ಕರ್ನಾಟಕ

ಶುಭಕಾಲದಲ್ಲಿ ಲಿಂಗೈಕ್ಯರಾಗುವ ಚಿತ್ತದಲ್ಲಿದ್ದಾರಾ ಸಿದ್ದಗಂಗಾ ಶ್ರೀಗಳು?

Pinterest LinkedIn Tumblr


ತುಮಕೂರು: ಸಿದ್ದಗಂಗಾ ಶ್ರೀಗಳು ಮಠಕ್ಕೆ ಹೋಗಲೇ ಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಕರೆತರಲಾಗಿದೆ. ಶ್ರೀಗಳಿಗೆ ಸೋಂಕು ಕಡಿಮೆಯಾಗಿದ್ದು, ಅವರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಾಣುತ್ತಿದೆ. ಸೂಕ್ತ ಚಿಕಿತ್ಸೆ ನೀಡಲಾಗುವುದು. ಕಳೆದ ಒಂದು ತಿಂಗಳಿನಿಂದ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿರಲಿಲ್ಲ. ಆದರೆ ಈಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಕೆಲ ದಿನಗಳ ಬಳಿಕ ಚೇತರಿಕೆ ಕಾಣುವ ವಿಶ್ವಾಸವಿದೆ. ಭಕ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಪರಮೇಶ್​ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ವೈದ್ಯರು ಏನೇ ಹೇಳಿದರೂ ಶ್ರೀಗಳ ಆರೋಗ್ಯದ ಬಗ್ಗೆ ಭಕ್ತವೃಂದದ ಆತಂಕ ಮುಂದುವರಿದೇ ಇದೆ.

ಶ್ರೀಗಳ ಆರೋಗ್ಯದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದಗಂಗಾ ಮಠದ ಕಿರಿಯ ಶ್ರೀಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಶ್ರೀಗಳು ಎಲ್ಲವನ್ನೂ ಜಯಿಸಿಕೊಂಡು ಬಂದಿದ್ದಾರೆ. ಆರೋಗ್ಯ ಸಮಯವಾದ್ರೂ ಅವರು ಗೆಲ್ಲುತ್ತ ಬಂದಿದ್ದಾರೆ. ಉತ್ತರಾಯಣ ಪುಣ್ಯ ಕಾಲ ಆರಂಭವಾಗಿದೆ. ಪುಣ್ಯಕಾಲದಲ್ಲಿ ಭಗವಂತ ಕರೆದಾಗ ತೆರಳುತ್ತಾರೆ ಎಂದು ದೇವೇಗೌಡರು ಅಭಿಪ್ರಾಯಪಟ್ಟರು.

ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಡಾ. ಶಿವಕುಮಾರ ಸ್ವಾಮಿಗಳು ಇನ್ನಷ್ಟು ವರ್ಷ ಬದುಕುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಸಿದ್ಧಗಂಗಾ ಸ್ವಾಮೀಜಿ ಆರೋಗ್ಯ ಹಾಗೇ ಇದೆ. ಸ್ವಾಮೀಜಿಗಳನ್ನು ಮಠಕ್ಕೆ ಕರೆದುಕೊಂಡು ಬಂದಿದ್ದಾರೆ. ಅವರ ಅಭೂತಪೂರ್ವ ಶಕ್ತಿಯು ಅವರನ್ನು 113 ವರ್ಷ ಕಾಪಾಡಿದೆ. ಅವರು ಇನ್ನಷ್ಟು ವರ್ಷ ನಮ್ಮ ನಡುವೆ ಇರಬೇಕು. ಅವರು ಆರೋಗ್ಯವಾಗಿರಲಿ ಎಂದು ಬಯಸ್ತಿದ್ದೇವೆ” ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

ಶುಭ ಕಾಲದಲ್ಲಿ ಶ್ರೀಗಳು ಲಿಂಗೈಕ್ಯರಾಗಲಿ: ಕಾಡುಸಿದ್ದೇಶ್ವರ ಶ್ರೀ
ಸಿದ್ಧಗಂಗಾ ಶ್ರೀಗಳ ಆರೋಗ್ಯ ಚಿಂತಾಜನಕವಾಗಿದೆ. ಅವರು ಭಗವಂತನ ಸೇವೆಯಲ್ಲಿ ಲೀನವಾಗಲಿ ಎಂಬ ಸಂಕಲ್ಪದಲ್ಲಿ ನಾವಿದ್ದೇವೆ. ಸ್ವಾಮೀಜಿಗಳು ಒಳ್ಳೆ ದಿನದಲ್ಲಿ ಒಳ್ಳೆ ಸಮಯದಲ್ಲಿ ಶಿವನ ಪಾದ ಸೇರಬೇಕೆಂಬ ಸಂಕಲ್ಪ ಹೊಂದಿರುವುದನ್ನು ಗಮನಿಸಿದ್ದೇವೆ. ಅವರು ಒಂದು ತಿಂಗಳಿನಿಂದ ಒಂದೇ ಸ್ಥಿತಿಯಲ್ಲಿದ್ದಾರೆ. ಭಗವಂತ ಮತ್ತು ಸಮಾಜದ ಸೇವೆಯಲ್ಲಿ ಇರುವವರು ಒಳ್ಳೆ ರೀತಿಯಲ್ಲಿ ಶಿವನ ಪಾದ ಸೇರಬೇಕೆಂಬುದು ನಮ್ಮ ಸಂಕಲ್ಪವೂ ಹೌದು ಎಂದು ಇಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಭೇಟಿ ಮಾಡಿರುವ ಕಾಡುಸಿದ್ದೇಶ್ವರ ಮಠದ ಶ್ರೀ ಕರಿರುಷಭ ದೇಶಿಕೇಂದ್ರ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

Comments are closed.