ಕರ್ನಾಟಕ

ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಐವರು ಬಲಿ

Pinterest LinkedIn Tumblr


ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಈಗಾಗಲೇ 5 ಮಂದಿ ಮೃತಪಟ್ಟಿದ್ದಾರೆ. ಕ್ಯಾಸನೂರ್ ಫಾರೆಸ್ಟ್​ ಡಿಸೀಸ್(KFD) ಅಥವಾ ಕೋತಿ ಜ್ವರ ಎಂದು ಕರೆಯಲ್ಪಡುವ ಈ ರೋಗ ಒಂದೇ ವಾರದಲ್ಲಿ ನಾಲ್ಕು ಬಲಿ ತೆಗೆದುಕೊಂಡಿದ್ದು, ಇದರಿಂದ ಮಲೆನಾಡಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಜನವರಿ 4 ರ ವೇಳೆಗೆ ಜಿಲ್ಲೆಯ ಅರಳಗೋಡು ಗ್ರಾಮದಲ್ಲಿ 15 ಕ್ಕೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದೆ. ಹಾಗೆಯೇ ಸುತ್ತಮುತ್ತಲಿನ 7 ಗ್ರಾಮಗಳಿಗೆ ರೋಗ ಹರಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಮುನ್ನೆಚ್ಚೆರಿಕೆಯಾಗಿ ಸುಮಾರು 2 ಸಾವಿರ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾಗದಲ್ಲಿ ಪ್ರತಿವರ್ಷ ಸುಮಾರು 400ಕ್ಕೂ ಹೆಚ್ಚಿನ ಕೆಎಫ್​ಡಿ ಪ್ರಕರಣಗಳು ಪತ್ತೆಯಾಗುತ್ತವೆ. ಇಂತಹ ಪ್ರಕರಣವನ್ನು ಇಷ್ಟು ವರ್ಷ ಚಿಕಿತ್ಸೆಯಿಂದ ಗುಣಪಡಿಸಲಾಗುತ್ತಿತ್ತು. ಈಗಾಗಲೇ 75 ಅಧಿಕ ಮಂದಿ ರಕ್ತವನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 15 ಕ್ಕೂ ಹೆಚ್ಚಿನ ಮಂದಿಯಲ್ಲಿ ಮಹಾಮಾರಿಯ ಗಂಭೀರ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸೇವಾ ಇಲಾಖೆಯ ನಿರ್ದೇಶಕ ಡಾ. ಪ್ರಭಾಕರ್​ ತಿಳಿಸಿದ್ದಾರೆ.

ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯು ಗಂಭೀರ ಪಡೆಯುತ್ತಿದ್ದು, ಇದರಿಂದ ಹಳ್ಳಿಯ ಜನರು ಕೂಡ ಭಯಭೀತರಾಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದ್ದು, ಜನರು ಕೂಡ ಇಲಾಖೆಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಸಾವುಗಳ ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚರಗೊಂಡಿರುವ ಆರೋಗ್ಯ ಅಧಿಕಾರಿಗಳು, ಮೊದಲೇ ಈ ಬಗ್ಗೆ ಕ್ರಮ ಕೈಗೊಂಡಿದ್ದರೆ ಅನಾಹುತಗಳನ್ನು ತಪ್ಪಿಸಬಹುದಾಗಿತ್ತು ಎನ್ನುತ್ತಾರೆ ಗ್ರಾಮದ ಶಿವರಾಜ್.

ಜ್ವರ, ವಾಂತಿ, ಅತಿಸಾರ ಮತ್ತು ರಕ್ತಸ್ರಾವ ಈ ಜ್ವರದ ಲಕ್ಷಣಗಳಾಗಿದ್ದು, ಇದನ್ನು ಗುರುತಿಸುವಲ್ಲಿಯು ಆರೋಗ್ಯ ಕೇಂದ್ರಗಳು ವಿಫಲವಾಗುತ್ತಿದೆ. ಒಬ್ಬ ವ್ಯಕ್ತಿಗೆ ಕೋತಿ ಜ್ವರ ಇದೆ ಎಂದು ತಿಳಿಯಲು ರಕ್ತದ ಮಾದರಿಯನ್ನು ಮಣಿಪಾಲ್ ಮತ್ತು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಅಲ್ಲಿಂದ ರಕ್ತದ ಪರೀಕ್ಷಾ ವರದಿ ಬರಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದ್ದು, ಇದರಿಂದ ಸೂಕ್ತ ಚಿಕಿತ್ಸೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಗರ್​ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್​ನಲ್ಲಿ ಮೊದಲ ಬಲಿ:

