್ಪರ್ಧೆ ಹೆಸರಿನಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶೋಕಾಚರಣೆ ಹಾಗೂ ಭೀಕರ ಬರಗಾಲದ ನಡುವೆಯೂ ಶಾಸಕರು ಜನ್ಮದಿನಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಶೋಕಾಚರಣೆ ನಡುವೆಯೂ ಕಾಂಗ್ರೆಸ್ ಸಚಿವ ಪ್ರಿಯಾಂಕಾ ಖರ್ಗೆ ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ವಿರೋಧ ಮಾಡಿದ್ದವು. ಈಗ ಶಾಸಕ ದುರ್ಯೋಧನ ಐಹೊಳೆ ಅವರು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಜೆಪಿಗೆ ಸಾಕಷ್ಟು ಮುಜುಗುರ ತಂದಿದೆ ಎನ್ನಲಾಗುತ್ತದೆ.

Comments are closed.