ಕರ್ನಾಟಕ

14 ಶಾಸಕರಿಗೆ ಆಪರೇಷನ್ ಕಮಲ: 17 ಶಾಸಕರನ್ನು ಒಟ್ಟು ಮಾಡಿದ ಬಿಜೆಪಿ

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ಸರಕಾರ ಬೀಳಿಸುವ ಮಾತು ಹೇಳುತ್ತಲೇ ಬಂದಿದೆ. ಪ್ರತೀ ಹಬ್ಬ ಬಂದಾಗಲೂ ಸರಕಾರದ ಪತನದ ಸುದ್ದಿಯನ್ನು ನಿರೀಕ್ಷಿಸುವಂತೆ ಬಿಜೆಪಿ ಬಾಂಬ್ ಸಿಡಿಸುತ್ತಲೇ ಇದೆ. ಈಗ ಸಂಕ್ರಾಂತಿ ಹಬ್ಬಕ್ಕೂ ಬಿಜೆಪಿ ಇದೇ ಬಾಂಬ್ ಹಾಕಿದೆ. ಆದರೆ, ಕೇಸರಿ ಪಾಳಯದ ಈ ಬಾಂಬು ಈ ಬಾರಿ ಠುಸ್ ಆಗುತ್ತದೆಂದು ಖಚಿತವಾಗಿ ಹೇಳಲಾಗದಷ್ಟು ಗಂಭೀರವಾಗಿದೆ. ಸಂಪುಟ ವಿಸ್ತರಣೆಯ ನಂತರ ಸರಕಾರದೊಳಗಿನ ಬಂಡಾಯಕ್ಕೆ ಸ್ಪಷ್ಟ ರೂಪ ಸಿಕ್ಕಿರುವುದನ್ನು ಯಾರೂ ತಳ್ಳಿಹಾಕಲಾಗುವುದಿಲ್ಲ.  ಸಿಕ್ಕಿರುವ ಇನ್​​ಸೈಡ್ ಮಾಹಿತಿ ಪ್ರಕಾರ ಒಟ್ಟು 14 ಶಾಸಕರು ಆಪರೇಷನ್ ಕಮಲದ ಸಂಭಾವ್ಯ ಲಿಸ್ಟ್​ನಲ್ಲಿದ್ದಾರೆ. ಇವರ ಪೈಕಿ ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ರಾಜೀನಾಮೆ ಕೊಡಲು ಸಿದ್ಧವಾಗಿದ್ದಾರೆನ್ನಲಾಗಿದೆ. ಜೆಡಿಎಸ್​ನ ಮೂವರು ಸೇರಿದಂತೆ 12 ಶಾಸಕರು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗುಂಪುಗೂಡಿ ಸರಕಾರಕ್ಕೆ ಬೆಂಬಲ ವಾಪಸ್ ತೆಗೆದುಕೊಳ್ಳಲು ಅಣಿಯಾಗಿದ್ದಾರೆ.

ಆದರೆ, ಬಿಜೆಪಿ ಇನ್ನೂ ಕೂಡ ಅಧಿಕೃತವಾಗಿ ಆಟಕ್ಕಿಳಿದಿಲ್ಲ. ಇದಕ್ಕೆ ಕಾರಣವೂ ಇದೆ. ಬಿಜೆಪಿ ಕಡೆಗೆ ಬರಬಯಸುವ ಬಂಡಾಯ ಅಥವಾ ಅತೃಪ್ತ ಶಾಸಕರ ಸಂಖ್ಯೆ 17 ಮುಟ್ಟಿದರೆ ಮಾತ್ರ ಬಿಜೆಪಿ ತನ್ನ ಸಂಕ್ರಾಂತಿ ಆಟ ಆಡುವ ಸಾಧ್ಯತೆ ಇದೆ.

