ರಾಷ್ಟ್ರೀಯ

ಆನ್​ಲೈನ್ ಶಾಪಿಂಗ್: ಡಿಸ್ಕೌಂಟ್​ ನೀಡುವ ಕಂಪೆನಿಗಳಿಗೆ ನಿಷೇಧ?

Pinterest LinkedIn Tumblr


ಇತ್ತೀಚಿನ ದಿನಗಳಲ್ಲಿ ದೇಶದ ಇ-ಕಾಮರ್ಸ್​ ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಿದ್ದ ಪ್ರಮುಖ ವೆಬ್​ಸೈಟ್​ಗಳೆಂದರೆ ಕ್ಲಬ್​ ಫ್ಯಾಕ್ಟರಿ, ಶೀ-ಇನ್ ಮತ್ತು ಅಲಿ ಎಕ್ಸ್​ಪ್ರೆಸ್. ಇತರೆ ವೆಬ್​ಸೈಟ್​ಗಳಿಗೆ ಹೋಲಿಸಿದರೆ ಈ ಆನ್​ಲೈನ್ ಕಂಪೆನಿಗಳಲ್ಲಿ ಹೆಚ್ಚಿನ ಡಿಸ್ಕೌಂಟ್​ ಸಿಗುತ್ತಿತ್ತು. ಇದರಿಂದಲೇ ಗ್ರಾಹಕರು ಕೂಡ ಈ ವೆಬ್​ಸೈಟ್​ನತ್ತ ಮುಖ ಮಾಡಿದ್ದರು. ಆದರೀಗ ಇಂತಹ ಶಾಪಿಂಗ್​ ವೆಬ್​ಸೈಟ್​ಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ.

ಚೀನಾ ಮೂಲದ ಕಂಪೆನಿಗಳಾಗಿರುವುದರಿಂದ ಇಲ್ಲಿ ಉತ್ಪನ್ನಗಳೂ ಕೂಡ ಕಡಿಮೆ ಬೆಲೆ ಸಿಗುತ್ತಿತ್ತು. ಆಫರ್​ ಮೂಲಕವೇ ಖರೀದಿ ಬಯಸುವ ಗ್ರಾಹಕರನ್ನು ಸೆಳೆದಿದ್ದ ಈ ಶಾಪಿಂಗ್ ಸೈಟ್​ಗಳು ಫ್ಲಿಪ್​ಕಾರ್ಟ್​, ಅಮೇಜಾನ್, ಜಬಾಂಗ್​ನಂತಹ ಅಂತರಾಷ್ಟ್ರೀಯ ವೆಬ್​ಸೈಟ್​ಗಳಿಗೆ ಪ್ರಬಲ ಪೈಪೋಟಿ ನೀಡಿತ್ತು.

ಇದರಿಂದ ದೇಸಿಯ ಕಂಪೆನಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ಚೀನಿ ಶಾಪಿಂಗ್​ ವೆಬ್​ಸೈಟ್​ಗಳ ಶಿಪ್​ಮೆಂಟ್​ಗೆ ಬ್ರೇಕ್ ಹಾಕಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಸರ್ಕಾರದ ಹೊಸ ನಿಯಮದಿಂದ ಮುಂಬರುವ ದಿನಗಳಲ್ಲಿ ರಿಯಾಯಿತಿ ಮತ್ತು ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸುವ ಅವಕಾಶ ಗ್ರಾಹಕರ ಕೈ ತಪ್ಪಲಿದೆ.

ಮುಖ್ಯ ಕಾರಣವೇನು?

ಚೀನಾದ ಇ-ಕಾಮರ್ಸ್​ ಕಂಪೆನಿಗಳು ಕಸ್ಟಮ್ಸ್​ ಡ್ಯೂಟಿ ತೆರಿಗೆಗಳನ್ನು ಪಾವತಿಸದೇ ತನ್ನ ಉತ್ಪನ್ನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ವಿದೇಶದಿಂದ ಬರುವ 5 ಸಾವಿರದವೆರಗಿನ ಉಡುಗೊರೆಗಳಿಗೆ ಕಸ್ಟಮ್ಸ್​ ಡ್ಯೂಟಿ ವಿಧಿಸಲಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪೆನಿಗಳು ದೇಶದ ಗ್ರಾಹಕರಿಗೆ ಕೊರಿಯರ್​ನ್ನು ಗಿಫ್ಟ್ ಎಂದು ಕಳುಹಿಸುತ್ತಿದೆ. ಈ ಮೂಲಕ ತೆರಿಗೆ ನಿಯಮವನ್ನು ಕಂಪೆನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೆ ಫ್ಲಿಪ್​ಕಾರ್ಟ್​, ಅಮೇಜಾನ್​​ನಂತಹ ದೈತ್ಯ ಕಂಪೆನಿಗಳಿಗೆ ವೇದಿಕೆ ಒದಗಿಸಲೆಂದೇ ಸರ್ಕಾರ ಕೂಡ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಚೀನಿ ವೆಬ್​ಸೈಟ್​ಗಳು ಭಾರತದಲ್ಲಿರುವ ಇ-ಕಾಮರ್ಸ್​ ಸಂಸ್ಥೆಗಳಿಗಿಂತ ಶೇ. 40 ರಿಂದ ಶೇ.60 ರಷ್ಟು ರಿಯಾಯಿತಿಯಲ್ಲಿ ಪ್ರೊಡೆಕ್ಟ್​ಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ದೊಡ್ಡ ಕಂಪೆನಿಗಳ ಮಾರಾಟಕ್ಕೆ ಭಾರೀ ಹೊಡೆತ ಬೀಳುತ್ತಿದೆ ಎಂಬ ಕೂಗುಗಳು ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಇ-ಕಾಮರ್ಸ್​ ಕಂಪೆನಿಗಳು ಚೀನಿ ಶಾಪಿಂಗ್ ಸೈಟ್​ಗಳ ಮೇಲೆ ನಿಯಂತ್ರಣ ಹೇರಿ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಸರ್ಕಾರದ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ. ಹೊಸ ನಿಯಮವನ್ನು ಚೀನಿ ಕಂಪೆನಿಗಳು ಪಾಲಿಸಿದರೆ ಮಾರಾಟಕ್ಕೆ ಅವಕಾಶ ಸಿಗಲಿದೆ. ಇದರಿಂದ ಮುಂಬರುವ ದಿನಗಳಲ್ಲಿ ಚೀನಿ ಉತ್ಪನ್ನಗಳ ಬೆಲೆ ದುಬಾರಿಯಾಗುವ ಸಾಧ್ಯತೆ ಹೆಚ್ಚಿದೆ.

Comments are closed.