ರಾಷ್ಟ್ರೀಯ

ಮುಸ್ಲಿಮೇತರ ವಲಸೆಗಾರರಿಗೆ ಭಾರತೀಯ ಪೌರತ್ವ; ಕೇಂದ್ರದಿಂದ ತಿದ್ದುಪಡಿ ಮಸೂದೆ

Pinterest LinkedIn Tumblr


ನವದೆಹಲಿ: ದೇಶದ ಆಶ್ರಯ ಕೋರಿ ನೆರೆ ರಾಷ್ಟ್ರಗಳಿಂದ ಬರುವ ಸಂತ್ತಸ್ತರಿಗೆ ಅಧಿಕೃತ ಆಶ್ರಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದೆ. ನೆರೆಯ ರಾಷ್ಟ್ರಗಳಾದ ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಭಾರತಕ್ಕೆ ವಲಸೆ ಬರುವ ಜನರಿಗೆ ಭಾರತೀಯ ಪೌರತ್ವ ನೀಡುವ ಕ್ರಮದಲ್ಲಿ ಒಂದಷ್ಟು ಬದಲಾವಣೆ ಮಾಡಿ ಈ ಮಸೂದೆ ತರಲಾಗಿದೆ. ಅದರಂತೆ, ಮುಸ್ಲಿಮೇತರ ಧರ್ಮೀಯರು, ಅಂದರೆ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ವಲಸೆಗಾರರಿಗೆ ಭಾರತೀಯ ಪೌರತ್ವ ನೀಡಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಹೊಸ ಕಾಯ್ದೆ ಪ್ರಕಾರ, ಈ ಮುಸ್ಲಿಮೇತರ ವಲಸೆಗಾರರು ಭಾರತೀಯ ಪೌರತ್ವ ಪಡೆಯಲು ಇಲ್ಲಿ 12 ವರ್ಷದ ಬದಲು 6 ವರ್ಷ ವಾಸವಿದ್ದರೆ ಸಾಕಾಗುತ್ತದೆ.

ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮಂಡಿಸಿದ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಇದು ಕೇವಲ ಅಸ್ಸಾಮ್ ರಾಜ್ಯಕ್ಕಷ್ಟೇ ಅಲ್ಲ, ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂರು ನೆರೆ ರಾಷ್ಟ್ರಗಳಿಂದ ವಲಸೆ ಬರುವ ಮುಸ್ಲಿಮೇತರರು ಭಾರತದ ಯಾವುದೇ ರಾಜ್ಯದಲ್ಲಿ ಬೇಕಾದರೂ 6 ವರ್ಷ ನೆಲೆಸಿ ಭಾರತೀಯ ಪೌರತ್ವ ಪಡೆಯಲು ಸಾಧ್ಯವಾಗುತ್ತದೆ.

“ಕೆಲ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರಿಗೆ ಭಾರತವೇ ಸೂಕ್ತ ಆಶ್ರಯ ತಾಣವಾಗಿದೆ. ನಾವು ಅವರಿ ಪ್ರವೇಶ ಕಲ್ಪಿಸಿದ್ದೆವಾದರೂ ಅವರಿಗೆ ಪೌರತ್ವದ ಅವಕಾಶವಿರಲಿಲ್ಲ. ನಾವು ಅವರಿಗೆ ಪೌರತ್ವ ಕಲ್ಪಿಸುತ್ತಿದ್ದೇವೆ,” ಎಂದು ರಾಜನಾಥ್ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

ಆದರೆ, ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ವಲಸೆಗಾರರ ಪಟ್ಟಿಯಲ್ಲಿ ಮುಸ್ಲಿಮ್ ಧರ್ಮೀಯರನ್ನು ಕೈಬಿಟ್ಟಿರುವುದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಯ ಅವಗಾಹನೆಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಬಳಿಕ ಕಾಂಗ್ರೆಸ್ ಪಕ್ಷದ ಸದಸ್ಯರು ಲೋಕಸಭೆ ಸದನದಿಂದ ಹೊರಹೋದರು.

ಇನ್ನು, ತೃಣಮೂಲ ಕಾಂಗ್ರೆಸ್ ಪಕ್ಷವಂತೂ ಕೇಂದ್ರದ ಈ ಹೊಸ ಮಸೂದೆ ವಿರುದ್ಧ ತೀಕ್ಷ್ಣ ದಾಳಿ ನಡೆಸಿದೆ. ಮುಸ್ಲಿಮರನ್ನು ಕಾಯ್ದೆಯಲ್ಲಿ ಒಳಗೊಳ್ಳದಿದ್ದರೆ ಇಡೀ ಈಶಾನ್ಯ ಪ್ರದೇಶವೇ ಹೊತ್ತಿ ಉರಿಯುತ್ತದೆ ಎಂದು ಟಿಎಂಸಿ ಮುಖಂಡ ಸೌಗತ ರಾಯ್ ಎಚ್ಚರಿಕೆ ನೀಡಿದ್ಧಾರೆ.

Comments are closed.