ಕರ್ನಾಟಕ

ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವು ಸಮುದ್ರಕ್ಕೆ ಹಾರಬೇಕೇ?: ಸಚಿವ ನಾಡಗೌಡ

Pinterest LinkedIn Tumblr


ರಾಯಚೂರು: ಉಡುಪಿಯ ಮಲ್ಪೆಯಿಂದ ಹೊರಟಿರುವ ಮೀನುಗಾರರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಅಗತ್ಯ ಕ್ರಮಗಳನ್ನೆಲ್ಲ ತೆಗೆದುಕೊಂಡಿದ್ದೇವೆ. ಆದರೂ ಹೋರಾಟ ಮಾಡುತ್ತಿದ್ದಾರೆ ಮೀನುಗಾರರನ್ನ ಹುಡುಕಲು ನಾವೇನು ಸಮುದ್ರಕ್ಕೆ ಹಾರಬೇಕೇ ಎಂದು ಪಶುಸಂಗೋಪನಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ವೆಂಕಟರಾವ್, ನಮ್ಮಲ್ಲಿ ಯಾವ ಫೋರ್ಸ್ ಗಳಿವೆ. ನಮ್ಮಲ್ಲಿರುವ ಜ್ಞಾನದಿಂದ ಅವರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಅವರು ನಾಪತ್ತೆಯಾದ ಮೊದಲ ದಿನದಿಂದಲೇ ಮಾಡಿದ್ದೇವೆ ಅಂದ್ರು.

ಮೀನುಗಗಾರರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವುದು ಬಿಟ್ಟರೆ ನಮ್ಮಲ್ಲಿ ಬೇರೆ ದಾರಿಗಳಿಲ್ಲ. ಪ್ರತಿಭಟನೆ ಮಾಡಲಿ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ. ನಾವು ತೆರೆದ ಮನಸ್ಸಿನಿಂದ ಎಲ್ಲದಕ್ಕೂ ತಯಾರಿದ್ದೇವೆ. ಹೀಗಾಗಿ ಅಲ್ಲಿಯ ಮುಖಂಡರಾದ್ರು ನೀವು ಈ ರೀತಿ ಮಾಡಿದ್ರೆ ಹುಡುಕಬಹುದು, ಪತ್ತೆ ಮಾಡಬಹುದೆಂದು ಹೇಳಬೇಕು ಅಲ್ವಾ ಎಂದು ಅವರು ಪ್ರಶ್ನಿಸಿದ್ರು.

ಬರೀ ಪ್ರತಿಭಟನೆ ಮಾಡುತ್ತೇವೆ ಅಂದ್ರೆ ನಾವೇನು ಮಾಡಬೇಕು. ಸಮುದ್ರದಕ್ಕೆ ಎಗರಬೇಕಾ ಎಂದು ಪ್ರಶ್ನಿಸಿದ ಸಚಿವರು, ಅವರು ಸಲಹೆಗಳನ್ನು ನೀಡಲಿ. ಈ ಬಗ್ಗೆ ನಾವು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೇವೆ. ಅವರು ಏನು ಮಾಡಬೇಕು? ನಮ್ಮಿಂದ ಏನ್ ನಿರೀಕ್ಷೆ ಮಾಡ್ತಾರೆ? ಎನ್ನುವುದನ್ನು ಹೇಳಿದ್ರೆ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ರು.

ಹೋರಾಟ ಮಾಡೋದಾದ್ರೆ ಅದಕ್ಕೊಂದು ಅರ್ಥ ಹಾಗೂ ಪರಿಹಾರ ಇರಲೇಬೇಕಲ್ವ. ನಮಗೂ ಅವರ ಬಗ್ಗೆ ಆತಂಕ ಇದೆ. ಹೀಗಾಗಿ ನಾವು ಎಲ್ಲಾ ವಿಧಗಳಿಂದ ಪ್ರಯತ್ನ ಮಾಡಿದ್ದೇವೆ. ಯಾವುದೇ ಕುರುಹುಗಳು ಈವರೆಗೆ ಸಿಕ್ಕಿಲ್ಲ. ಬೋಟ್ ಮುಳುಗಿದ್ರೆ ಡಿಸೇಲ್ ಆದ್ರೂ ಸಮುದ್ರದಲ್ಲಿ ತೇಲಬೇಕಿತ್ತು. ಒಟ್ಟಿನಲ್ಲಿ ನಮಗೆ ಮಾಹಿತಿ ಬಂದ 1 ಗಂಟೆಯಲ್ಲಿ ನಾವು ಅಲರ್ಟ್ ಆಗಿದ್ದೇವೆ. ಹೆಲಿಕಾಪ್ಟರ್ ಗಳನ್ನು ಕಳುಹಿಸಿದ್ದೇವೆ ಎಂದು ಅವರು ಹೇಳಿದ್ರು.

ಇದೇ ವೇಳೆ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಹಣ ಪತ್ತೆ ಪ್ರಕರಣ ತನಿಖೆಯಿಂದ ಬಯಲಾಗಿದೆ. ಈ ಹಿಂದೆ ಯಡಿಯೂರಪ್ಪ ಹಿಂಬಾಲಕರ ಬಳಿ ಹಣ ಸಿಕ್ಕಿದೆ ಆಗ ರಾಜೀನಾಮೆಯನ್ನು ಬಿಜೆಪಿ ಕೇಳಬೇಕಿತ್ತು. ವಿಧಾನಸೌಧಕ್ಕೆ ಯಾರು ಯಾರೋ ಬರುತ್ತಾರೆ. ಅಲ್ಲಿ ನಡೆದ ಹಣಕಾಸಿನ ವ್ಯವಹಾರ ತನಿಖೆಯಿಂದ ಗೊತ್ತಾಗಲಿದೆ ಎಂದು ಅವರು ಹೇಳಿದ್ರು.

Comments are closed.