ಕರ್ನಾಟಕ

ಕಾಂಗ್ರೆಸ್​​ ಶಾಸಕರ ಹೊಡೆದಾಟ ನಿಜ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ರಾಮನಗರದ ಈಗಲ್ಟನ್ ರೆಸಾರ್ಟ್​​ನಲ್ಲಿ ಕಾಂಗ್ರೆಸ್​​ ಶಾಸಕರು ಪರಪಸ್ಪರ ಹೊಡೆದಾಡಿಕೊಂಡ ಪ್ರಕರಣದ ಸುತ್ತ ಭಾರೀ ಚರ್ಚೆಯಾಗುತ್ತಿದೆ. ಮೈತ್ರಿ ಸರ್ಕಾರ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರೇ ಕಾಂಗ್ರೆಸ್​​ ಶಾಸಕರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಈ ಘಟನೆ ರಾಜ್ಯದ 224 ಶಾಸಕರ ತಲೆ ತಗ್ಗಿಸುವಂತೆ ಮಾಡಿದೆ. ಶಾಸಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಇದಕ್ಕೆ ಕಾರಣವಾದ ಮಾಜಿ ಸಿಎಂ ಸಿದ್ದರಾಮಯ್ಯನವರು ಉತ್ತರ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಈ ಬೆನ್ನಲ್ಲೇ ಕೊಪ್ಪಳದ ಗಂಗಾವತಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ರಾತ್ರಿ ಗಲಾಟೆ ನಡೆದಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಹಾಗೆಯೇ ಶಾಸಕರಾದ ಜೆ.ಎನ್. ಗಣೇಶ, ಆನಂದ್ ಸಿಂಗ್ ನಡುವೆ ಗಲಾಟೆ ಆಗಿದೆಯಂತೆ. ನಿನ್ನೆ ರಾತ್ರಿಯೇ ಈ ಮಾಹಿತಿ ಬಂದಿದೆ. ಯಾರದು ತಪ್ಪು ಏನು? ಎಂಬುದು ಅಲ್ಲಿಗೆ ಹೋದ ನಂತರವೇ ಗೊತ್ತಾಗಲಿದೆ. ಯಡಿಯೂರಪ್ಪ ಹೇಗಾದ್ರೂ ಮಾಡಿ, ಸಿಎಂ ಆಗಬೇಕು ಅಂದುಕೊಂಡಿದ್ದಾರೆ. ಪದೇ ಪದೇ ಯಡಿಯೂರಪ್ಪ ಈ ಪ್ರಯತ್ನಕ್ಕೆ ಕೈ ಹಾಕಿ ಭ್ರಮನಿರಸನ ಅನುಭವಿಸ್ತಿದಾರೆ. ಈಶ್ವರಪ್ಪನ ನಾಲಿಗೇಲಿ ಕೆಟ್ಟ ಪದಗಳನ್ನ ಬಿಟ್ರೆ ಬೇರೆ ಏನು‌ ಬರಲಿಕ್ಕೆ ಸಾಧ್ಯ? ನೀವೆ ಹೇಳಿ ಎಂದರು.

