ಕರ್ನಾಟಕ

ಸಿದ್ದರಾಮಯ್ಯಗಿದ್ದಷ್ಟು ಬಸವ ತತ್ವಜ್ಞಾನ ಯಡಿಯೂರಪ್ಪಗಿಲ್ಲ: ಶರಣಮೇಳದಲ್ಲಿ ಮಾತೆ ಮಹಾದೇವಿ

Pinterest LinkedIn Tumblr


ಬಾಗಲಕೋಟೆ: ಅನಾರೋಗ್ಯದ ಮಧ್ಯೆಯೂ ಶರಣಮೇಳಕ್ಕೆ ಬಂದ ಮಾತೆ ಮಹಾದೇವಿ… ವೇದಿಕೆಯಲ್ಲಿ ಮಾತು ಮಾತಿಗೂ ಸಿದ್ದರಾಮಯ್ಯನವರನ್ನ ಹಾಡಿ ಹೊಗಳಿದ ಎಂ.ಬಿ.ಪಾಟೀಲ್ ಮತ್ತು ಮಾತೆ ಮಹಾದೇವಿ… ಎಂಬಿ ಪಾಟೀಲ್ ಅವರೇ ಮುಂದಿನ ಸಿಎಂ ಎಂದ ಮಾತೆ ಮಹಾದೇವಿ… ಶಾಮನೂರು ಶಿವಶಂಕರಪ್ಪ ವಿರುದ್ಧ ಗರಂ ಆದ ಎಂ.ಬಿ.ಪಾಟೀಲ್. ಹೌದು… ಇಂತಹ ಕೆಲ ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಇವತ್ತು ನಡೆದ ಶರಣಮೇಳದಲ್ಲಿ. ನಿರಂತರ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಶರಣಮೇಳಕ್ಕೆ ಗೃಹಸಚಿವ ಎಂ.ಬಿ.ಪಾಟೀಲ ಚಾಲನೆ ನೀಡಿದ್ರು. ಈ ಬಾರಿ ಅನಾರೋಗ್ಯದ ಮಧ್ಯೆಯೂ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ವೈದ್ಯರ ಮಾತುಗಳನ್ನ ಧಿಕ್ಕರಿಸಿ ವಿಶೇಷ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನಿಂದ ಕೂಡಲಸಂಗಮಕ್ಕೆ ಆಗಮಿಸಿದ್ರು.

ಸಿದ್ದರಾಮಯ್ಯರನ್ನು ಹೊಗಳಿದ ಮಾತೆ:
ಶರಣಮೇಳದ ವೇದಿಕೆಯಲ್ಲಿ ಮಾತು ಆರಂಭಿಸಿದ ಮಾತೆ ಮಹಾದೇವಿ, ಮಾತು ಮಾತಿಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ರು. ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಿ ದೇಶಕ್ಕೆ ಒಳಿತು ಮಾಡುವಂತಾಗಬೇಕು ಎಂದರು.

ಬಸವಣ್ಣನವರ ಕಾಯಕ, ದಾಸೋಹದ ಬಗ್ಗೆ ಸಿದ್ದರಾಮಯ್ಯನವರು ಅದ್ಭುತವಾಗಿ ಮಾತನಾಡುತ್ತಾರೆ. ಆದ್ರೆ ಯಡಿಯೂರಪ್ಪ ಒಮ್ಮೆಯೂ ಬಸವಣ್ಣನವರ ಬಗ್ಗೆ ಮಾತನಾಡಲಿಲ್ಲವೆಂದರು. ಲಿಂಗಾಯತ ಪ್ರತ್ಯೇಕ ಧರ್ಮ ಮಾಡೋದಕ್ಕೆ ಸಿದ್ದರಾಮಯ್ಯ ಕೊಡುಗೆ ದೊಡ್ಡದಿದೆ ಎಂದು ಸಿದ್ದರಾಮಯ್ಯ ಅವರನ್ನು ಮಾತೆ ಕೊಂಡಾಡಿದರು.

ಕಳೆದ ಚುನಾವಣೆಯಲ್ಲಿ ಅವರಿಗೆ ಮತ ಹಾಕಬೇಕಾಗಿತ್ತು. ಜಾತಿವಾದಿಗಳ ಕುತಂತ್ರದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಅಪಪ್ರಚಾರವಾಯಿತು. ಮುಂದೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನಾಗಮೋಹನ್ ದಾಸ್ ಶಸ್ತ್ರ ಸಿಕ್ಕಿದೆ. ಸುಪ್ರೀಂಕೋರ್ಟ್​ನಲ್ಲಿ ಕಾನೂನಾತ್ಮಕ ಹೋರಾಟ ಮಾಡೋಣ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಕರೆಕೊಟ್ಟರು.

ಪಾಟೀಲರು ಸಿಎಂ ಆಗಲಿ:

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದ ಏಕೈಕ ರಾಜಕೀಯ ಮುಖಂಡ ಎಂ.ಬಿ.ಪಾಟೀಲ್ ಅವರ ವಿರುದ್ಧ ಸಾಕಷ್ಟು ಪಿತೂರಿ ನಡೆದವು. ಆದರೂ ಅವರಿಗೆ ಬಸವಣ್ಣನ ದಯೆಯಿಂದ ಗೃಹಸಚಿವರಾಗುವ ಭಾಗ್ಯ ಸಿಕ್ಕಿತು. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇವೆ ಎಂದು ಮಾತೆ ಮಹಾದೇವಿ ಹೇಳಿದರು.

