ಕರ್ನಾಟಕ

2018: ದೇಶವನ್ನೇ ಬೆಚ್ಚಿ ಬೀಳಿಸಿದ ‘ಮಾರ್ಯಾದಾ ಹತ್ಯೆಗಳು’

Pinterest LinkedIn Tumblr


ಬೆಂಗಳೂರು: ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಕೆಲವರು ಹರೆಯದಲ್ಲಿ ಪ್ರೀತಿಯ ಆಕರ್ಷಣೆಗೆ ಬಿದ್ದು, ಜಾತಿ, ಮತ, ಅಂತಸ್ತು ಎಲ್ಲಾ ಅಡೆತಡೆಗಳನ್ನು ಮೀರಿ ಸುಖವಾಗಿ ಬದುಕಬೇಕೆಂಬುದು ಮದುವೆಯಾಗುತ್ತಾರೆ.
ಆದರೆ, ಅವರು ಸುಖವಾಗಿ ಬದುಕು ಸಾಗಿಸಲು ಅವರ ಕುಟುಂಬದವರೇ ಬಿಡುವುದಿಲ್ಲ. ಮಾರ್ಯಾದೆ ಹೆಸರಿನಲ್ಲಿ ಅಮಾನುಷವಾಗಿ ಹತ್ಯೆ ಮಾಡುತ್ತಾರೆ. ಇಂತಹ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಮರುಕಳಿಸುತ್ತಲೇ ಇವೆ. 2018ರಲ್ಲಿ ನಡೆದಿರುವ ಮಾರ್ಯಾದಾ ಹತ್ಯೆಗಳ ಬಗ್ಗೆ ವಿಶೇಷ ವರದಿ ಇಲ್ಲಿದೆ.
ತಮಿಳುನಾಡು ದಂಪತಿ ಹತ್ಯೆ
ಕುಟುಂಬಸ್ಥರ ವಿರೋಧದ ನಡುವೆಯೂ ಜಾತಿ ಬೇರೆಯಾಗಿದ್ದರೂ ಪ್ರೀತಿಸಿ ಮದುವೆಯಾಗಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಂದೀಶ್ ಮತ್ತು ಸ್ವಾತಿ ಎಂಬವರನ್ನು ಹತ್ಯೆ ಮಾಡಿ ಮಂಡ್ಯ ಜಿಲ್ಲೆ ಮಳವಳಿ ತಾಲೂಕಿನ ಶಿವನಸಮುದ್ರದಲ್ಲಿ ಮೃತದೇಹವನ್ನು ಎಸೆಯಲಾಗಿತ್ತು.
25 ವರ್ಷದ ದಲಿತ ಯುವಕ ನಂದೀಶ್ ನನ್ನು ಮದುವೆಯಾದ ಹಿನ್ನೆಲೆಯಲ್ಲಿ ಸ್ವಾತಿಯ ತಂದೆಯೇ ತನ್ನ ಸಹೋದರರೊಂದಿಗೆ ಸೇರಿ ಹತ್ಯೆ ಮಾಡಿ, ಕಾವೇರಿ ನದಿಗೆ ಎಸೆಯಲಾಗಿತ್ತು. ಮೃತ ಯುವಕ ಧರಿಸಿದ ಟೀ ಶರ್ಟ್ ನಿಂದ ಇದು ಮಾರ್ಯಾದ ಹತ್ಯೆ ಎಂಬುದನ್ನು ಪೊಲೀಸರು ತನಿಖೆ ವೇಳೆ ಕಂಡುಹಿಡಿದ್ದರು. ನಂತರ ಆರೋಪಿಗಳನ್ನು ಕಂಬಿ ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.
ಇದಾದ ಕೆಲ ದಿನಗಳ ಬಳಿಕ ಬೆಂಗಳೂರಿನ ಕ್ಯಾಬ್ ಚಾಲಕ ಹರೀಶ್ ಎಂಬಾತ ಮೇಲ್ಜಾತಿಯ ಹುಡುಗಿ ಮೀನಾಕ್ಷಿಯನ್ನು ವಿವಾಹವಾಗಿದ್ದರಿಂದ ಆಕೆಯ ಕುಟುಂಬದವರಿಂದ ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದ. ಇದರಿಂದ ಮಾನಸಿಕ ಖಿನ್ನತೆಕ್ಕೊಳಗಾಗಿದ್ದ ಮೀನಾಕ್ಷಿ ಕೂಡಾ ಕೆಲ ದಿನಗಳ ಬಳಿಕ ನೇಣಿಗೆ ಶರಣಾಗಿದ್ದಳು.
ಕೇರಳದ ಕೊಟ್ಟಾಯಂನಲ್ಲಿ ಯುವಕನ ಹತ್ಯೆ
ಕೊಟ್ಟಾಯಂನಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕೇವಿನ್ ಜೋಸೆಪ್ ಎಂಬಾತ ಮೇ 24 ರಂದು ಯುವತಿಯ ಕುಟುಂಬಸ್ಥರ ವಿರೋಧದ ನಡುವೆಯೂ ನೀನು ಚಾಕೊ ಜೊತೆಗೆ ವಿವಾಹವಾಗಿದ್ದರು. ಆದರೆ, ಕೆಲ ದಿನಗಳ ಬಳಿಕ ಆತ ಕೊಲ್ಲಂ ಜಲಾಶಯದ ಬಳಿ ಶವವಾಗಿ ಪತ್ತೆಯಾಗಿದ್ದ. ಆತನ ದೇಹದ ಮೇಲೆ ಹಲ್ಲೆಯ ಗುರುತುಗಳು ಕಂಡುಬಂದಿದ್ದರಿಂದ ಇದು ಮಾರ್ಯಾದ ಹತ್ಯೆ ಎಂದು ಹೇಳಲಾಗಿತ್ತು.