ಈ ಮುನ್ನ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರು, ಶಾಸಕರೆನ್ನುವುದು ಲೆಕ್ಕಿಸದೇ ರೆಸಾರ್ಟ್​​ನಲ್ಲಿಯೇ ಬಡಿದಾಡಿಕೊಂಡಿದ್ದಾರೆ. ಈ ಘಟನೆಯಿಂದ ರಾಜ್ಯದ ಶಾಸಕರಿಗೆ ಅವಮಾನವಾಗಿದೆ. ಕೂಡಲೇ ಶಾಸಕನ ಮೇಲೆ ಹಲ್ಲೆ ನಡೆಸಿದ ಆರೋಪಿ ವಿರುದ್ಧ ಪೋಲೀಸರು ಕ್ರಮ ತೆಗೆದುಕೊಳ್ಳಬೇಕು. ಇಡೀ ಪ್ರಕರಣದ ಬಗ್ಗೆ ವರದಿಯನ್ನು ಪಡೆಯಬೇಕು. ಬಳಿಕ ಪೊಲೀಸರಿಂದ ರಾಜ್ಯಪಾಲರು ಕೂಡ ಇದರ ವರದಿ ಪಡೆಯಲಿ. ಆನಂದ್ ಸಿಂಗ್ ಕುಟುಂಬದವರು ಆತಂಕದಲ್ಲಿದ್ದಾರೆ. ಮುಂಬೈನಲ್ಲಿ ಮದುವೆಗೆಂದು ಹೊರಟ ಮನೆಯವರು ಆತಂಕದಿಂದ ವಾಪಸ್ಸಾಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಆರ್​​.ಅಶೋಕ್​​ ಅವರು, ಕಾಂಗ್ರೆಸ್ ಶಾಸಕರ ಗ್ಯಾಂಗ್ ವಾರ್ ನಡೆದಿದೆ. ಎರಡು ಗುಂಪುಗಳಾಗಿ ಆರೇಳು ಶಾಸಕರು ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಶಾಸಕರು ಬಾಟಲಿಗಳಲ್ಲಿ ಮಾರಾಮಾರಿ ನಡೆಸಿದ್ದಾರೆ. ಈ ವೇಳೆ ಒಬ್ಬ ಗನ್ ಮ್ಯಾನ್​​ಗೆ ಕೂಡ ಗಾಯಗಳಾಗಿವೆ. ಅಲ್ಲದೇ ಸಚಿವ ತುಕಾರಾಮ್ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಇದೇ ಕಾಂಗ್ರೆಸ್ಸಿಗರ ಗೂಂಡಾ ಸಂಸ್ಕೃತಿ ಎಂದರು.

ಕಂಪ್ಲಿ ಶಾಸಕ ಗಣೇಶ್ ಗುಂಪು, ಆನಂದ್ ಸಿಂಗ್ ಗುಂಪಿನ ಮೇಲೆ ಹಲ್ಲೆ ನಡೆಸಿದೆ. ಆನಂದ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು, ಪ್ರಾಣಾಪಾಯದಲ್ಲಿದ್ದಾರೆ. ಇದು ಒಂದು ರೀತಿ ಶಾಸಕರ ರಕ್ತರಾತ್ರಿ. ಹೊಸ ರಕ್ತ ಚರಿತೆಯನ್ನ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಆಸ್ಪತ್ರೆಯಲ್ಲಿ ಯಾರು ಮದುವೆ ಮಾಡುವುದಿಲ್ಲ. ಡಿ.ಕೆ. ಶಿವಕುಮಾರ್ ಒಂದು ಹೇಳಿಕೆ, ಡಿಕೆ.ಸುರೇಶ್ ಒಂದು ಹೇಳಿಕೆ ನೀಡುತ್ತಿದ್ಧಾರೆ. ಇವರ ಹೇಳಿಕೆಯಿಂದಲೇ ರೆಸಾರ್ಟ್​​ನಲ್ಲಿ ಏನು ನಡೆದಿದೆ? ಎಂಬುದು ಬಹಿರಂಗವಾಗಲಿದೆ. ನಾನು ಗೃಹಸಚಿವನಾಗಿ ಕೆಲಸ ಮಾಡಿದವನು. ನನಗೆ ಕೂಡ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆ ಮಾಹಿತಿ ಇದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಆರ್​.ಅಶೋಕ್​​ ಗುಟುರಿದ್ದಾರೆ.

ಇನ್ನು ಬಾಟಲಿಯಿಂದ ಹಲ್ಲೆ ನಡೆಸಿರುವುದರಿಂದ ಆನಂದ್​ ಸಿಂಗ್​ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಬೆಳಿಗ್ಗೆಯೇ 7 ಗಂಟೆಗೆ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಆನಂದ್ ಸಿಂಗ್ ಅವರನ್ನು ದಾಖಲಿಸಲಾಗಿದೆ. ವೈದ್ಯ ಡಾ.ಚಂದ್ರ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಯ ಆರನೇ ಮಹಡಿಯ 6002 ಕೋಣೆಯಲ್ಲಿ ಆನಂದ್​ ಸಿಂಗ್ ಅಡ್ಮಿಟ್​ ಆಗಿದ್ದಾರೆ ಎಂದು ತಿಳಿದು ಬಂದಿದೆ.

Comments are closed.