ಡಿಸೆಂಬರ್​ ತಿಂಗಳ ಆರಂಭದಲ್ಲೇ ಕೆಎಫ್​ಡಿ ಮಹಾಮಾರಿಗೆ ಮೊದಲ ಬಲಿಯಾಗಿತ್ತು. ಈ ವೇಳೆ ಎಚ್ಚೆತ್ತ ಅರಣ್ಯ ಅಧಿಕಾರಿಗಳು ನವೆಂಬರ್​ನಲ್ಲಿ ಶರಾವತಿಯ ಹಸಿರುಮಾಕಿಯಲ್ಲಿ 50 ಕ್ಕೂ ಹೆಚ್ಚಿನ ಮಂಗಗಳು ಸಾವಿಗೀಡಾಗಿದೆ ಎಂಬುದನ್ನು ತಿಳಿಸಿದ್ದರು. ಅಲ್ಲದೆ ಪ್ರಕರಣ ಗಂಭೀರತೆಯನ್ನು ಪರಿಗಣಿಸಿ ಪ್ರವಾಸಿಗರು ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಪ್ರವೇಶಿಸುವುದು ನಿರ್ಬಂಧಿಸಲಾಗಿತ್ತು.

ಮಹಾಮಾರಿಗೆ ಐವರು ಬಲಿ:

ಕೋತಿ ಜ್ವರವೆಂಬ ಈ ಮಹಾಮಾರಿಗೆ ಈಗಾಗಲೇ 5 ಮಂದಿ ಬಲಿಯಾಗಿದ್ದಾರೆ. ಸಾಗರದಲ್ಲಿ ಮೂವರು ಹಾಗೂ ತೀರ್ಥಹಳ್ಳಿಯಲ್ಲಿ ಒಬ್ಬರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್(47), ವಾಟೆಮಕ್ಕಿಯ ಕೃಷ್ಣಪ್ಪ(54) ಕಂಚಿಕಾಯಿ ಮಂಜುನಾಥ್ (24), ಲೋಕರಾಜ್ ಜೈನ್(29) ಹಾಗೂ ತೀರ್ಥಹಳ್ಳಿಯ ಸುಂದರಿ ಎಂಬುವವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ 50 ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

1957 ರಲ್ಲಿ ಮೊದಲ ಪ್ರಕರಣ:

1957 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್​ಡಿ ಅಥವಾ ಮಂಗನ ಕಾಯಿಲೆ ಮೊದಲ ಬಾರಿಗೆ ಪತ್ತೆಯಾಗಿತ್ತು. ಇದೊಂದು ಹರಡುವ ರೋಗವಾಗಿದ್ದು, ಮಂಗಗಳಲ್ಲಿದ್ದ ಉಣ್ಣೆಗಳು ಬಂದು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಸೋಂಕಿನಿಂದ ಮಂಗಗಳು ಸಾಯುತ್ತಿದ್ದರಿಂದ ಇದನ್ನು ಮಂಗನ ಕಾಯಿಲೆ ಅಥವಾ ಕೋತಿ ಜ್ವರ ಎಂದು ಕರೆಯಲಾಗುತ್ತದೆ.

ಜಿಲ್ಲೆಗೆ ಆರೋಗ್ಯ ಸಚಿವರ ಭೇಟಿ:

ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಳೆ ಶಿವಮೊಗ್ಗಕ್ಕೆ ಆರೋಗ್ಯ ಸಚಿವ ಶಿವನಾಂದ್ ಪಾಟೀಲ್ ಭೇಟಿ ನೀಡಲಿದ್ದಾರೆ. ಸಾಗರದ ಸರ್ಕಾರಿ ಆಸ್ಪತ್ರೆ ಹಾಗು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಿದ್ದಾರೆ. ಅಲ್ಲದೆ ಮಂಗನ ಕಾಯಿಲೆಗೆ ತುತ್ತಾಗಿರುವ ಗ್ರಾಮಗಳಿಗೂ ತೆರಳುವ ಸಾಧ್ಯತೆಯಿದೆ ಎನ್ನಲಾಗಿದೆ.

Comments are closed.