ವಿಜಯವಾಡ: ಮಗಳನ್ನೇ ನೇಣಿಗೇರಿಸಿದ ತಂದೆ
ವಿಜಯವಾಡದಲ್ಲಿ ತೀವ್ರ ವಿರೋಧದ ನಡುವೆಯೂ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ 20 ವರ್ಷದ ಮೇಲ್ಜಾತಿಯ ಇಂದ್ರಾಜಾ ಎಂಬ ಯುವತಿಯನ್ನು ಆಕೆಯ ತಂದೆಯೇ ನೇಣು ಹಾಕಿ, ನಂತರ ಮುಂಜಾನೆ ಅಂತ್ಯಸಂಸ್ಕಾರ ಮಾಡಿದ್ದರು
ಸಿಸಿಟಿವಿಯಲ್ಲಿ ಮಾರ್ಯಾದಾ ಹತ್ಯೆ ಸೆರೆ
ದಲಿತ ಯುವಕ ಪ್ರಣಯ್ ಪ್ರೀತಿಸಿ ವಿವಾಹವಾಗಿದ್ದ ಅಮೃತ ವೈದ್ಯಕೀಯ ತಪಾಸಣೆ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ತುಂಬು ಗರ್ಭೀಣಿಯಾದ ಆಕೆಯ ಮುಂದೆ ಹಾಡಹಾಗಲೇ ಪ್ರಣಯ್ ನನ್ನು ಹತ್ಯೆ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಈ ಹತ್ಯೆ ಸಿಸಿಟಿವಿಯಲ್ಲಿ ಸೆರೆಯಾಗುವ ಮೂಲಕ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.
ನಂತರ ತನಿಖೆ ಸಂದರ್ಭದಲ್ಲಿ ಅಮೃತಾಳ ತಂದೆಯೇ ಈ ಕೊಲೆಯ ಸೂತ್ರದಾರ ಎಂಬುದು ಕಂಡುಬಂದಿತ್ತು. ಪ್ರಣಯ್ ಜಾತಿ ಬೇರೆಯಾಗಿದ್ದರಿಂದ ಆತನನ್ನು ಕೊಲೆ ಮಾಡಿದ್ದಾಗಿ ಅಮೃತಾಳ ತಂದೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ.
ಅಪ್ರಾಪ್ತ ಬಾಲಕಿ ಪ್ರೀತಿಸುತ್ತಿದ್ದ ಯುವಕನ ಹತ್ಯೆ
ಪ್ರತ್ಯೇಕ ಸಮುದಾಯಕ್ಕೆ ಸೇರಿದ 23 ವರ್ಷದ ಗಾಡಿ ಕುಮಾರ್ ಎಂಬಾತ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ,. 18 ವರ್ಷ ಆದ ನಂತರ ಮದುವೆ ಮಾಡಿಕೊಡುವುದಾಗಿ ಬಾಲಕಿಯ ಪೋಷಕರು ಹೇಳಿದ್ದರು. ಆದರೆ, ಕೆಲ ದಿನಗಳ ಬಳಿಕ ಗಾಡಿ ಕುಮಾರ ಶವವಾಗಿ ಪತ್ತೆಯಾಗಿದ್ದ.
ಹಲ್ಲೆಯಿಂದಾಗಿ ಆತ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರ ಮುಂದೆ ತಾನೇ ಕೊಲೆ ಮಾಡಿರುವುದಾಗಿ ಹುಡುಗಿ ತಂದೆ ತಪ್ಪೊಪ್ಪಿಕೊಂಡಿದ್ದ.
ಚಂಡೀಘಡದಲ್ಲಿ ತಂದೆಯಿಂದಲೇ ಅಪ್ರಾಪ್ತ ಬಾಲಕಿ ಹತ್ಯೆ
ಚಂಡೀಘಡದಲ್ಲಿ ಅಕ್ಟೋಬರ್ ತಿಂಗಳಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಆದೇ ಗ್ರಾಮದ 19 ವರ್ಷದ ಯುವಕನ ಜೊತೆಗೆ ಪ್ರೀತಿಗೆ ಬಿದಿದ್ದರಿಂದ ಆಕೆಯ ತಂದೆಯೇ ಹತ್ಯೆ ಮಾಡಿರುವ ಸಂಗತಿ ತಿಳಿದುಬಂದಿತ್ತು.
ಇದಕ್ಕೂ ಮುಂದೆ ಆ ಯುವಕನ ಮೇಲೆ ಅತ್ಯಾಚಾರ ಕೇಸ್ ಕೂಡಾ ದಾಖಲಿಸಲಾಗಿತ್ತು. ಈ ಮಾರ್ಯಾದ ಹತ್ಯೆ ಪ್ರಕರಣ ಸಂಬಂಧ ಮೃತಪಟ್ಟ ಹುಡುಗಿಯ ಕುಟುಂಬದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.