ಕರ್ನಾಟಕ

ಕಾಂಗ್ರೆಸ್ ಶಾಸಕರ ಹೊಡೆದಾಟಕ್ಕೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ; ಅಪೋಲೋ ಆಸ್ಪತ್ರೆಯಲ್ಲಿ ಶಾಸಕ ಆನಂದ್​ ಸಿಂಗ್​ಗೆ ಚಿಕಿತ್ಸೆ

Pinterest LinkedIn Tumblr


ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕರಾದ ಆನಂದ್​ ಸಿಂಗ್ ಮತ್ತು ಕಂಪ್ಲಿ ಗಣೇಶ್​ ನಡುವೆ ನಡೆದ ಹೊಡೆದಾಟ ಪ್ರಕರಣ ಈಗ ಗಂಭೀರವಾಗುತ್ತಿದೆ. ಘಟನೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ವರ್ತನೆ ಸರ್ಕಾರಕ್ಕೆ ಮುಜುಗರ ಎಂದು ಬೇಸರಿಸಿಕೊಂಡಿದ್ದಾರೆ.

ಶಾಸಕರಾಗಿ ಹೊಡೆದಾಡಿಕೊಳ್ಳೋದು ಅವಮಾನದ ಸಂಗತಿ. ಇದರಿಂದ ಬಿಜೆಪಿಗೆ ನಾವಾಗಿಯೇ ಅಸ್ತ್ರವನ್ನಾಗಿ ಕೊಡುತ್ತಿದ್ದೇವೆ. ಇದಕ್ಕೆ ನಾನು ಹೊರಗಡೆ ಏನೆಂದು ಸಮಜಾಯಿಷಿ ನೀಡಲಿ ಎಂದು ಆಪ್ತರ ಬಳಿ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಜಿ ಪರಮೇಶ್ವರ್, ರೆಸಾರ್ಟ್ ನಲ್ಲಿ ಶಾಸಕರ ನಡುವೆ ನಡೆದ ಗಲಾಟೆಯ ಮಾಹಿತಿ ಇಲ್ಲ. ಆನಂದ್ ಸಿಂಗ್ ಮೇಲೆ ಬಾಟಲ್ ನಿಂದ ಗಣೇಶ್​ ನಡೆಸಿದ ದಾಳಿ ಬಗ್ಗೆ ಮಾಹಿತಿ ಇಲ್ಲ. ಅಂತಹ ಬೆಳವಣಿಗೆ ಆಗಿದ್ರೆ ಮಾಹಿತಿ ಬಂದಿರೋದು. ಹಾಗೇ ಆಗಿರಲಿಕ್ಕಿಲ್ಲ. ನಾನು ರೆಸಾರ್ಟ್ ಗೆ ಹೋಗ್ತಿದ್ದೀನಿ. ಅಲ್ಲಿ ಏನಾಗಿದೆ ಅಂತಾ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ತಲೆಗೆ ಬಾಟಲಿಯಿಂದ ಹಲ್ಲೆ ನಡೆಸಿರುವುದರಿಂದ ಆನಂದ್​ ಸಿಂಗ್​ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಬೆಳಿಗ್ಗೆ 7 ಗಂಟೆಗೆ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಆನಂದ್ ಸಿಂಗ್ ಅವರನ್ನು ದಾಖಲಿಸಲಾಗಿದೆ. ವೈದ್ಯ ಡಾ.ಚಂದ್ರ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಯ ಆರನೇ ಮಹಡಿಯ 6002 ಕೋಣೆಯಲ್ಲಿ ಆನಂದ್​ ಸಿಂಗ್ ಅಡ್ಮಿಟ್​ ಆಗಿದ್ದಾರೆ.

ಆನಂದ್ ಸಿಂಗ್ ದಾಖಲಾತಿಯನ್ನು ಆಸ್ಪತ್ರೆ ಸಿಬ್ಬಂದಿ ಮುಚ್ಚಿಡುತ್ತಿದ್ದು, ಅವರು ಇಲ್ಲಿ ಅಡ್ಮಿಟ್​ ಆಗಿಲ್ಲ ಎಂದು ಹೇಳುತ್ತಿದ್ದಾರೆ. ವಿಷಯ ಹೊರಗೆ ತಿಳಿದರೆ ಪಕ್ಷಕ್ಕೆ ಮುಜುಗರ ಎಂಬುದನ್ನು ಅರಿತಿರುವ ಕಾಂಗ್ರೆಸ್​ ನಾಯಕರು ಈ ವಿಷಯ ಹೊರಗೆ ಬಾರದಂತೆ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ.

Comments are closed.