ಕರ್ನಾಟಕ

ಪರೀಕ್ಷೆಯಲ್ಲಿ ಕಾಪಿ ಹೊಡೆಯೋದು ಹೇಗೆ? ಕಾರ್ಯಕ್ರಮ ಆಯೋಜಕನಿಗೆ ಕಾದ ಅಚ್ಚರಿ

Pinterest LinkedIn Tumblr


ಬೆಂಗಳೂರು: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕೆ? ಡಿಸ್ಟಿಂಕ್ಷನ್ ಮಾರ್ಕ್ಸ್ ಸ್ಕೋರ್ ಮಾಡಬೇಕೆ? ಎಂಬಿತ್ಯಾದಿ ಆಫರ್​ಗಳನ್ನ ಕೇಳಿರುತ್ತೇವೆ. ಆದರೆ, ಸಿಲಿಕಾನ್ ಸಿಟಿಯ ವಾಟ್ಸಾಪ್ ಗ್ರೂಪ್​ಗಳಲ್ಲಿ “How 2 copy in exams?”(ಪರೀಕ್ಷೆಯಲ್ಲಿ ನಕಲು ಮಾಡುವುದು ಹೇಗೆ?) ಎಂಬ ಸಂದೇಶವೊಂದು ವೈರಲ್ ಆಗಿ ಹಬ್ಬಿತ್ತು. ಈ ಸಂದೇಶದಲ್ಲಿ ನೊಂದಣಿ ಹಾಗೂ ಸ್ಥಳ ಸೇರಿದಂತೆ ಕಾರ್ಯಕ್ರಮದ ವಿವರಗಳಿದ್ದವು. ಕಾರ್ಯಕ್ರಮ ಆಯೋಜಿಸಿದ್ದು ಬಿ. ಪುನೀತ್. ಇವರು ಒಬ್ಬ ಪರ್ಸನಾಲಿಟಿ ಟ್ರೈನರ್. ಇಂಥದ್ದೊಂದು ಕಾರ್ಯಕ್ರಮ ಆಯೋಜಿಸುವಾಗ ಪುನೀತ್ ಅವರ ತಲೆಯಲ್ಲಿದ್ದದ್ದು ಬೇರೆ ಏನೋ, ಅವರಿಗೆ ಆದ ಅನುಭವ ಇನ್ನೇನೋ ಆಗಿತ್ತು. ಕಾರ್ಯಕ್ರಮಕ್ಕೆ ನೂಕುನುಗ್ಗಲು ಆಗಬಹುದೆಂದು ನಿರೀಕ್ಷಿಸಿದ್ದ ಪುನೀತ್ ಅವರ ಕಣ್ಮುಂದೆ ನಿಂತದ್ದು ಕೇವಲ 10 ಜನ ಮಾತ್ರ. ಆ ಹತ್ತೂ ಜನರು ಇದ್ಯಾವುದೋ ಗಿಮಿಕ್ ಇರಬಹುದೆಂಬ ಕುತೂಹಲದಿಂದಲೇ ಬಂದವರಾಗಿದ್ದರು. ಇನ್ನೇನೋ ತಲೆಯಲ್ಲಿಟ್ಟುಕೊಂಡಿದ್ದ ಆಯೋಜಕರಿಗೆ ಒಂದು ಕಡೆ ನಿರಾಸೆಯಾದರೆ, ಮತ್ತೊಂದು ಕಡೆ ತುಸು ಸಮಾಧಾನವೂ ಆಗಿತ್ತು. ಅದರ ಜೊತೆಗೆ, ಪೊಲೀಸರಿಂದ ಬುದ್ಧಿವಾದವೂ ಸಿಕ್ಕಿತು.

ಯಾಕಿಂಥ ಕಾರ್ಯಕ್ರಮ ಆಯೋಜಿಸಿದ್ದು?

ಪುನೀತ್ ಬಿ. ಅವರು ಹೇಳಿಕೇಳಿ ಪರ್ಸನಾಲಿಟಿ ಡೆವಲಪ್ಮೆಂಟ್ ಟ್ರೈನರ್. ಪರೀಕ್ಷೆಯಲ್ಲಿ ಕಾಪಿ ಮಾಡುವುದು ಹೇಗೆಂಬ ಪಾಠ ಅವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ನಿಜ. ಪರೀಕ್ಷೆಯಲ್ಲಿ ಫೇಲ್ ಆಗಿ, ಅಥವಾ ನಿರೀಕ್ಷಿತ ಅಂತ ಬರದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳನ್ನು ನೋಡಿ ಬೇಸತ್ತಿದ್ದ ಪುನೀತ್ ಅವರು ಇಂಥ ನಿರಾಶಾವಾದಿ ವಿದ್ಯಾರ್ಥಿಗಳಿಗೆ ಲೈಫ್ ಎಕ್ಸಾಂ ಬಗ್ಗೆ ಒಂದು ಸೆಷನ್ ತೆಗೆದುಕೊಳ್ಳುವ ಉದ್ದೇಶವಿತ್ತು. ಜೀವನದ ಪಾಠ ಎಂದು ಹೇಳಿದರೆ ತಾನಂದುಕೊಂಡ ವಿದ್ಯಾರ್ಥಿಗಳು ಬರುವುದಿಲ್ಲ ಎಂದುಕೊಂಡು ಪುನೀತ್ ಅವರು “ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು ಹೇಗೆ?” ಎಂಬ ತಲೆಬರಹಕ್ಕೆ ಮೊರೆಹೋದರು. ಈ ಶೀರ್ಷಿಕೆ ನೋಡಿಯಾದರೂ ನಿರಾಶಾವಾದಿ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ರಮ ಬರುತ್ತಾರೆ. ಪರೀಕ್ಷೆಯೇ ಎಲ್ಲವೂ ಅಲ್ಲ, ಜೀವದ ಪರೀಕ್ಷೆ ಮುಂದಿದೆ. ಅದು ಮುಖ್ಯ ಎಂಬ ಪಾಠವನ್ನು ಅವರಿಗೆ ಬೋಧಿಸಲು ಪುನೀತ್ ಮಾನಸಿಕವಾಗಿ ಸಜ್ಜಾಗಿದ್ದರು.

ಆದರೆ, ಆ ಕಾರ್ಯಕ್ರಮಕ್ಕೆ ಬಂದದ್ದು ಕೇವಲ 10 ಮಂದಿ ಮಾತ್ರ. ಅದೂ ಅವರೆಲ್ಲರೂ ಕುತೂಹಲಕ್ಕಾಗಿ ಮಾತ್ರ ಬಂದಿದ್ದರು. ಜೊತೆಗೆ ಪೊಲೀಸರೂ ಬಂದು ಇಂಥ ಹುಚ್ಚು ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟು ಹೋದರು. ತಾನು ಮುಂದೆ ಎಂಥ ಕೆಲಸ ಮಾಡುವುದಿಲ್ಲ ಎಂದು ಪುನೀತ್ ಅವರು ಪೊಲೀಸರಿಗೆ ಲಿಖಿತ ಆಶ್ವಾಸನೆ ಕೊಡಬೇಕಾಯಿತು.

Comments are closed.