ಕರ್ನಾಟಕ

ಪಕ್ಷದ ಒಳಿತಿಗಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ; ಡಿಕೆಶಿ​​

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ರೆಸಾರ್ಟ್​ ರಾಜಕಾರಣ ಭಾರೀ ಜೋರಾಗಿದೆ. ಒಂದೆಡೆ ಬಿಜೆಪಿ ಕಾಂಗ್ರೆಸ್​​ ಅತೃಪ್ತ ಶಾಸಕರಿಗೆ ಗಾಳ ಹಾಕಲು ಮುಂದಾಗಿದ್ದಾರೆ, ಇನ್ನೊಂದೆಡೆ ಕೈ ಪಾಳೆಯ ರೆಸಾರ್ಟ್​​ ರಾಜಕಾರಣ ಶುರು ಮಾಡಿದ್ದಾರೆ. ಇನ್ನು ಈಗಲ್ಟನ್ ರೆಸಾರ್ಟ್​​ನಲ್ಲಿ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಸಲಾಗಿದೆ. ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ಡಿ.ಕೆ ಶಿವಕುಮಾರ್​​​ ಅವರು, ತಮ್ಮ ಪಕ್ಷಕ್ಕಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ನಾನು ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಹೈಕಮಾಂಡ್​​ ನನಗೇ ಸುಪ್ರೀಂ. ಕಾಂಗ್ರೆಸ್​​ ಒಳಿತಿಗಾಗಿ ಸಚಿವ ಸ್ಥಾನ ಬಿಟ್ಟುಕೊಡಲು ಹೈಕಮಾಂಡ್​​ ಸೂಚಿಸಿದರೇ, ಸಚಿವ ಸ್ಥಾನ ತ್ಯಾಗಕ್ಕೂ ಸಿದ್ದವಾಗಿದ್ದೇನೆ. ಈ ಹಿಂದೆ ಧರಂ ಸಿಂಗ್‌ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿಯೂ ನನಗೆ ಸಚಿವ ಸ್ಥಾನ ನೀಡಿರಲಿಲ್ಲ. ಅಂದು ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ಏನು ಮಾತನಾಡದೇ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ ಎಂದರು.

ಕಾಂಗ್ರೆಸ್​​ನಿಂದಲೇ 7 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈಗಲೂ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ದನಿದ್ದೇನೆ ಎಂದರು. ಹಾಗೆಯೇ ರಾಜ್ಯ ಸರಕಾರದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಲಾಗುತ್ತಿದೆ. ಆದರೆ ಅದ್ಯಾವುದೂ ನಿಜವಲ್ಲ. ಸರಕಾರ ಏನು ಮಾಡಬೇಕೋ ಅದನ್ನು ಮಾಡುತ್ತಿದೆ. ಜನರ ಕೆಲಸವನ್ನು ಸರಕಾರ ಮಾಡುತ್ತಿದೆ. ಯಾವುದೇ ಊಹಾಪೋಹದ ಹೇಳಿಕೆಗೆ ಉತ್ತರ ಕೊಡಲ್ಲ. ನಿಮ್ಮ ಕಲ್ಪನೆಗೆ ನಾನು ಉತ್ತರ ಕೊಡಲ್ಲ, ಇಲ್ಲಿ ಎಲ್ಲವೂ ಸರಿಯಾಗಿದೆ ಎಂದು ಗುಟುರಿದರು.

ಪಕ್ಷಕ್ಕೆ ನಿಷ್ಠೆಯಾಗಿದ್ದೇವೆ. ಹೈಕಮಾಂಡ್ ಸೂಚನೆ ನೀಡಿದರೆ ಈಗಲೇ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ದ. ನನ್ನ ಸಚಿವ ಸ್ಥಾನಕ್ಕಿಂತ ನನಗೆ ಕಾಂಗ್ರೆಸ್ ಪಕ್ಷ ಮುಖ್ಯ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ತ್ಯಾಗ ಮಾಡಲು ಸಿದ್ದ. ನಾಗೇಂದ್ರ ಸೇರಿದಂತೆ ಎಲ್ಲರೂ ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಎಲ್ಲರ ಜೊತೆ ಮಾತನಾಡಿದ್ದೇನೆ. ಸಭೆಯಲ್ಲಿ ಎಲ್ಲರ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.

ನಿನ್ನೆ ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಕಾಂಗ್ರೆಸ್​​ ರೆಸಾರ್ಟ್​​ ರಾಜಕಾರಣ ಶುರುವಾಗಿತ್ತು. ರಾಮನಗರದ ಈಗಲ್ಟನ್‌ ರೆಸಾರ್ಟ್​​ನಲ್ಲಿಯೇ ರಾಜ್ಯ ಕಾಂಗ್ರೆಸ್​​ ಶಾಸಕರು ವಾಸ್ತವ್ಯ ಹೂಡಿದ್ದರು. ಈ ಮಧ್ಯೆ ನಾಲ್ಕು ಅತೃಪ್ತರು ರಾಜೀನಾಮೆ ನೀಡಲು ಮುಂದಾಗಿರುವ ವಿಚಾರ ಕೈ ನಾಯಕರಿಗೆ ತಲೆನೋವು ತಂದಿತ್ತು. ಅವರನ್ನು ಮನವೊಲಿಸಲು ಎಲ್ಲಿಲ್ಲದ ಪ್ರಯತ್ನ ನಡೆಸಲಾಯ್ತು.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರೂ ಹಾಜರಾಗುವಂತೆ ವಿಪ್​ ಹೊರಡಿಸಲಾಗಿತ್ತು. ಈ ನಡುವೆಯೂ ರಮೇಶ್​ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಹಳ್ಳಿ ಹಾಗೂ ಬಿ.ನಾಗೇಂದ್ರ​ ಸಭೆಗೆ ಗೈರಾಗಿದ್ದರು. ಶಾಸಕಾಂಗ ಸಭೆಯಲ್ಲಿ ಜಾರಕಿಹೊಳೆ ಸಂಪರ್ಕದಲ್ಲಿರುವ ಕೆಲ ಶಾಸಕರು ಪಾಲ್ಗೊಂಡಿದ್ದರು ಎನ್ನಲಾಗಿದ್ದು, ಅವರು ಈಗ ಅನಿವಾರ್ಯವಾಗಿ ರೆಸಾರ್ಟ್​ ಸೇರಿದ್ದರು.

ಇನ್ನು ಗುಜರಾತ್​ ವಿಧಾನಸಭಾ ಚುನಾವಣೆಗೂ ಮೊದಲು ಅಲ್ಲಿನ ಕಾಂಗ್ರೆಸ್​ ಶಾಸಕರನ್ನು ಈಗಲ್​ಟನ್​ ರೆಸಾರ್ಟ್​​ಗೆ ಕರೆತರಲಾಗಿತ್ತು. ಈ ವೇಳೆ ಅವರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದು ಕಾಂಗ್ರೆಸ್​ ನಾಯಕ ಡಿ.ಕೆ. ಶಿವಕುಮಾರ್​. ಈ ಬಾರಿಯೂ ರೆಸಾರ್ಟ್​​ ಸೇರಿರುವ ಶಾಸಕರನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು ಎನ್ನುತ್ತಿವೆ ಮೂಲಗಳು.

Comments are closed.