ಕರ್ನಾಟಕ

ಡಿಕೆಶಿ​ ಮುಂಬೈ ಭೇಟಿಯ ಹಿಂದೆಯೂ ಆಪರೇಷನ್​ ಕಮಲದ ವಾಸನೆ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್​ನ ಮೂವರು ಶಾಸಕರು ಮುಂಬೈನಲ್ಲಿದ್ದಾರೆ ಎಂಬ ವಿಚಾರವನ್ನು ನಿನ್ನೆ ಸಚಿವ ಡಿ.ಕೆ. ಶಿವಕುಮಾರ್​ ಒಪ್ಪಿಕೊಂಡಿದ್ದರು. ಅತ್ತ ಕುಮಾರಸ್ವಾಮಿ ಕೂಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಇಂದು ಆ ವದಂತಿಯನ್ನು ತಳ್ಳಿ ಹಾಕಿದ್ದ ಸಿದ್ದರಾಮಯ್ಯ ಅವರೆಲ್ಲರೂ ಇಲ್ಲೇ ಇದ್ದಾರೆ ಎಂದು ಹೇಳಿದ್ದರು. ಇದರಿಂದಾಗಿ ಕಾಂಗ್ರೆಸ್​ನ ಶಾಸಕರಿಗೆ ಬಿಜೆಪಿ ಆಪರೇಷನ್​ ನಡೆಸಲು ಗಾಳ ಹಾಕಿದೆಯಾ? ಎಂಬ ಅನುಮಾನಗಳು ಬಲವಾಗುತ್ತಿವೆ.

ಅದಕ್ಕೆ ಪೂರಕವೆಂಬಂತೆ ನಾಳೆ ಸಚಿವ ಡಿ.ಕೆ. ಶಿವಕುಮಾರ್ ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಕಾಂಗ್ರೆಸ್​ನ ಮೂವರು ಶಾಸಕರಾದ ಗೋಕಾಕ್​ನ ರಮೇಶ್​​ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಮುಂಬೈನಲ್ಲಿದ್ದಾರೆ ಎಂಬ ಬಗ್ಗೆ ಖುದ್ದು ಕಾಂಗ್ರೆಸ್​ ನಾಯಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಅವರು ಬಿಜೆಪಿಯತ್ತ ವಾಲುವ ಮುನ್ನ ಮನವೊಲಿಸಿ ಕರೆದುಕೊಂಡು ಬರಲು ಡಿಕೆಶಿ ಹೋಗುತ್ತಿದ್ದಾರೆ ಎಂಬ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಸದ್ಯಕ್ಕೆ ಡಿ.ಕೆ. ಶಿವಕುಮಾರ್​ ನಡೆ ಭಾರೀ ಕುತೂಹಲ ಮೂಡಿಸಿದೆ.

ಮುಂಬೈನಲ್ಲಿರುವ ಮೂವರು ಶಾಸಕರು ಎಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿಯೂ ನನಗಿದೆ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್​ ಆ ಮೂವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಾಗಿ, ನಾಳೆ ಮುಂಬೈಗೆ ತೆರಳಿ ಅತೃಪ್ತರನ್ನು ಭೇಟಿ ಮಾಡಿ ಕಾಂಗ್ರೆಸ್​ ಪಕ್ಷದಲ್ಲಿಯೇ ಮುಂದುವರಿಯುವಂತೆ ಮನವೊಲಿಸುವ ಸಾಧ್ಯತೆ ಇದೆ. ಈ ಹಿಂದೆ ಮೈತ್ರಿ ಸರ್ಕಾರ ರಚನೆಯ ಸಂದರ್ಭದಲ್ಲಿ ಕೂಡ ಕಾಂಗ್ರೆಸ್​ ಶಾಸಕರನ್ನು ಆಪರೇಷನ್​ ಕಮಲದಿಂದ ಕಾಪಾಡಿಕೊಳ್ಳಲು ಡಿ.ಕೆ. ಶಿವಕುಮಾರ್ ಈಗಲ್ಟನ್​ ರೆಸಾರ್ಟ್​ ಮತ್ತು ತೆಲಂಗಾಣಕ್ಕೆ ಕರೆದುಕೊಂಡು ಹೋಗಿ ಪೂರ್ಣ ಭದ್ರತೆಯನ್ನು ಒದಗಿಸಿದ್ದರು. ಬಳಿಕ, ರೆಸಾರ್ಟ್​ನಿಂದಲೇ ವಿಧಾನಸೌಧಕ್ಕೆ ಕರೆದುಕೊಂಡುಬಂದಿದ್ದರು.

ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ. ಶಿವಕುಮಾರ್ ಅವರ ಹೆಗಲಿಗೆ ಮತ್ತೊಮ್ಮೆ ಅತೃಪ್ತರ ಮನವೊಲಿಕೆ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್​ ಹೈಕಮಾಂಡ್​ ನೀಡಿದೆ ಎನ್ನಲಾಗಿದೆ. ಜಲಸಂಪನ್ಮೂಲ ಇಲಾಖೆಯ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡಿಕೆಶಿ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತ ಕಾರ್ಯಕ್ರಮದ ಜೊತೆಗೆ ಆಪರೇಷನ್​ ಕಮಲವನ್ನು ವಿಫಲಗೊಳಿಸಲು ಹೈಕಮಾಂಡ್​ ಡಿ.ಕೆ. ಶಿವಕುಮಾರ್​ ಅವರಿಗೆ ಜವಾಬ್ದಾರಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

Comments are closed.