ಶಾಮನೂರು ವಿರುದ್ಧ ಪಾಟೀಲ್ ಕಿಡಿ:
ಈ ಶರಣಮೇಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತ ವೃಂದವೇ ಹರಿದು ಬಂದಿತ್ತು. ಗೃಹ ಸಚಿವ ಎಂ.ಬಿ.ಪಾಟೀಲ್ ಶರಣಮೇಳಕ್ಕೆ ಆಗಮಿಸುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪ ವಿರುದ್ಧ ಹರಿಹಾಯ್ದರು. ಮಂಗ ಎಂದಿರೋದಕ್ಕೆ ನಾನು ಹುಚ್ಚಮಂಗ, ಗೋರಿಲ್ಲ ಅಂತೆಲ್ಲಾ ಅವರನ್ನ ಕರೆಯಬಹುದು. ಆದರೆ, ಅವರಂತಹ ಕೆಳಮಟ್ಟದ ಸಂಸ್ಕೃತಿ ನನ್ನದಲ್ಲ ಎಂದು ಶಾಮನೂರು ಅವರನ್ನು ನೇರವಾಗಿ ಟೀಕಿಸಿದರು.

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗಲಿ: ಪಾಟೀಲ್
ಬಳಿಕ ಶರಣಮೇಳದಲ್ಲಿ ಬಸವ ಧರ್ಮದ ಪೀಠದ ವತಿಯಿಂದ ಪಾಟೀಲ ಅವರು ಸನ್ಮಾನ ಸ್ವೀಕರಿಸಿದ್ರು. ಇವುಗಳ ಮಧ್ಯೆ ವೇದಿಕೆಯ ಮೇಲೆ ಮಾತು ಆರಂಭಿಸಿದ ಗೃಹ ಸಚಿವರು, ಮಾತಾಜಿ ಹೇಳಿದಂತೆ ಸಿದ್ದರಾಮಯ್ಯನವರು ರಾಷ್ಟರಾಜಕಾರಣಕ್ಕೆ ತೆರಳಿ ಇನ್ನಷ್ಟು ಪ್ರಭಾವ ಗಳಿಸಿದರೆ ಒಳ್ಳೆಯದು ಅನೋ ಇಂಗಿತವನ್ನ ಅವರಿಗೆ ತಿಳಿಸುತ್ತೇನೆ ಮತ್ತು ನಾನು ಈಗ ಗೃಹ ಸಚಿವನಾಗಿರೋದ್ರಿಂದ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡೋದು ಸರಿಯಲ್ಲ. ಮಾತೆ ಮಹಾದೇವಿಯವರು ನಡೆಸುವ ಕಾನೂನು ಹೋರಾಟಕ್ಕೆ ನಿಮ್ಮೆಲ್ಲರ ಬಲ ಇರಲಿ ಎಂದರು.

ಸಿದ್ದರಾಮಯ್ಯಗಿರುವಷ್ಟು ಬಸವಜ್ಞಾನ ಬಿಎಸ್​ವೈಗಿಲ್ಲವೆಂದ ಎಂ.ಬಿ.ಪಿ.:
ಬಸವಣ್ಣ ಹಾಗೂ ಬಸವ ವಚನಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಪಾಂಡಿತ್ಯವಿದೆ. ಆದ್ರೆ ಯಡಿಯೂರಪ್ಪ ಅವರಿಗೆ ಇದು ಇಲ್ಲ. ವಿಜಯಪುರದಲ್ಲಿ ಈ ಹಿಂದೆ ನಡೆದ ಶರಣ ಸಾಹಿತ್ಯ ಮೇಳದಲ್ಲಿ ಸಿದ್ದರಾಮಯ್ಯನವರು ಬಸವಣ್ಣವರ ವಚನವನ್ನು ಅದ್ಭುತವಾಗಿ ಹೇಳಿದ್ದರು. ಆದ್ರೆ ಯಡಿಯೂರಪ್ಪ ಅವರಿಗೆ ಹೇಳಲಿಕ್ಕೆ ಆಗಲಿಲ್ಲವೆಂದ್ರು.

ಒಟ್ಟಿನಲ್ಲಿ ಧಾರ್ಮಿಕ ಮೇಳವಾಗಿ ಬಸವ ತತ್ವಗಳ ಬೋಧನಾ ಕೇಂದ್ರವಾಗಿರುತ್ತಿದ್ದ ಕೂಡಲಸಂಗಮದ ಶರಣಮೇಳ ಮಾತ್ರ ಈ ಬಾರಿ ಪ್ರತ್ಯೇಕ ಲಿಂಗಾಯತ ಧರ್ಮವೇ ಪ್ರಧಾನ ವಿಷಯವಾಗಿ ಚರ್ಚೆಗೊಂಡು ಕೊನೆಗೆ ರಾಜಕೀಯ ನಾಯಕರನ್ನೇ ಹೊಗಳುವ ಮೂಲಕ ಮತ್ತೊಂದು ರಾಜಕೀಯ ಮೇಳದಂತೆ ಕಂಡು ಬಂದಿದ್ದಂತು ಸುಳ್ಳಲ್ಲ.

Comments are closed.