ಕರ್ನಾಟಕ

ತಮ್ಮ ರಾಜಕೀಯ ಪ್ರವೇಶದ ಕಾರಣ ಬಯಲು ಮಾಡಿದ ನಟ ಪ್ರಕಾಶ್​ ರೈ

Pinterest LinkedIn Tumblr

ಬೆಂಗಳೂರು: ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಸಂಪಾದಿಸಿರುವ ನಟ ಪ್ರಕಾಶ್​ ರೈ ಈಗ ರಾಜಕೀಯಕ್ಕೆ ಧುಮುಕಲು ನಿರ್ಧರಿಸಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದ ಪಂಚಭಾಷಾ ನಟ ಈಗ ತಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಾವು ಯಾಕೆ ಈ ರೀತಿ ದಿಢೀರ್​ ನಿರ್ಧಾರ ಕೈಗೊಂಡರು ಎಂಬ ಕುರಿತು ಇದೇ ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಜನರ ಆಶೋತ್ತರಗಳು ಈಡೇರುತ್ತಿಲ್ಲ. ಇದಕ್ಕಾಗಿ ನಾನು ಧ್ವನಿ ಎತ್ತಲು ನಿರ್ಧರಿಸಿದ್ದೇನೆ. ಇದಕ್ಕೆ ಸೂಕ್ತ ಮಾರ್ಗ ಎಂದು ಕಂಡು ಬಂದಿದ್ದು ರಾಜಕೀಯ. ಇದಕ್ಕಾಗಿ ನಾನು ಚುನಾವಣಾ ಕಣಕ್ಕೆ ಇಳಿದಿದ್ದೇನೆ ಎಂದು ಪ್ರಕಾಶ್​ ರೈ ತಮ್ಮ ರಾಜಕೀಯ ಪ್ರವೇಶದ ಕಾರಣ ಬಯಲು ಮಾಡಿದ್ದಾರೆ.

ಇನ್ನು ಕರ್ನಾಟಕದಲ್ಲಿ ಅದರಲ್ಲಿ ಬೆಂಗಳೂರು ಕೇಂದ್ರವನ್ನು ಆಯ್ದುಕೊಳ್ಳಲು ಕಾರಣವಿದೆ. ಈ ಕ್ಷೇತ್ರ ನನ್ನದು. ನಾನು ಹುಟ್ಟಿ ಬೆಳೆದಿದ್ದು , ಓದಿದ್ದು ಎಲ್ಲವೂ ಇದೇ ಕ್ಷೇತ್ರದಲ್ಲಿ. ಸಿನಿಮಾ ಜಗತ್ತು ಗಾಂಧಿನಗರ ಬರುವುದು ಇದೇ ಕ್ಷೇತ್ರದಲ್ಲಿ. ಇಲ್ಲಿ ನನ್ನ ಸಾಕಷ್ಟು ನೆನಪುಗಳಿವೆ. ಅದಕ್ಕಾಗಿ ನಾನು ಬೆಂಗಳೂರು ಸೆಂಟ್ರಲ್​ನಿಂದ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ ಎಂದರು.

ದೇಶಕ್ಕಾಗಿ ಯಾರು ಏನು ಮಾಡುತ್ತಿಲ್ಲ. ಇಲ್ಲಿರುವರಿಗೂ ಜನಸೇವೆ ಮಾಡಬೇಕು ಎಂಬ ಇಚ್ಛೆಯಿಲ್ಲ. ಎಲ್ಲರೂ ಕಳ್ಳರೇ. ಇವರಿಗೆ ನಾಚಿಕೆ ಆಗಬೇಕು. ಎಷ್ಟು ದಿನ ಈ ದೊಂಬರಾಟ ನೋಡುವುದು. ನಾವೇ ಈ ವ್ಯವಸ್ಥೆಯನ್ನು ಬದಲಾಯಿಸಬೇಕು. ಅದಕ್ಕಾಗಿ ನಾನು ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ. ಆರು ತಿಂಗಳು ಸಿನಿಮಾದಿಂದ ಬ್ರೇಕ್​ ತೆಗೆದುಕೊಂಡು ರಾಜಕೀಯದಲ್ಲಿ ನಿರತವಾಗುತ್ತೇನೆ ಎಂದರು.

ಚುನಾವಣೆಗೆ ಇನ್ನು ಮೂರು ತಿಂಗಳು ಸಮಯವಿದ್ದು, ಇದಕ್ಕಾಗಿ ನಾನು ಇನ್ನು ತಯಾರಾಗಬೇಕಿದೆ. ನನ್ನ ಮುಂದಿನ ನಡೆ ಕುರಿತು ಹಲವು ಹಿರಿಯರೊಂದಿಗೆ ಮಾತುಕತೆ ನಡೆಸಲು ಬಾಕಿ ಇದೆ ಎಂದರು.

ಇನ್ನು ಪಕ್ಷೇತರರಾಗಿ ಸ್ಪರ್ಧಿಸುವುದರಿಂದ ಕಾಂಗ್ರೆಸ್ ಮತಗಳು ಕಸಿದು ಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ನಾನು ಏನು ಮಾಡಲು ಸಾಧ್ಯವಿಲ್ಲ. ನನ್ನ ಉದ್ದೇಶ ಯಾವ ಮತಗಳನ್ನು ಕಸಿಯುವುದಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಪ್ರಕಾಶ್​ ರೈ ಘೋಷಿಸಿದ್ಧಾರೆ. ಇನ್ನು ಎಎಪಿ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿಯಾಗಿ ಬೆಂಬಲ ಕೇಳಿದ್ದಾರೆ.

ಸಿನಿಮಾ ನಟರಾಗಿದ್ದ ಪ್ರಕಾಶ್​ ರೈ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್​ ಹತ್ಯೆ ಬಳಿಕ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ದೇಶದ ರಾಜಕೀಯದ ಗಮನಸೆಳೆದರು.

Comments are closed.