ಅತ್ತ, ಬಿಜೆಪಿ ಮತ್ತು ಅತೃಪ್ತ ಶಾಸಕರ ಆಟಗಳನ್ನು ಗಮನಿಸುತ್ತಲೇ ಬಂದಿರುವ ಸಮ್ಮಿಶ್ರ ಸರಕಾರದ ರೂವಾರಿಗಳು ಬಿಜೆಪಿಗೆ ತಿರುಮಂತ್ರ ಹಾಕುವ ತಂತ್ರಕ್ಕೆ ಮೊರೆಹೋಗಿದ್ದಾರೆ. ಅಂದರೆ, ಬಿಜೆಪಿಯ ಕೆಲ ಶಾಸಕರನ್ನೇ ಕಾಂಗ್ರೆಸ್ ಮತ್ತು ಜೆಡಿಎಸ್​ ಕಡೆಗೆ ಸೆಳೆದು ಸರಕಾರವನ್ನು ಉಳಿಸಿಕೊಳ್ಳುವ ಪ್ಲಾನ್ ಮಾಡಿದೆ. ಮಾಧ್ಯಮಕ್ಕೆ ಸಿಕ್ಕ ಮಾಹಿತಿ ಪ್ರಕಾರ ಬಿಜೆಪಿಯ ಐವರು ಶಾಸಕರು ಕೇಸರೀಗೆ ಕೈಗೊಡಲು ಸಿದ್ಧವಾಗಿದ್ದಾರಂತೆ. ಒಂದು ವೇಳೆ ಸರಕಾರದ ಅತೃಪ್ತ ಶಾಸಕರು ಕೈಕೊಟ್ಟು ಬಿಜೆಪಿಯತ್ತ ವಾಲಿದರೆ ಬಿಜೆಪಿಯಿಂದ ಐವರು ಶಾಸಕರನ್ನು ಸೆಳೆದುಕೊಳ್ಳುವುದು ಸರಕಾರದ ಉಪಾಯವಾಗಿದೆ.

ಇದಕ್ಕೆ ಪ್ರತಿಯಾಗಿ, ಬಿಜೆಪಿಯು ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ 17 ಅತೃಪ್ತ ಶಾಸಕರ ಪಟ್ಟಿ ಸಿದ್ಧವಾಗುವವರೆಗೂ ಬಿಜೆಪಿಯ ಶಾಸಕರನ್ನು ಪಂಜಾಬ್​ನ ಗುರುಗ್ರಾಮದ ರೆಸಾರ್ಟ್​ನಲ್ಲೇ ವಾಸ್ತವ್ಯದಲ್ಲಿಟ್ಟುಕೊಳ್ಳಲು ಪ್ಲಾನ್ ಮಾಡಲಾಗಿದೆ.

ಸ್ಪೀಕರ್ ಬಗ್ಗೆ ಭಯವಿದ್ದರೂ ಸಿದ್ಧವಿದೆ ಬಿಜೆಪಿಯ ಪ್ಲಾನ್ ಬಿ:
ಒಂದು ವೇಳೆ ಬಿಜೆಪಿಗೆ ತನ್ನೆಲ್ಲಾ ಶಾಸಕರನ್ನು ಹಿಡಿದಿಟ್ಟುಕೊಂಡು 17 ಅತೃಪ್ತ ಶಾಸಕರನ್ನೂ ಸೆಳೆಯಲು ಸಾಧ್ಯವಾಯಿತೆಂದರೂ ಅದಕ್ಕೆ ಮೊದಲ ಭಯ ಇರುವುದು ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ. ಒಂದು ವೇಳೆ 17 ಶಾಸಕರು ರಾಜೀನಾಮೆ ಕೊಟ್ಟಾಗ, ಅದನ್ನು ಸ್ಪೀಕರ್ ಸ್ವೀಕರಿಸದೇ ಇರುವ ಸಾಧ್ಯತೆಯೇ ಹೆಚ್ಚು. ಅದಕ್ಕಾಗಿ ಬಿಜೆಪಿ ಪ್ಲಾನ್ ಬಿ ಮಾಡಿಕೊಂಡಿದೆ.

ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸದಿದ್ದರೆ ರಾಜ್ಯಪಾಲರ ಮೊರೆ ಹೋಗುವುದು ಬಿಜೆಪಿಯ ಎರಡನೇ ಪ್ಲಾನ್. ಸರಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು 17 ಶಾಸಕರನ್ನು ಮುಂದಿಟ್ಟುಕೊಂಡು ರಾಜ್ಯಪಾಲರ ಬಳಿ ಹೋಗುವ ಬಿಜೆಪಿಯು ಅವಿಶ್ವಾಸ ನಿರ್ಣಯ ಮಂಡಿಸುವ ಅವಕಾಶ ಕೇಳಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಬಜೆಟ್ ಅಧಿವೇಶನವಿದ್ದು ಸರಕಾರವು ಆಯವ್ಯಯ ಯೋಜನೆಗಳಲ್ಲೇ ಚಿಂತಾಮಗ್ನವಾಗಿರುತ್ತದೆ. ಅದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಬಿಜೆಪಿ ಆಟ ಆಡಲಿದೆ.

ನ್ಯೂಸ್18 ಕನ್ನಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಸಂಕ್ರಾಂತಿ ಹಬ್ಬದ ನಂತರ ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಪಕ್ಷೇತರ ಶಾಸಕರಿಬ್ಬರು ಯಾವಾಗ ಬೇಕಾದರೂ ರಾಜೀನಾಮೆಗೆ ಸಿದ್ಧವಾಗಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ಬಲಾಬಲ ಹೇಗಿದೆ?
ಬಿಜೆಪಿ: 104
ಕಾಂಗ್ರೆಸ್: 80 (ಸ್ಪೀಕರ್ ಸೇರಿ)
ಜೆಡಿಎಸ್: 37
ಬಿಎಸ್​ಪಿ: 1
ಕೆಪಿಜೆಪಿ: 1
ಪಕ್ಷೇತರ: 1
ನಾಮಾಂಕಿತ: 1

ಇದರಲ್ಲಿ ಸಮ್ಮಿಶ್ರ ಸರಕಾರಕ್ಕೆ ಸದ್ಯಕ್ಕೆ ಸ್ಪೀಕರ್ ಸೇರಿ 121 ಸಂಖ್ಯಾ ಬಲವಿದೆ. ಒಂದು ವೇಳೆ ಬಿಜೆಪಿಯು 17 ಶಾಸಕರನ್ನು ಸೆಳೆದರೆ ಕೇಸರೀ ಪಾಳಯಕ್ಕೆ 121 ಸಂಖ್ಯೆಯ ಶಕ್ತಿ ಸಿಗಲಿದೆ. ಬಹುಮತಕ್ಕೆ ಬೇಕಾಗಿರುವುದು 113 ಸಂಖ್ಯೆ. ಒಂದು ವೇಳೆ ಬಿಜೆಪಿಯಿಂದ ನಾಲ್ಕೈದು ಶಾಸಕರು ಹೋದರೂ ಬಿಜೆಪಿಯ ಸರಕಾರ ರಚನೆಗೆ ಯಾವುದೇ ಭಂಗವಾಗುವುದಿಲ್ಲ.

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಈ ಹಗ್ಗ ಜಗ್ಗಾಟದಲ್ಲಿ ಯಾರು ಗೆಲ್ಲುತ್ತಾರೆ ಗೊತ್ತಿಲ್ಲ. ಆದರೆ, ರಾಜ್ಯದ ಜನತೆಯು ಈ ರಾಜಕೀಯ ಪ್ರಹಸನಗಳನ್ನ ಯಾವ ರೀತಿ ಸ್ವೀಕರಿಸುತ್ತಾರೋ ಗೊತ್ತಿಲ್ಲ.

Comments are closed.